ಭೂತಯ್ಯನ ಮಗ

ನಟ ಕೋಮಲ್ 'ಗರಗಸ'ನ ಹಾಗೆ ಕೊರೆಯಲ್ಲ. ಅಥವಾ 'ಕಳ್ ಮಂಜ'ನಾಗಿ ಯಾರಿಗೂ...
ನಮೋ ಭೂತಾತ್ಮ ಚಿತ್ರದ ಸ್ಟಿಲ್
ನಮೋ ಭೂತಾತ್ಮ ಚಿತ್ರದ ಸ್ಟಿಲ್
Updated on

ನಟ ಕೋಮಲ್ 'ಗರಗಸ'ನ ಹಾಗೆ ಕೊರೆಯಲ್ಲ. ಅಥವಾ 'ಕಳ್ ಮಂಜ'ನಾಗಿ ಯಾರಿಗೂ 'ಗೋವಿಂದಾಯನಮಃ' ಅಂತ ನಾಮ ಹಾಕಲ್ಲ. ಹೋಗ್ಲಿ 'ಪುಂಗಿದಾಸ'ನಾಗಿ ಗೋಳು ಹೊಯ್ದುಕೊಳ್ಳುವುದಿಲ್ಲ. ಮತ್ತೇನು ಮಾಡ್ತಾರೆ? ಎನ್ನುವ ಕುತೂಹಲ ಇದ್ದವರು 'ನಮೋ ಭೂತಾತ್ಮ' ಅನ್ನಿ.

ಸಾಹಿತ್ಯ ಲೋಕದ ಆತ್ಮಕಥೆಗಳಲ್ಲಿ ಆತ್ಮ ಇರುತ್ತೋ ಇಲ್ವೋ ಎಂಬುದು ಅವುಗಳನ್ನು ಓದಿದ ಮೇಲೇಯೆ ಗೊತ್ತಾಗುತ್ತೆ. ಆದರೆ, ತಮಿಳುನಾಡಿನಿಂದ ನಟ ಕೋಮಲ್ ಹಿಡಿದುಕೊಂಡು ಬಂದಿರುವ ಭೂತದ ಚಿತ್ರದಲ್ಲಿ ದೊಡ್ಡ 'ಆತ್ಮ'ವಿರುವುದು ಚಿತ್ರ ನೋಡುವ ಮುನ್ನವೇ ಗೊತ್ತು. ಇದಕ್ಕೆ ಕಾರಣ ಪೋಸ್ಟರ್‌ಗಳು.

ಗೋಡೆಗಳ ಮೇಲೆ ಮೆತ್ತಿಕೊಂಡಿರುವ ಚಿತ್ರದ ಪೋಸ್ಟರ್‌ಗಳಲ್ಲೇ ಸಿಕ್ಕಾಪಟ್ಟೆ ಹೆದರಿಸುವ ಪ್ರಯತ್ನ ಮಾಡಿರುವ ಕೋಮಲ್, ಭಯಪಡಿಸುವ ಜೊತೆಗೆ ನಗಿಸುತ್ತಾರೆ. ಬೋನಸ್ ಆಗಿ ನಾಲ್ಕು ಮಂದಿ ನಾಯಕಿಯರ ಗ್ಲಾಮರ್ ತೋರಿಸುತ್ತಾರೆ. ಈ ವಾರ ತೆರೆ ಕಾಣುತ್ತಿರುವ ನಮೋ ಭೂತಾತ್ಮ ಚಿತ್ರ ನೋಡಲು ಪ್ರೇಕ್ಷಕನಿಗೆ ಇನ್ನೇನು ಬೇಕು?

