
ನವದೆಹಲಿ: ತಮ್ಮ ಪ್ರಚಾರ ಮತ್ತು ವ್ಯಕ್ತಿತ್ವದ ಹಕ್ಕುಗಳನ್ನು ರಕ್ಷಿಸುವಂತೆ ಕೋರಿ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಬುಧವಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ವೆಬ್‌ಸೈಟ್‌ಗಳು ಮತ್ತು ಆನ್‌ಲೈನ್ ವೇದಿಕೆಗಳು ತಮ್ಮ ಚಿತ್ರ, ಹೋಲಿಕೆ ಇರುವ ಚಿತ್ರ, ವ್ಯಕ್ತಿತ್ವ ಮತ್ತು ಲೈಂಗಿಕತೆಗೆ ಸಂಬಂಧಿಸಿದ ಕಂಟೆಂಟ್‌ಗಳೂ ಒಳಗೊಂಡಂತೆ ನಕಲಿ ವಿಡಿಯೊಗಳನ್ನು ಬಳಸದಂತೆ ನಿರ್ಬಂಧ ಹೇರುವಂತೆ ಒತ್ತಾಯಿಸಿದ್ದಾರೆ.
ಈ ನಡುವೆ ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ಪೀಠವು ಬಚ್ಚನ್ ಪರ ವಕೀಲರಿಗೆ ಕೆಲ ಪ್ರಶ್ನೆಗಳನ್ನು ಹಾಕಿದ್ದು, ಅವುಗಳಿಗೆ ಉತ್ತರಿಸುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಮಧ್ಯಾಹ್ನ 2:30ಕ್ಕೆ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಪ್ರತಿವಾದಿಗಳು ನಟನ ಕೃತಕ ಬುದ್ಧಿಮತ್ತೆ ಆಧಾರಿತ ವಿಡಿಯೊಗಳು, ಸಹಿ ಮಾಡಿದ ನಕಲಿ ಫೋಟೊಗಳು ಹಾಗೂ ಲೈಂಗಿಕತೆಗೆ ಸಂಬಂಧಿಸಿದ ಕಂಟೆಂಟ್‌ಗಳನ್ನು ರಚಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅಭಿಷೇಕ್ ಬಚ್ಚನ್ ಅವರು ‘ಬಾಲಿವುಡ್ ಟಿ-ಶಾಪ್’ ಹೆಸರಿನ ವೆಬ್ಸೈಟ್ ಒಂದರ ಮೇಲೆ ದಾವೆ ಹೂಡಿದ್ದು ತಮ್ಮ ಅನುಮತಿ ಇಲ್ಲದೆ, ತಮ್ಮ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಟಿ-ಶರ್ಟ್, ಕಾಫಿ ಕಪ್ಗಳ ಮೇಲೆ ಇನ್ನೂ ಹಲವೆಡೆ ತಮ್ಮ ಚಿತ್ರಗಳನ್ನು ಅನುಮತಿ ಇಲ್ಲದೆ ಬಳಸಲಾಗಿರುವುದಾಗಿ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಅಭಿಷೇಕ್ ಪತ್ನಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಸಹ ತಮ್ಮ ವ್ಯಕ್ತಿತ್ವದ ಹಕ್ಕುಗಳನ್ನು ರಕ್ಷಿಸುವಂತೆ ಕೋರಿ ಮಂಗಳವಾರ ದೆಹಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
Advertisement