ಆಸ್ಕರ್ ಮಾಸ್ತರ್

ನಿರ್ದೇಶಕ ಆಸ್ಕರ್ ಕೃಷ್ಣ ಈ ಹಿಂದೆ ಮಿಸ್ ಮಲ್ಲಿಗೆ ಚಿತ್ರ...
ಪ್ರೀತಿ ಪ್ಯಾರ್ ಅಂಡ್ ಲವ್  ಚಿತ್ರದ  ಮುಹೂರ್ತ ಸಮಾರಂಭದಲ್ಲಿ ನಮಸ್ತೇ ಮೇಡಮ್‌ ಚಿತ್ರದ ತಾರಾಜೋಡಿ ರಾಗಿಣಿ ಮತ್ತು ಶ್ರೀನಗರ ಕಿಟ್ಟಿ
ಪ್ರೀತಿ ಪ್ಯಾರ್ ಅಂಡ್ ಲವ್ ಚಿತ್ರದ ಮುಹೂರ್ತ ಸಮಾರಂಭದಲ್ಲಿ ನಮಸ್ತೇ ಮೇಡಮ್‌ ಚಿತ್ರದ ತಾರಾಜೋಡಿ ರಾಗಿಣಿ ಮತ್ತು ಶ್ರೀನಗರ ಕಿಟ್ಟಿ
Updated on

ನಿರ್ದೇಶಕ ಆಸ್ಕರ್ ಕೃಷ್ಣ ಈ ಹಿಂದೆ ಮಿಸ್ ಮಲ್ಲಿಗೆ ಚಿತ್ರ ನಿರ್ದೇಶಿಸಿ ಒಂದಷ್ಟು ವಿವಾದಗಳಿಂದ ಸುದ್ದಿಯಾದವರು. ಯೋಗೇಶ್ ಮಾಸ್ತರ್ ಡುಂಡಿ ಎಂಬ ಕಾದಂಬರಿಯ ಮೂಲಕ ಕರ್ನಾಟಕದಾದ್ಯಂತ ಚರ್ಚೆಗೆ ಒಳಗಾದವರು. ಈ ಎರಡು ವಿವಾದಾತ್ಮಕ ವ್ಯಕ್ತಿತ್ವಗಳು ಒಂದಾಗಿ ಸಿನಿಮಾ ಮಾಡುತ್ತಿದ್ದರೆ ಅದರಲ್ಲಿ ವಿವಾದ ನಿರೀಕ್ಷಿಸದೇ ಇರಲಾಗದೀತೇ? ವಿವಾದ ಇರಲಿ ಬಿಡಲಿ. ಇವರಿಬ್ಬರು ಈ ಕಾಂಬಿನೇಷನ್ ಸುದ್ದಿಯನ್ನಂತೂ ಹುಟ್ಟುಹಾಕುತ್ತಿದೆ.

ಚಿತ್ರದ ಸಬ್ಜೆಕ್ಟ್ ಲವ್ ಜಿಹಾದ್‌ಗೆ ಸಂಬಂಧಿಸಿದ್ದು ಎಂದು ಕೃಷ್ಣ ಪ್ರಕಟಿಸಿದ ನಂತರವಂತೂ ಚಿತ್ರ ಇನ್ನೊಂದು ವಿವಾದಕ್ಕೆ ಮುನ್ನುಡಿ ಬರೆದಿದೆ ಅಂತಲೇ ಅನಿಸುತ್ತಿದೆ. ಅಂದ ಹಾಗೆ ಇವರಿಬ್ಬರೂ ಜೊತೆಗೂಡಿರುವುದು ಪ್ರೀತಿ ಪ್ಯಾರ್ ಅಂಡ್ ಲವ್ ಎಂಬ ತ್ರಿಭಾಷಾ ಟೈಟಲ್‌ನ ಚಿತ್ರಕ್ಕಾಗಿ. ಸಂಜಯನಗರದಲ್ಲಿ ಮುಹೂರ್ತ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ನಿರ್ದೇಶಖ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಿದರು. ಇದು ಯೋಗೇಶ್ ಮಾಸ್ತರ್‌ರ ಅರಳಿಕಟ್ಟೆ ಕಾದಂಬರಿ ಆಧಾರಿತ ಚಿತ್ರ.

ಬೆಂಗಳೂರಿನ ಅಂದಿನ ಮತ್ತು ಇಂದಿನ ಸಾಂಸ್ಕೃತಿಕ ಬದಲಾವಣೆ, ಧಾರ್ಮಿಕ ತಿಕ್ಕಾಟ, ವಿಭಿನ್ನ ಧರ್ಮದ ಗಂಡು ಹೆಣ್ಣಿನ ನಡುವೆ ಪ್ರೀತಿ ಮುಂತಾದ ವಿಷಯಗಳಿರುವ ಕಾದಂಬರಿ ಸಿನಿಮಾ ಮಾಡಲು ಹೇಳಿ ಬರೆಸಿದಂತಿದೆಯಂತೆ. ಮಿಸ್ ಮಲ್ಲಿಗೆ ಚಿತ್ರ ಕೂಡ ಒಳ್ಳೆಯ ಕಥೆ ಹೊಂದಿತ್ತಾದರೂ, ಬಿಸಿ ದೃಶ್ಯಗಳು ಮತ್ತು ದ್ವಂದ್ವಾರ್ಥದ ಸಂಭಾಷಣೆಗಳಿಂದ ಚಿತ್ರ ಕುಖ್ಯಾತಿಗೊಳಗಾಗಿತ್ತು.

