
ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಮಕ್ಕಳಾದ ಸಮೈರಾ ಕಪೂರ್ (20ವ) ಮತ್ತು ಕಿಯಾನ್ ರಾಜ್ ಕಪೂರ್ (15ವ) ಅವರು ಇತ್ತೀಚೆಗೆ ನಿಧನ ಹೊಂದಿದ ತಮ್ಮ ತಂದೆ ಉದ್ಯಮಿ ಸಂಜಯ್ ಕಪೂರ್ ಅವರ 30,000 ಕೋಟಿ ರೂಪಾಯಿ ಮೌಲ್ಯದ ಎಸ್ಟೇಟ್‌ನಲ್ಲಿ ಪಾಲು ಕೋರಿ ಪ್ರಿಯಾ ಕಪೂರ್ ವಿರುದ್ಧ ಸಲ್ಲಿಸಿದ್ದ ಮೊಕದ್ದಮೆಗೆ ಸಂಬಂಧಪಟ್ಟಂತೆ ದೆಹಲಿ ಹೈಕೋರ್ಟ್ ಬುಧವಾರ ಸಮನ್ಸ್ ಜಾರಿ ಮಾಡಿದೆ.
ನ್ಯಾಯಮೂರ್ತಿ ಜ್ಯೋತಿ ಸಿಂಗ್ ನೇತೃತ್ವದ ಪೀಠವು ಸಂಜಯ್ ಕಪೂರ್ ಅವರ ಆಸ್ತಿಗಳ ಮೇಲೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ತಕ್ಷಣ ಆದೇಶ ಹೊರಡಿಸಲು ನಿರಾಕರಿಸಿತು ಆದರೆ ಉದ್ಯಮಿ ಸಂಜಯ್ ಕಪೂರ್ ಹೊಂದಿದ್ದ ಆಸ್ತಿಗಳ ಪಟ್ಟಿಯನ್ನು ಸಲ್ಲಿಸುವಂತೆ ಅವರ ಪತ್ನಿ ಪ್ರಿಯಾ ಕಪೂರ್ ಅವರಿಗೆ ಸೂಚಿಸಿತು. ಈ ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 9ರಂದು ನಡೆಯಲಿದೆ.
ಕರಿಷ್ಮಾ ಕಪೂರ್ ಮಕ್ಕಳ ಪರವಾಗಿ ಹಾಜರಿದ್ದ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಈ ಬೆಳವಣಿಗೆಯ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿ, ಈ ಮೊಕದ್ದಮೆಯನ್ನು ನೋಂದಾಯಿಸಿಕೊಳ್ಳಲಾಗುವುದು. ಸಂಜಯ್ ಕಪೂರ್ ಅವರ ವೈಯಕ್ತಿಕ ಆಸ್ತಿಗಳ ಬಗ್ಗೆ ಕೆಲವು ತನಿಖೆ ನಡೆಸಬೇಕಾಗಿದೆ ಎಂದರು.
ಪ್ರಕರಣ ಹಿನ್ನೆಲೆ
ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಸಂಜಯ್ ಕಪೂರ್ ಅವರ ಮಾಜಿ ಪತ್ನಿ. ಅವರ ಮಕ್ಕಳಾದ ಸಮೈರಾ ಮತ್ತು ಕಿಯಾನ್ ಕಪೂರ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಸಂಜಯ್ ಕಪೂರ್ ಅವರ ಮರಣದ ನಂತರ ಅವರ ವಿಲ್‌ನಿಂದ ತಮ್ಮನ್ನು ತಪ್ಪಾಗಿ ಹೊರಗಿಡಲಾಗಿದೆ ಎಂದು ಆರೋಪಿಸಿದ್ದಾರೆ.