ನಾವು ಹೇಳುತ್ತಿರುವುದು ತಮಿಳಿನಿಂದ ಕನ್ನಡಕ್ಕೆ ಬಂದಿರುವ ನಮೋ ಭೂತಾತ್ಮ ಚಿತ್ರದ ಬಗ್ಗೆ. ಕೋಮಲ್ ನಾಯಕನಾಗಿ, ಐಶ್ವರ್ಯ ಮೆನನ್, ಗಾಯಿತ್ರಿ ಅಯ್ಯರ್, ನಿಖಿತಾ, ಅನುಸ್ವರಕುಮಾರ್ ನಾಯಕಿಯರಾಗಿ ಅಭಿನಯಿಸಿರುವ ಈ ಚಿತ್ರದ ನಿರ್ದೇಶಕ ಡ್ಯಾನ್ಸ್ ಮಾಸ್ಟರ್ ಮುರಳಿ. ವಿಶೇಷ ಅಂದರೆ ನರ್ಸ್ ಜಯಲಕ್ಷ್ಮೀ ಇಲ್ಲಿ 'ಬ್ಯೂಟಿ' ಫುಲ್ ಟೀಚರ್ ಪಾತ್ರಧಾರಿ. ಎಲ್ರೆಡ್ ಕುಮಾರ್, ಮಹೇಶ್ ನಿರ್ಮಾಣದ ಈ ಚಿತ್ರಕ್ಕೆ ಎಮಿಲ್ ಸಂಗೀತ. ತಮ್ಮ ಭೂತ ಚಿತ್ರಕ್ಕೆ ಒಳ್ಳೆಯ ಭವಿಷ್ಯವಿದೆ ಎನ್ನುವ ನಂಬಿಕೆಯಲ್ಲಿದ್ದಾರೆ ಕೋಮಲ್. ದೆವ್ವನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಪಾಲಿಗೆ ಎನ್ನುವಂತೆ ದೆವ್ವದ ಮೇಲೆ ಭಾರ ಹಾಕಿ ನೆಮ್ಮದಿಯಾಗಿದ್ದಾರೆ ಕೋಮಲ್.

ಕೋಮಲ್ ಮಾತಿಗಿಳಿದಾಗ.....

ನೀವೇ ಭೂತದ ಸಿನಿಮಾ ಮಾಡಿ ಈಗ ನೀವೇ ಹೆದರಿಕೊಂಡಂತೆ ಕಾಣುತ್ತಿದೆಯಲ್ಲ?
ಅಯ್ಯೋ ಹಾಗೇನು ಇಲ್ಲ ಸುಮ್ಕಿರಿ. ಇಲ್ಲಿ  ನಾನು ಕೇವಲ ನಟ ಮಾತ್ರವಲ್ಲ, ನಿರ್ಮಾಣದ ಜವಾಬ್ದಾರಿಯೂ ಇದೆ. ಹೀಗಾಗಿ ಸಿನಿಮಾ ಬಿಡುಗಡೆ, ಚಿತ್ರಮಂದಿರಗಳ ಅರೇಜ್‌ಮೆಂಟ್, ಸಿನಿಮಾದ ಪ್ರಮೋಷನ್ ಕೆಲಸ... ಹೀಗಾಗಿ ಭಾರ ಹೆಚ್ಚಾಗಿದೆ. ಒತ್ತಡ ಜಾಸ್ತಿಯಾಗಿ ಮುಖದಲ್ಲಿ ಭಯ ಕಾಣುತ್ತಿದೆ. ಉಳಿದಂತೆ ಸಿನಿಮಾ ಬಗ್ಗೆ ಯಾವ ಭಯವೂ ಇಲ್ಲ. ಯಶಸ್ಸು ಗ್ಯಾರಂಟಿ.

ನಮೋ ಭೂತಾತ್ಮ ಚಿತ್ರವನ್ನು ಯಾಕೆ ಮತ್ತು ಯಾರ ಮೇಲೆ ನಂಬಿಕೆ ಇಟ್ಟುಕೊಂಡು ನೋಡಬೇಕು?

