
ಮುಂಬೈ: ಆಘಾತಕಾರಿ ಘಟನೆಯಲ್ಲಿ ಇಂದು ಗುರುವಾರ ನಸುಕಿನ ಜಾವ ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲೆ ತೀವ್ರ ಹಲ್ಲೆ ಯತ್ನವಾಗಿದ್ದು, ನಟನಿಗೆ ಗಾಯಗಳಾಗಿ ಮುಂಬೈಯ ಲೀಲಾವತಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಘಟನೆಯ ನಂತರ ಮುಂಬೈ ಅಪರಾಧ ವಿಭಾಗ ಪೊಲೀಸರು ಬಾಂದ್ರಾದಲ್ಲಿರುವ ಸೈಫ್ ಆಲಿ ಖಾನ್ ನಿವಾಸಕ್ಕೆ ಆಗಮಿಸಿ ತೀವ್ರ ತಪಾಸಣೆ ನಡೆಸಿದ್ದಾರೆ. ಬಾಂದ್ರಾ ಪ್ರದೇಶದಲ್ಲಿರುವ ಸತ್ಗುರು ಶರನ್ ಸಂಕೀರ್ಣದಲ್ಲಿರುವ ಸೈಫ್ ನಿವಾಸದಲ್ಲಿ ಇಂದು ನಸುಕಿನ ಜಾವ 2.30ರ ಹೊತ್ತಿನಲ್ಲಿ ದಾಳಿ ನಡೆದಿದೆ. ಮನೆಯೊಳಗೆ ನುಗ್ಗಿದ ನುಸುಳುಕೋರರು ಆರಂಭದಲ್ಲಿ ಸೈಫ್ ಆಲಿ ಖಾನ್ ಅವರ ಮನೆಯ ಕೆಲಸದವರ ಜೊತೆ ಜಗಳಕ್ಕಿಳಿದಿದ್ದರು.
ಈ ವೇಳೆ ಪರಿಸ್ಥಿತಿ ತಿಳಿಗೊಳಿಸಲು ಸೈಫ್ ಆಲಿ ಖಾನ್ ಮಧ್ಯೆ ಪ್ರವೇಶಿಸಿದಾಗ ಒಳನುಸುಳುಕೋರರು ಮತ್ತಷ್ಟು ಆಕ್ರೋಶಗೊಂಡು ಚಾಕುವಿನಿಂದ ಇರಿದರು. ಮನೆಯೊಳಗೆ ಪ್ರವೇಶಿಸಿ ದರೋಡೆ ನಡೆಸಲು ಯತ್ನಿಸಿದ ವೇಳೆ ಈ ಘಟನೆ ಸಂಭವಿಸಿದೆ ಎಂದು ನಟ ಸೈಫ್ ಆಲಿ ಖಾನ್ ಅವರ ಸಾರ್ವಜನಿಕ ಸಂಪರ್ಕ ತಂಡ ದೃಢಪಡಿಸಿದೆ.
ತನಿಖೆ ಆರಂಭಿಸಿದ ಪೊಲೀಸರು: ಘಟನೆ ಬಗ್ಗೆ ಮುಂಬೈ ಅಪರಾಧ ವಿಭಾಗ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ. ನಟನಿಗೆ ಗಾಯಗಳಾಗಿದ್ದು ವೈದ್ಯಕೀಯ ಚಿಕಿತ್ಸೆ ಮುಂದುವರಿದಿದೆ. ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಮುಂಬೈ ಉಪ ಆಯುಕ್ತ ದೀಕ್ಷಿತ್ ಗೆದಮ್ ತಿಳಿಸಿದ್ದಾರೆ.
ಶಂಕಿತ ಮೂವರ ಬಂಧನ: ನಟನ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು ಯಾರೂ ಮನೆಯೊಳಗೆ ಹೋದ ಕುರುಹುಗಳು ಪತ್ತೆಯಾಗಿಲ್ಲ. ಸೆಕ್ಯುರಿಟಿ ಸಿಬ್ಬಂದಿ ಸೇರಿ ಮೂವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸೈಫ್ ಗೆ ಗಂಭೀರ ಗಾಯ: ನಟನಿಗೆ ಆರು ಬಾರಿ ಚಾಕುವಿನಿಂದ ಇರಿತಗಳಾಗಿದ್ದು, ಅವುಗಳಲ್ಲಿ ಎರಡು ಆಳವಾಗಿವೆ ಎಂದು ಲೀಲಾವತಿ ಆಸ್ಪತ್ರೆಯ ಡಾ. ನೀರಜ್ ಉತ್ತಮಣಿ ಹೇಳಿದ್ದಾರೆ.