ಸಂಜಯ್ ಕಪೂರ್ ಅವರ ಮೂರನೇ ಪತ್ನಿ ಪ್ರಿಯಾ ಕಪೂರ್, ಸಂಜಯ್ ಅವರ ಎಲ್ಲಾ ಆಸ್ತಿಗಳ ಮಾಲೀಕತ್ವವನ್ನು ಪಡೆಯಲು ವಿಲ್ ನ್ನು ಕುತಂತ್ರದಿಂದ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ಮೊಕದ್ದಮೆಯಲ್ಲಿ ಪ್ರಿಯಾ ಕಪೂರ್, ಅವರ ಅಪ್ರಾಪ್ತ ಮಗ, ಸಂಜಯ್ ಕಪೂರ್ ಅವರ ತಾಯಿ ರಾಣಿ ಕಪೂರ್ ಮತ್ತು ವಿಲ್‌ನ ಕಾರ್ಯನಿರ್ವಾಹಕ ಎಂದು ಹೇಳಲಾದ ಶ್ರದ್ಧಾ ಸೂರಿ ಮಾರ್ವಾ ಅವರನ್ನು ಪ್ರತಿವಾದಿಗಳೆಂದು ಹೆಸರಿಸಲಾಗಿದೆ ಎಂದು ಬಾರ್ & ಬೆಂಚ್ ವರದಿ ತಿಳಿಸಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಪ್ರಕಟವಾದ ವಿವಾದಿತ ಉಯಿಲಿನಲ್ಲಿ, ಸಂಜಯ್ ಕಪೂರ್ ತಮ್ಮ ಸಂಪೂರ್ಣ ವೈಯಕ್ತಿಕ ಸಂಪತ್ತನ್ನು ತಮ್ಮ ಪತ್ನಿ ಪ್ರಿಯಾ ಕಪೂರ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಪ್ರಿಯಾ ಕಪೂರ್ ಪರವಾಗಿ ಮೂಲ ಉಯಿಲನ್ನು ನಕಲಿ ಮಾಡಲು ಪ್ರತಿವಾದಿಗಳು ದಿನೇಶ್ ಅಗರ್ವಾಲ್ ಮತ್ತು ನಿತಿನ್ ಶರ್ಮಾ ಅವರೊಂದಿಗೆ ಸಂಚು ರೂಪಿಸಿದ್ದಾರೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.
ಸಂಜಯ್ ಕಪೂರ್ ಮಕ್ಕಳ ಬೇಡಿಕೆ
ಜೂನ್ 12 ರಂದು ಯುಕೆಯ ಸರ್ರೆಯಲ್ಲಿ ಪೋಲೋ ಆಡುತ್ತಿದ್ದಾಗ 53 ವರ್ಷದ ಸಂಜಯ್ ಕಪೂರ್ ಹೃದಯಾಘಾತದಿಂದ ನಿಧನರಾದರು. ಅವರ ಮಕ್ಕಳು ತಮ್ಮ ತಂದೆಯ ಮರಣದವರೆಗೂ ಅವರೊಂದಿಗೆ ನಿಕಟ ಸಂಬಂಧವನ್ನು ಹಂಚಿಕೊಂಡಿದ್ದರು, ಆಗಾಗ್ಗೆ ಒಟ್ಟಿಗೆ ಪ್ರವಾಸಗಳು, ರಜಾದಿನಗಳು ಮತ್ತು ಅವರ ವ್ಯವಹಾರ ಮತ್ತು ವೈಯಕ್ತಿಕ ದಿನಚರಿಗಳಲ್ಲಿ ನಿಯಮಿತವಾಗಿ ಭಾಗವಹಿಸುತ್ತಿದ್ದರು.
ಪ್ರಿಯಾ ಕಪೂರ್ ಆರಂಭದಲ್ಲಿ ಯಾವುದೇ ವಿಲ್ ಅಸ್ತಿತ್ವವನ್ನು ನಿರಾಕರಿಸಿದ್ದಾರೆ ಎಂದು ಕರಿಷ್ಮಾ ಕಪೂರ್ ಅವರ ಅರ್ಜಿಯಲ್ಲಿ ಆರೋಪಿಸಲಾಗಿದೆ, ಸಂಜಯ್ ಅವರ ಎಲ್ಲಾ ಆಸ್ತಿಗಳು ಆರ್ ಕೆ ಫ್ಯಾಮಿಲಿ ಟ್ರಸ್ಟ್ ಅಡಿಯಲ್ಲಿವೆ ಎಂದು ಹೇಳಿದ್ದಾರೆ. ತಾವು ಕಾನೂನುಬದ್ಧ ಉತ್ತರಾಧಿಕಾರಿಗಳೆಂದು ಘೋಷಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ತಮ್ಮ ತಂದೆಯ ಆಸ್ತಿಯಲ್ಲಿ ತಲಾ ಐದನೇ ಒಂದು ಪಾಲನ್ನು ನೀಡುವ ವಿಭಜನೆಯ ತೀರ್ಪು ನೀಡಬೇಕೆಂದು ನ್ಯಾಯಾಲಯವನ್ನು ಕೋರಿದ್ದಾರೆ.
Advertisement