ಈ ಬಾರಿ ಆ ಥರದ ವಿಷಯಗಳಲ್ಲಿ ಕೃಷ್ಣ ಎಚ್ಚರಿಕೆ ವಹಿಸಲಿದ್ದಾರಂತೆ. ಅದರ ಮುನ್ಸೂಚನೆ ಎಂಬಂತೆ ಚಿತ್ರಕಥೆ. ಸಂಭಾಷಣೆ ಬರೆಯುವ ಜವಾಬ್ದಾರಿಯನ್ನು ಯೋಗೇಶ್ ಮಾಸ್ತರರಿಗೇ ವಹಿಸಿದ್ದಾರೆ.

ಮಾಸ್ತರರು ಈ ಚಿತ್ರದಲ್ಲಿ ಒಂದು ಹಾಡನ್ನೂ ಬರೆದಿದ್ದಾರೆ. ಕಥೆಯಲ್ಲಿ ಹಲವು ವಿವಾದಾತ್ಮಕ ಅಂಶಗಳಿದ್ದು, ಇಂದಿನ ಸಮಾಜದ ವ್ಯಕ್ತಿಗಳನ್ನು ಹೋಲುವ ಹಲವು ಪಾತ್ರಗಳಿವೆಯೆಂಬ ಹಿಂಟ್ಸ್ ಮಾಸ್ತರರಿಂದಲೇ ಬಂದಿರೋದ್ರಿಂದ ಚಿತ್ರ ತಯಾರಾದ ಮೇಲೆ ಪ್ರಚಾರಕ್ಕಂತೂ ಕೊರತೆ ಇರಲಿಕ್ಕಿಲ್ಲ. ಜನವರಿ ಹದಿನೈದರಿಂದ ಶುರುವಾಗುವ ಶೂಟಿಂಗ್ ಬೆಂಗಳೂರಿನಲ್ಲೇ ಬಹುಪಾಲು ನಡೆಯಲಿದ್ದು. ಎರಡನೇ ಹಂತದಲ್ಲಿ ಹಾಡುಗಳನ್ನು ಚಿತ್ರೀಕರಿಸಿ ಸಿನಿಮಾ ಸಂಪೂರ್ಣಗೊಳಿಸುವ ಉದ್ದೇಶ ಕೃಷ್ಣ ಅವರದ್ದು.

ಚಿತ್ರದಲ್ಲಿ ಐದು ಹಾಡುಗಳಿದ್ದು ಈಗಾಗಲೇ ವಿನು ಮನಸು ಸಂಗೀತದಲ್ಲಿ ಟ್ಯೂನ್‌ಗಳು ಸಿದ್ಧವಾಗಿವೆಯಂತೆ. ಚಿತ್ರದ ನಾಯಕ ಶಿವು ಮಂಗಳೂರು ರಂಗಭೂಮಿ ಮೂಲದವರು. ಕಂಬಾರರ ಸಿರಿಸಂಪಿಗೆ ನಾಟಕದ ಇವರ ಅಭಿನಯ ನೋಡಿ ಇಷ್ಟವಾಗಿ, ಆಸ್ಕರ್ ಕೃಷ್ಣ ಇವರನ್ನು ಕರೆತಂದಿದ್ದಾರಂತೆ. ತೇಜ ಮೇಘನಾ, ಪ್ರಿನ್ಸಿ ಚಿತ್ರದ ಸ್ತ್ರೀತಾರಾಗಣವನ್ನು ಪೂರೈಸಿದರೆ, ಶಿವು ಜೊತೆಯಲ್ಲಿ ಮಲ್ಲೇಶ್, ಗಜರಾಜ್ ಎಂಬ ಯುವನಟರೂ ತೆರೆ ಹಂಚಿಕೊಳ್ಳಲಿದ್ದಾರೆ.

ಚಿತ್ರದ ಮುಹೂರ್ತ ಸಮಾರಂಭಕ್ಕೆ ನಮಸ್ತೇ ಮೇಡಮ್‌ನ ತಾರಾಜೋಡಿ ರಾಗಿಣಿ ಮತ್ತು ಶ್ರೀನಗರ ಕಿಟ್ಟಿ ಬಂದು ಕಳೆಗಟ್ಟಿಸಿದರೆ, ನಿರ್ಮಾಪಕರಾದ ಬಾಮಾ ಹರೀಶ್, ನಿರ್ದೇಶಕ ಬಿ.ಆರ್.ಕೇಶವ್ ಮುಂತಾದವರು ಆಸ್ಕರ್ ಕೃಷ್ಣರ ಹೊಸ ಚಿತ್ರಕ್ಕೆ ಶುಭಕೋರಲೆಂದೇ ಬಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com