
ಬಾಲಿವುಡ್ ನ ಬಹುನಿರೀಕ್ಷಿತ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಿನ್ನೆ ಭಾನುವಾರ ಮುಂಬೈಯಲ್ಲಿ ನೆರವೇರಿತು. ಈ ಚಿತ್ರದಲ್ಲಿ 59 ವರ್ಷದ ಸಲ್ಮಾನ್ ಖಾನ್ ಮತ್ತು 28 ವರ್ಷದ ರಶ್ಮಿಕಾ ಮಂದಣ್ಣ ಅವರ ಮಧ್ಯೆ ಇರುವ ವಯಸ್ಸಿನ ಅಂತರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆಗಿತ್ತು. ಇದಕ್ಕೆ ಸಲ್ಮಾನ್ ಖಾನ್ ಅವರೇ ಪ್ರತಿಕ್ರಿಯೆ ನೀಡಿದ್ದು, ರಶ್ಮಿಕಾಗೆ ಇದರಿಂದ ಯಾವ ಸಮಸ್ಯೆ ಇಲ್ಲದಿರುವಾಗ ಬೇರೆಯವರು ಏಕೆ ತಲೆಕೆಡಿಸಿಕೊಳ್ಳಬೇಕು ಎಂದು ಕೇಳಿದ್ದಾರೆ.
ಟೀಕಾಕಾರರಿಗೆ ತಿರುಗೇಟು ನೀಡಿದ ಸಲ್ಮಾನ್ ಖಾನ್
ಮುಂಬೈನಲ್ಲಿ ನಡೆದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ರಶ್ಮಿಕಾ ಸೇರಿದಂತೆ ಚಿತ್ರದ ತಂಡದೊಂದಿಗೆ ಸಲ್ಮಾನ್ ಖಾನ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಸಂಭಾಷಣೆ ಸಮಯದಲ್ಲಿ, ತಮಗಿಂತ 31 ವರ್ಷ ಚಿಕ್ಕವರಾದ ರಶ್ಮಿಕಾ ಜೊತೆ ಅಭಿನಯಿಸಿರುವ ಬಗ್ಗೆ ಕೇಳಿಬಂದ ಟೀಕೆ ಬಗ್ಗೆ ಪ್ರಶ್ನೆ ಬಂತು.
ಚಿತ್ರದಲ್ಲಿ ನೀವು ಚೆನ್ನಾಗಿ ಕಾಣುತ್ತಿದ್ದೀರಿ ಎಂದು ನಿರೂಪಕರು ಹೊಗಳಿದಾಗ ಸಲ್ಮಾನ್ ಖಾನ್, ಈ ಸಮಯದಲ್ಲಿ ವಿಚಾರಗಳು ಎಷ್ಟು ಗೊಂದಲಮಯವಾಗಿವೆಯೆಂದರೆ ನಾನು ಆರೇಳು ದಿನ ರಾತ್ರಿ ನಿದ್ದೆಯೇ ಮಾಡಲು ಸಾಧ್ಯವಾಗುವುದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಜನ ನನ್ನ ಬೆನ್ನು ಬಿದ್ದಿದ್ದಾರೆ. ನಾನಿನ್ನೂ ಚಲಾವಣೆಯಲ್ಲಿದ್ದೇನೆ ಎಂದು ಜನರಿಗೆ ತೋರಿಸಬೇಕಾಗಿದೆ ಎಂದರು.
ತಮ್ಮ ಮಾತು ಮುಂದುವರಿಸುತ್ತಾ ಸಲ್ಮಾನ್ ಖಾನ್, ಈ ಚಿತ್ರದಲ್ಲಿ ನನ್ನ ಮತ್ತು ನಾಯಕಿಯ ನಡುವೆ 31 ವರ್ಷಗಳ ವಯಸ್ಸಿನ ಅಂತರವಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನ ಹೇಳುತ್ತಾರೆ. ಈ ವಿಚಾರದಲ್ಲಿ ನಾಯಕಿಗೆ ಯಾವುದೇ ತೊಂದರೆಯಿಲ್ಲದಿರುವಾಗ ರಶ್ಮಿಕಾ ತಂದೆಗೆ ಸಮಸ್ಯೆಯಿಲ್ಲದಿರುವಾಗ, ನಿಮಗೇಕೆ ತಲೆಬಿಸಿ, ರಶ್ಮಿಕಾಗೆ ಮದುವೆಯಾಗಿ ಮಗಳು ಹುಟ್ಟಿದರೆ ಬೇಕಾದರೆ ಆಕೆ ಜೊತೆ ಕೂಡ ನಟಿಸುತ್ತೇನೆ, ಆಗ ರಶ್ಮಿಕಾ ಅನುಮತಿ ಕೊಡಬೇಕಾಗಬಹುದು ಎಂದು ಎಂದು ರಶ್ಮಿಕಾ ಮುಖ ನೋಡಿ ನಗುತ್ತಾ ಹೇಳಿದರು.
ಸಲ್ಮಾನ್ ಹೀಗೆ ಹೇಳುತ್ತಿದ್ದಂತೆ ರಶ್ಮಿಕಾ ನಾಚಿ ನಕ್ಕರು. ಸಲ್ಮಾನ್ ಖಾನ್ ಅವರ ಸಿಕಂದರ್ ಮಾರ್ಚ್ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಗಜಿನಿ, ತುಪ್ಪಕ್ಕಿ, ಹಾಲಿಡೇ: ಎ ಸೋಲ್ಜರ್ ಈಸ್ ನೆವರ್ ಆಫ್ ಡ್ಯೂಟಿ ಮತ್ತು ಸರ್ಕಾರ್‌ನಂತಹ ತಮಿಳು ಮತ್ತು ಹಿಂದಿ ಚಿತ್ರಗಳನ್ನು ನಿರ್ದೇಶಿಸಿ ಹೆಸರುವಾಸಿಯಾದ ಎಆರ್ ಮುರುಗದಾಸ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಕೂಡ ನಟಿಸಿದ್ದಾರೆ.ಚಿತ್ರವನ್ನು ಸಾಜಿದ್ ನಾಡಿಯಾಡ್‌ವಾಲಾ ಅವರ ಬ್ಯಾನರ್, ನಾಡಿಯಾಡ್‌ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್ ನಡಿ ನಿರ್ಮಿಸಲಾಗಿದೆ.
Advertisement