
ಲಾಸ್ ಏಂಜಲೀಸ್: ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲೀಸ್‌ನಲ್ಲಿ ಭೀಕರ ಕಾಡ್ಗಿಚ್ಚು ಸಂಭವಿಸಿದ್ದು, ಡ್ಯಾನ್ಸರ್ ಹಾಗೂ ನಟಿ ನೋರಾ ಫತೇಹಿ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಬೆಂಕಿಯ ಕೆನ್ನಾಲಿಗೆಗೆ ಬೆಚ್ಚಿ ಬಿದ್ದಿದ್ದಾರೆ.
ಭೀಕರ ಕಾಡ್ಗಿಚ್ಚಿನ ಹಿನ್ನೆಲೆಯಲ್ಲಿ ನಾನಿರುವ ಸ್ಥಳವನ್ನು ಖಾಲಿ ಮಾಡವಂತೆ ನನಗೆ ಮತ್ತು ನನ್ನ ತಂಡಕ್ಕೆ ಸೂಚಿಸಲಾಗಿದೆ ಎಂದು ನೋರಾ ಫತೇಹಿ ಹೇಳಿದ್ದಾರೆ.
ಹಲವಾರು ಹಾಲಿವುಡ್ ತಾರೆಗಳು ನೆಲೆಸಿರುವ ಲಾಸ್ ಏಂಜಲೀಸ್ ನಗರದಿಂದ ಹೊರಡುವ ಕೆಲವೇ ನಿಮಿಷಗಳ ಮೊದಲು, ಬುಧವಾರ ರಾತ್ರಿ ಫತೇಹಿ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
"ನಾನು ಲಾಸ್ ಏಂಜಲೀಸ್ ನಲ್ಲಿದ್ದೇನೆ. ಇಲ್ಲಿ ಭೀಕರ ಕಾಡ್ಗಿಚ್ಚು ವ್ಯಾಪಿಸಿದೆ. ನಾನು ಈ ರೀತಿಯ ಕಾಡ್ಗಿಚ್ಚನ್ನು ಎಂದೂ ನೋಡಿಲ್ಲ. ಐದು ನಿಮಿಷಗಳ ಹಿಂದೆ ನಮಗೆ ಸ್ಥಳಾಂತರಿಸುವ ಆದೇಶ ಬಂದಿದೆ. ಆದ್ದರಿಂದ ನಾನು ನನ್ನ ಎಲ್ಲಾ ವಸ್ತುಗಳನ್ನು ಬೇಗನೆ ಪ್ಯಾಕ್ ಮಾಡಿದ್ದೇನೆ ಮತ್ತು ನಾನು ಇಲ್ಲಿಂದ ತೆರಳುತ್ತಿದ್ದೇನೆ" ಎಂದು ನೋರಾ ಹೇಳಿದ್ದಾರೆ.
ನಾನು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದು, ಅಲ್ಲಿಯೇ ತಂಗುವ ಯೋಜನೆ ಇದೆ. ಆದಷ್ಟು ಬೇಗ ವಿಮಾನದ ಟಿಕೆಟ್ ಬುಕ್ ಮಾಡಿಕೊಂಡು ಹಿಂದಿರುತ್ತೇನೆ ಎಂದು ನೋರಾ ಫತೇಹಿ ತಿಳಿಸಿದ್ದಾರೆ.
ನಾನು ಸುರಕ್ಷಿತವಾಗಿದ್ದೇನೆ. ಲಾಸ್ ಏಂಜಲೀಸ್ ಜನ ಸುರಕ್ಷಿತವಾಗಿದ್ದಾರೆ ಎಂದು ಭಾವಿಸುತ್ತೇನೆ" ಎಂದು ನೋರಾ ವಿಡಿಯೋದಲ್ಲಿ ಹೇಳಿದ್ದಾರೆ.
ಇದಕ್ಕೂ ಮುನ್ನ, ನಟಿ-ನಿರ್ಮಾಪಕಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಅವರು ಸಹ ಲಾಸ್ ಏಂಜಲೀಸ್ ತಮ್ಮ ನಿವಾಸದಿಂದ ಸ್ವಲ್ಪ ದೂರದಲ್ಲಿರುವ ಬೆಟ್ಟಗಳಿಗೆ ಕಾಡ್ಗಿಚ್ಚು ವ್ಯಾಪಿಸಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.
Advertisement