ಪ್ರಣೀತಾ ಪರೀಕ್ಷೆ

ಕನ್ನಡತಿಯಾದರೂ ಪಕ್ಕದೂರಿನತ್ತ ಮುಖ ಮಾಡಿದವಳು. ಅಲ್ಲಿ ಆರಕ್ಕೇರದೆ ಮೂರಕ್ಕಿಳಿಯುವ ಮುನ್ನ ಮತ್ತೆ ತವರಿಗೆ ಬಂದವಳು.
ಪ್ರಣೀತಾ
ಪ್ರಣೀತಾ
Updated on: 

ಕನ್ನಡತಿಯಾದರೂ ಪಕ್ಕದೂರಿನತ್ತ ಮುಖ ಮಾಡಿದವಳು. ಅಲ್ಲಿ ಆರಕ್ಕೇರದೆ ಮೂರಕ್ಕಿಳಿಯುವ ಮುನ್ನ ಮತ್ತೆ ತವರಿಗೆ ಬಂದವಳು. ಮೈದಾಹಿಟ್ಟನ್ನು ನೆನಪಿಸುವ ಬೆಳ್ಳಗಿನ ಮೈ, ಅಗಲ ಕಣ್ಣುಗಳು, ಲಂಗ- ದಾವಣಿಯಲ್ಲಿ ಹೆಚ್ಚು ಇಷ್ಟವಾಗುವ ಹಳ್ಳಿ ಹುಡುಗಿ. 'ಪೊರ್ಕಿ' ಜೊತೆ ಹೆಜ್ಜೆ ಹಾಕಿದರೂ ಪೋಲಿಯಾಗದ ಬಾಲೆ. ಸದ್ಯ ಇವಳು ಮುಖ್ಯವಾಹಿನಿಯ ನಾಯಕಿಯರೊಂದಿಗೆ ಪೈಪೋಟಿಗಿಳಿದಿದ್ದಾಳೆ.

ಈಕೆ ಬೇರ್ಯಾರೂ ಅಲ್ಲ, ನಟಿ ಪ್ರಣೀತಾ. ಈ ನಟಿಗೆ ಹೊಸ ಪ್ರೇರಣೆಯಾಗಿರುವುದು 'ಅಂಗಾರಕ' ಚಿತ್ರ. ಶ್ರೀನಿವಾಸ್ ಕೌಶಿಕ್ ನಿರ್ದೇಶನದ ಚಿತ್ರವಿದು. ಕೌಶಿಕ್ ಈ ಹಿಂದೆ 'ಬೇಟೆ'ಯನ್ನು ನಿರ್ದೇಶಿಸಿದ್ದರು. ಈಗ 'ಅಂಗಾರಕ' ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್ ಎದುರು ಪ್ರಣೀತಾರನ್ನು ತಂದು ಕೂರಿಸಿದ್ದಾರೆ. ದರ್ಶನ್ ನಾಯಕತ್ವದ 'ಪೊರ್ಕಿ' ಚಿತ್ರದ ಮೂಲಕ ನಟನೆ ಆರಂಭಿಸಿದ ಪ್ರಣೀತಾಗೆ ವಿಜಯ್ ಅಭಿನಯದ 'ಜರಾಸಂಧ' ಚಿತ್ರದವರೆಗೂ ಅವಕಾಶಗಳು ಸಿಕ್ಕಿರಲಿಲ್ಲ.

ಮೊದಲ ಚಿತ್ರದ ನಂತರ ತೆಲುಗು, ತಮಿಳಿಗೆ ಹಾರಿದ ಪ್ರಣೀತಾಳನ್ನು ಮತ್ತೆ ಕರೆತಂದಿದ್ದು 'ಭೀಮಾತೀರದಲ್ಲಿ'. ಆದರೂ ಪ್ರಣೀತಾಳನ್ನು ಗಾಂಧಿನಗರ ಹೆಚ್ಚಾಗಿ ನೆಚ್ಚಿಕೊಳ್ಳಲಿಲ್ಲ. ಹಾಗಾಗಿ 'ಸ್ನೇಹಿತರು' ಚಿತ್ರದ ಮೂಲಕ ಮತ್ತೊಮ್ಮೆ ಕನ್ನಡಕ್ಕೆ ಬಂದ ಈಕೆಯ ಕೈಯಲ್ಲಿ ಅವಕಾಶಗಳೇ ಇರಲಿಲ್ಲ. ಆದರೆ, ಪ್ರಜ್ವಲ್ ದೇವರಾಜ್ರ ಜೊತೆ 'ಅಂಗಾರಕ'ದಲ್ಲಿ ಕಾಣಿಸಿಕೊಂಡ ಮೇಲೆ ಒಂದಿಷ್ಟು ಆಫರ್ಗಳು ಈಕೆಯನ್ನು ಅರಸಿಕೊಂಡು ಬಂದವು. 'ಬುದ್ದು', 'ವಿಷಲ್' ಚಿತ್ರಗಳಿಗೆ ಈಕೆಯೇ ನಾಯಕಿ. ಈ ನಡುವೆ ಮತ್ತೆ ತೆಲುಗು ಚಿತ್ರದಲ್ಲಿ ಅಭಿನಯಿಸುತ್ತಿದ್ದಾಳೆ. ತ್ರಿವಿಕ್ರಮ ಶ್ರೀನಿವಾಸ್ ನಿರ್ದೇಶನದ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗುತ್ತಿದೆ.

'ಕನ್ನಡದಲ್ಲಿ ಅವಕಾಶಗಳಿದ್ದರೂ ನಾನು ಬೇರೆ ಭಾಷೆಗೆ ಹೋಗಲಿಲ್ಲ. ಮೊದಲ ಚಿತ್ರದ ನಂತರ ತೆಲುಗು, ತಮಿಳಿನಿಂದ ಒಂದಿಷ್ಟು ಅವಕಾಶಗಳು ಬಂದವು. ಕಥೆ ಚೆನ್ನಾಗಿತ್ತು. ಹೀಗಾಗಿ ಅಭಿನಯಿಸಲು ಒಪ್ಪಿ ಕೊಂಡೆ. 'ಅಂಗಾ ರಕ' ಚಿತ್ರದ ನಂತರ ಕನ್ನಡದಲ್ಲೂ ಒಳ್ಳೆಯ ಅವಕಾಶಗಳು ಸಿಗುತ್ತಿವೆ. 'ವಿಷಲ್' ಚಿತ್ರದಲ್ಲಿ ಚಿರಂಜೀವಿ ಸರ್ಜಾ ಜೊತೆ ಅಭಿನಯಿಸುತ್ತಿದ್ದೇನೆ. 'ಬುದ್ದು' ಹೊಸಬರ ಚಿತ್ರವಾದರೂ ತುಂಬಾ ನೀಟಾಗಿ ಮಾಡಿದ್ದಾರೆ. ಇನ್ನು 'ಅಂಗಾರಕ' ಚಿತ್ರದ್ದು ಹೊಸ ರೀತಿಯ ಕಥೆ. ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ' ಎನ್ನುತ್ತಾರೆ ಪ್ರಣೀತಾ. ಒಟ್ಟಿನಲ್ಲಿ ಪ್ರಣೀತಾಗೆ ಗಾಂಧಿನಗರದಲ್ಲಿ ಹೊಸ ಪ್ರೇರಣೆ ಸಿಕ್ಕಿದೆ.

-ಕೇಶು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com