

ಕೃತಕ ಬುದ್ಧಿಮತ್ತೆಯನ್ನು (AI) ಬಳಸಿ ಯುವತಿಯರ ಪೋಟೋ ಮತ್ತು ವಿಡಿಯೋಗಳನ್ನು ಮಾರ್ಪಡಿಸಿ, ಆನ್‌ಲೈನ್‌ನಲ್ಲಿ ಹರಿಯಬಿಡುವವರ ವಿರುದ್ಧ ನಟ ಹಾಗೂ ಯೂಟ್ಯೂಬರ್ ಆಶಿಶ್ ಚಂಚಲಾನಿ ತೀವ್ರವಾಗಿ ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಾರಾ ತೆಂಡೂಲ್ಕರ್ ಅವರ AI ವಿಡಿಯೋವೊಂದು ವೈರಲ್ ಆದ ನಂತರ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಕುರಿತು ಅವರು ಪೋಸ್ಟ್ ಮಾಡಿದ್ದು, AI ಬಳಸಿಕೊಂಡು ಯುವತಿಯರ ಫೋಟೋಗಳು ಮತ್ತು ವಿಡಿಯೋ ಬದಲಾಯಿಸುವವರಿಗೆ ನರಕದಲ್ಲಿ ವಿಶೇಷ ಸ್ಥಾನ ಸಿಗಬೇಕು," ಎಂದು ಹೇಳಿದ್ದಾರೆ.
ಇಂತಹುದನ್ನು"ಅತ್ಯಂತ ಕೆಟ್ಟ" ಕೆಲಸಗಳಲ್ಲಿ ಒಂದು ಎಂದು ಅವರು ಕರೆದಿದ್ದಾರೆ. ಇದು ಆನ್ ಲೈನ್ ನಲ್ಲಿ ಮಾಡುವ ಅತ್ಯಂತ ಹೀನ ಕೆಲಸವಾಗಿದೆ. ಇದನ್ನು ಬೆಂಬಲಿಸುವವರನ್ನು ಜೈಲಿಗೆ ಕಳುಹಿಸಬೇಕು. ಈ ಸಂಬಂಧ ಶೀಘ್ರದಲ್ಲೇ ಕಠಿಣ ಕಾನೂನು ಜಾರಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.
ತಮ್ಮದೇ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಆಶಿಶ್, ಜನರು ಇತರ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಚರ್ಚೆಯನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದರೂ ತಾವು ತಮ್ಮ ನಿಲುವಿಗೆ ಬದ್ಧರಾಗಿರುವುದಾಗಿ ಹೇಳಿದರು.
"ಈ ಟ್ವೀಟ್ ಅನ್ನು ವಿರೋಧಿಸುವ ಯಾರೊಂದಿಗೂ ನಾನು ಎಂದಿಗೂ ಒಪ್ಪುವುದಿಲ್ಲ. ಇತರ ವಿಷಯಗಳನ್ನು ತರುವ ಮೂಲಕ ಮತ್ತು ಈ ವಿಷಯದ ಗಂಭೀರತೆಯನ್ನು ಕಡಿಮೆ ಮಾಡುವ ಮೂಲಕ ನೀವು ಈ ವಾದವನ್ನು ತಳ್ಳಿಹಾಕಲು ಪ್ರಯತ್ನಿಸಿದರೂ, ನಾನು ನನ್ನ ನಿಲುವನ್ನು ಬದಲಾಯಿಸುವುದಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.
ಸಾರಾ ತೆಂಡೂಲ್ಕರ್ ಅವರದೆನ್ನಲಾದ ವಿಡಿಯೋವೊಂದು ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ ಆಶಿಶ್ ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಆ ವಿಡಿಯೋದಲ್ಲಿ ಅವರು ಸ್ಪೋರ್ಟ್ಸ್ ಬ್ರಾ ಮತ್ತು ಶಾರ್ಟ್ಸ್ ಧರಿಸಿರುವುದು ಕಂಡುಬಂದಿತ್ತು. ಅದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.