ಹಾರರ್ ಕಂ ಕಾಮಿಡಿ ಸಿನಿಮಾ. ಭಯಪಡಿಸುತ್ತಲೇ ನಗಿಸುವ ಸಿನಿಮಾಗಳು ಕಡಿಮೆ. ಈ ಕಾರಣಕ್ಕೆ ನಮ್ಮ ಸಿನಿಮಾ ನೋಡಿ. ಇದು ಕೋಮಲ್ ಸಿನಿಮಾ ಎನ್ನುವುದಕ್ಕಿಂತ ದೆವ್ವದ ಸಿನಿಮಾ ಅಂದುಕೊಳ್ಳುವುದು ಉತ್ತಮ. ಹೀಗಾಗಿ ದೆವ್ವದ ಮೇಲೆ ನಂಬಿಕೆ ಇಟ್ಟು, ಅದರ ಮೇಲೆಯೇ ಭಾರ ಹಾಕಿ ಚಿತ್ರಮಂದಿರಕ್ಕೆ ಬನ್ನಿ.

ಸರಿ, ನಗಿಸುತ್ತಿದ್ದ ಕೋಮಲ್ ಯಾಕೆ ಇದ್ದಕ್ಕಿದ್ದ ಹಾಗೆ ಭೂತದ ಹಿಂದೆ ಬಿದ್ದಿದ್ದಾರೆ?
ಈ ರೀತಿಯ ಸಿನಿಮಾ ನನಗೆ ಮೊದಲು. ತುಂಬಾ ಚೆನ್ನಾಗಿರುವ ಕಥೆ. ಹೊಸತನವಿದೆ. ತಮಿಳಿನಿಂದ ರಿಮೇಕ್ ಆಗಿದೆ ಎನ್ನುವುದು ಬಿಟ್ಟಿರೆ ನಿಜಕ್ಕೂ ಎಲ್ಲ ಸಿನಿಮಾ ಪ್ರೇಕ್ಷಕರು ನೋಡಲೇಬೇಕಾದ ಚಿತ್ರವಿದು. ಭಯದಲ್ಲಿ ನಗಿಸುವುದು, ಇದ್ದಕ್ಕಿದ್ದಂತೆ ಎಕ್ಸ್‌ಪ್ರೆಷನ್ ಚೇಂಜ್ ಮಾಡಿಕೊಳ್ಳುವುದು, ಒಮೊಮ್ಮೆ ಮಾತುಗಳಿಲ್ಲದೆ ಸೈಲೆಂಟ್ ಆಗಿ ನಡುಗುತ್ತಲೇ ಪ್ರೇಕ್ಷಕರನ್ನು ಹಿಡಿದಿಡುವುದು...ಒಬ್ಬ ನಟನಾದವನು ಇಷ್ಟು ಶೇಡ್‌ಗಳಿರುವ ಪಾತ್ರವನ್ನು ಬಿಟ್ಟು ಕೊಡುವುದು ಹೇಗೆ? ನಾನೇನಾದ್ರು ಈ ಸಿನಿಮಾ ಮಾಡದೆ ಹೋಗಿದ್ದರೆ ಕೋಮಲ್‌ನ ಮತ್ತೊಂದು ಮುಖ ಪ್ರೇಕ್ಷಕರು ನೋಡಲು ಸಾಧ್ಯವಾಗುತ್ತಿರಲಿಲ್. ಅಲ್ಲದೆ ಒಂದೇ ಮಾದರಿ ಸಿನಿಮಾಗಳಿಂದ ಒಂಚೂರು ಆಚೆ ಬರಬೇಕಿತ್ತು. ಈ ಕಾರಣಕ್ಕೆ ಭೂತವನ್ನು ನಂಬಿದೆ.

ಅಂದರೆ, ಇಂಥ ಪಾತ್ರವನ್ನು ನೀವು ಮಾತ್ರ ಮಾಡೋಕೆ ಸಾಧ್ಯವಿತ್ತೇ?
ನೀವು 'ಬೆಳದಿಂಗಳ ಬಾಲೆ' ಸಿನಿಮಾ ನೋಡಿದಾಗ ಅಲ್ಲಿ ಅನಂತ್‌ನಾಗ್ ಬಿಟ್ಟರೆ ಬೇರೆಯವರನ್ನು ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇಲ್ಲೂ ಅಷ್ಟೇ, ಸಿನಿಮಾ ನೋಡಿದ ಮೇಲೆ ಕೋಮಲ್ ಸೂಪರ್ ಅಂತೀರಾ.