ಸೈಫ್ ಆಲಿ ಖಾನ್ ಅವರಿಗೆ ಆರು ಇರಿತದ ಗಾಯಗಳಿದ್ದು, ಕುತ್ತಿಗೆ ಮತ್ತು ಬೆನ್ನುಮೂಳೆಯಲ್ಲಿ ಎರಡು ಆಳವಾಗಿವೆ. ಇದರಲ್ಲಿ ಒಂದು ಬೆನ್ನುಮೂಳೆಯ ಹತ್ತಿರದಲ್ಲಿದೆ. ನರಶಸ್ತ್ರಚಿಕಿತ್ಸಕ ಡಾ. ನಿತಿನ್ ಡಾಂಗೆ, ಕಾಸ್ಮೆಟಿಕ್ ಸರ್ಜನ್ ಡಾ. ಲೀನಾ ಜೈನ್ ಮತ್ತು ಅರಿವಳಿಕೆ ತಜ್ಞ ಡಾ. ನಿಶಾ ಗಾಂಧಿ ನೇತೃತ್ವದ ವೈದ್ಯರ ತಂಡವು ಅವರಿಗೆ ಶಸ್ತ್ರಚಿಕಿತ್ಸೆ ನಡೆಸುತ್ತಿದೆ. ಸೈಫ್ ಅಪಾಯದಿಂದ ಪಾರಾಗಿದ್ದಾರೆ. ನಾವು ಒಂದು ಗಂಟೆಯಲ್ಲಿ ವರದಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಕುಟುಂಬಸ್ಥರು ಹೇಳಿಕೆ ಬಿಡುಗಡೆ: ಇಂದು ನಸುಕಿನ ಜಾವ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅವರ ಮನೆಯಲ್ಲಿ ಕಳ್ಳತನ ಯತ್ನ ನಡೆದಿದೆ. ಸೈಫ್ ಅವರ ತೋಳಿನ ಮೇಲೆ ಗಾಯವಾಗಿದ್ದು, ಅದಕ್ಕಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬದ ಉಳಿದವರು ಚೆನ್ನಾಗಿದ್ದಾರೆ. ಪೊಲೀಸರು ಈಗಾಗಲೇ ಸೂಕ್ತ ತನಿಖೆ ನಡೆಸುತ್ತಿರುವುದರಿಂದ ಮಾಧ್ಯಮಗಳು ಮತ್ತು ಅಭಿಮಾನಿಗಳು ತಾಳ್ಮೆಯಿಂದಿರಿ ಮತ್ತು ಹೆಚ್ಚಿನ ಊಹಾಪೋಹಗಳನ್ನು ಮಾಡದಂತೆ ನಾವು ವಿನಂತಿಸುತ್ತೇವೆ. ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು ಎಂದು ಕುಟುಂಬಸ್ಥರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ವೃತ್ತಿಭಾಗದಲ್ಲಿ ನೋಡುವುದಾದರೆ 54 ವರ್ಷದ ಸೈಫ್ ಆಲಿ ಖಾನ್ ಇತ್ತೀಚೆಗೆ ದೇವರ ಭಾಗ 1ರಲ್ಲಿ ಕಾಣಿಸಿಕೊಂಡಿದ್ದರು, ಅದು ಸೆಪ್ಟೆಂಬರ್ 2024ರಲ್ಲಿ ಬಿಡುಗಡೆಯಾಗಿತ್ತು. ಅದರಲ್ಲಿ ಜೂನಿಯರ್ ಎನ್ ಟಿಆರ್ ಮತ್ತು ಜಾಹ್ನವಿ ಕಪೂರ್ ಅಭಿನಯಿಸಿದ್ದರು.
Advertisement