ಹಾರರ್ ಸಿನಿಮಾ ಅಂದ ಮೇಲೆ ಹೀರೋಗೆ ಹೆಚ್ಚು ಮಹತ್ವ ಇರಲ್ಲವಲ್ಲ?
ನಿಜ, ನಾನು ಇಲ್ಲಿ ಹೀರೋ ಅಲ್ಲ. ಕಥೆ ಮತ್ತು ದೆವ್ವನೇ ಹೀರೋ. ಒಂಥರಾ ದೆವ್ವ ನಮ್ಮ ಪಾಲಿನ ಆಸ್ತಿ. ಪ್ರೇಕ್ಷಕರಿಗೆ ಅದೇ ಮನರಂಜನೆ ಕೇಂದ್ರ. ಸಿನಿಮಾ ನೋಡಿದ ಮೇಲೆ ದೆವ್ವ ನಂಬಿದವರಿಗೆ ದೇವರಂಥ ಸಿನಿಮಾ ನೋಡುವ ಭಾಗ್ಯ ಸಿಗುತ್ತದೆ ಎನ್ನುತ್ತಾರೆ.

ಹಾಗಾದರೆ ನಿಮ್ಮ ಚಿತ್ರದಲ್ಲಿನ ದೆವ್ವ ನೋಡಿ ಪ್ರೇಕ್ಷಕರು ಹೆದರಿಕೊಳ್ಳುತ್ತಾರೆ?
ಹೆದರಿಕೊಂಡ್ರೆ ನಾವು ಗೆದ್ದಂತೆ. ಆದರೆ, ಇಲ್ಲಿ ಪ್ರೇಕ್ಷಕರು ಮಾತ್ರವಲ್ಲ. ನಾವೂ ಹೆದರಿಕೊಂಡಿದ್ದೇವೆ. ಹೀಗಾಗಿ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಒಂದು ದೆವ್ವ ಎಲ್ಲ ಪಾತ್ರಧಾರಿಗಳನ್ನು ಹಿಡಿದು ಆಡಿಸುತ್ತದೆ. ಇದನ್ನು ನೋಡುವ ಪ್ರೇಕ್ಷಕ ಕುತೂಹಲದಿಂದ ನೋಡುತ್ತಾನೆ.

ಒಟ್ಟಾರೆ ನಮೋ ಭೂತಾತ್ಮ ಚಿತ್ರದ ಹೈಲೈಟ್ಸ್‌ಗಳೇನು?

ಚಿತ್ರದ ಕೊನೆಯ 30 ನಿಮಿಷ ಸೂಪರ್ ಆಗಿದೆ. ನಗು, ಭಯ, ಗ್ಲಾಮರ್, ಹಾಡು, ಸಂಗೀತ...ಇವು ನಮ್ಮ ಚಿತ್ರದ ಹೈಲೈಟ್ಸ್‌ಗಳು. ಅಲ್ಲದೆ ಎತ್ತರದ ಮನುಷ್ಯ ಇಲ್ಲಿ ಪಾತ್ರ ಮಾಡಿದ್ದಾನೆ. ವಿಶೇಷವಾದ ವ್ಯಕ್ತಿ ಆತ. ಈ ಸಿನಿಮಾ ನೋಡಿ ಮನೆಗೆ ಹೋದ ಮೇಲೆ ಯಾರು ಕನ್ನಡಿ ಮುಂದೆ ನಿಂತುಕೊಳ್ಳದಿದ್ದರೆ, ಅವರಿಗೆ ಹಣ ವಾಪಸ್ಸು ಕೊಡುತ್ತೇನೆ.


- ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com