ಅರ್ಜುನ್ ಅಭಿಮನ್ಯು

'ಪ್ರಸಾದ್‌' ಚಿತ್ರದಿಂದ ತವರು ನೆಲದಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದ ಅರ್ಜುನ್, ಮತ್ತೆ ಅಂಥದ್ದೇ ಕಾಳಜಿಯ ಚಿತ್ರವೊಂದನ್ನು...
ಅಭಿಮನ್ಯು ಚಿತ್ರದಲ್ಲಿ ಅರ್ಜುನ್ ಸರ್ಜಾ
ಅಭಿಮನ್ಯು ಚಿತ್ರದಲ್ಲಿ ಅರ್ಜುನ್ ಸರ್ಜಾ

ತುಂಬಾ ದಿನಗಳ ನಂತರ ಅರ್ಜುನ್ ಸರ್ಜಾ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. 'ಪ್ರಸಾದ್‌' ಚಿತ್ರದಿಂದ ತವರು ನೆಲದಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದ ಅರ್ಜುನ್, ಮತ್ತೆ ಅಂಥದ್ದೇ ಕಾಳಜಿಯ ಚಿತ್ರವೊಂದನ್ನು ಪ್ರೇಕ್ಷಕರ ಮುಂದಿಡುತ್ತಿದ್ದಾರೆ. 'ಅಭಿಮಾನ್ಯು'ವಿನಂತೆ ವ್ಯವಸ್ಥೆಯ ಹುಳುಕುಗಳನ್ನು ಭೇಧಿಸುವ ಅರ್ಜುನ್, ಮಕ್ಕಳೇ ಮಾಣಿಕ್ಯ ಎನ್ನುತ್ತಿದ್ದಾರೆ.


ಹಿರಿಯ ನಟ ದಿ.ಶಕ್ತಿಪ್ರಸಾದ್ ಕುಟುಂಬದ ಕುಡಿ ಅರ್ಜುನ್ ಸರ್ಜಾ ಕನ್ನಡ ನಟನೆಂದು ಅವರನ್ನು ಸೀಮಿತಗೊಳಿಸುವುದಕ್ಕಿಂತ ಬಹುಭಾಷಾ ನಟನೆಂದು ವಿಶಾಲಗೊಳಿಸುವುದೇ ಸೂಕ್ತ. ಕರಾಟೆ ಕಿಂಗ್, ಆ ಕಾಲದಲ್ಲೇ ಸಿಕ್ಸ್ ಪಾಕ್ ಹೀರೋ ಆಗಿದ್ದ ಅರ್ಜುನ್, 'ಸಿಂಹದ ಮರಿ ಸೈನ್ಯ' ಚಿತ್ರದ ಮೂಲಕ ಅಭಿನಯಕ್ಕೆ ಕಾಲಿಟ್ಟಿದ್ದರು. ಈ ಚಿತ್ರದ ನಂತರವೂ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರೂ ತಮಿಳಿಗೆ ಹೋಗಿ ಅಲ್ಲೇ ಬಾನೆತ್ತರಕ್ಕೇರಿದವರು.

ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂ ಭಾಷೆಯಲ್ಲಿ ತನ್ನ ಖದರ್ ತೋರಿಸಿರುವ ಅರ್ಜುನ್ ದೊಡ್ಡ ಜವಾಬ್ದಾರಿಯೊಂದಿಗೆ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ನಟನೆ, ನಿರ್ದೇಶನ, ನಿರ್ಮಾಣ ಹೀಗೆ ಮೂರು ವಿಭಾಗಗಳನ್ನು ತಾನೇ ಹೊತ್ತುಕೊಂಡು 'ಅಭಿಮನ್ಯು' ಚಿತ್ರವನ್ನು ರೂಪಿಸಿದ್ದಾರೆ. ಈ ವಾರ 'ಅಭಿಮನ್ಯು' ಚಿತ್ರ ಬಿಡುಗಡೆಯಾಗುತ್ತಿದೆ. ಏಕಕಾಲದಲ್ಲಿ ಮೂರು ಭಾಷೆಗಳಲ್ಲಿ ಈ ಚಿತ್ರ ತೆರೆ ಕಾಣುತ್ತಿದೆ. ಚಿತ್ರದ ಕಥೆಯ ಕಾರಣಕ್ಕೆ ಈಗಾಗಲೇ 'ಅಭಿಮನ್ಯು' ಸದ್ದು ಮಾಡುತ್ತಿದ್ದು, ತಮ್ಮ ಬಹುನಿರೀಕ್ಷೆಯ ಈ ಸಿನಿಮಾ ಕುರಿತು ಅರ್ಜುನ್ ಸರ್ಜಾ ಜೊತೆ ಮಾತಿಗಿಳಿದಾಗ...

ತವರೂರಿನಲ್ಲಿ ನಿರ್ದೇಶನದ ಅನುಭವ ಹೇಗಿತ್ತು..? ಜವಾಬ್ದಾರಿ, ಒತ್ತಡಗಳು ಹೆಚ್ಚಾಗುದ್ದುಂಟೆ..?
ನಾನು ದೂರದಲ್ಲಿದ್ದರೂ ತವರು ನೆಲೆ ಕನ್ನಡ, ಕನ್ನಡ ಸಿನಿಮಾಗಳ ಬಗ್ಗೆ ಆಸಕ್ತಿ ಇದ್ದೆ ಇರುತ್ತದೆ. ಮೊದಲ ಬಾರಿಗೆ ಇಲ್ಲಿ ಆಕ್ಷನ್ ಕಟ್ ಹೇಳಿದಾಗ ಸಣ್ಣ ಅಳುಕು ಶುರುವಾಗಿತ್ತು. ಎಕ್ಸೈಟ್‌ಮೆಂಟ್ ಕಂ ಥ್ರಿಲಿಂಗ್ ಅನುಭವ. ನನ್ನೂರಿನಲ್ಲಿ ಸಿನಿಮಾ ಮಾಡುತ್ತಿದ್ದೀನಲ್ಲ ಎಂಬ ಯೋಚನೆ ಜವಾಬ್ದಾರಿ ಹೆಚ್ಚಿಸಿದ್ದು ನಿಜ. ಸಿನಿಮಾ ಅಂದ ಮೇಲೆ ಒತ್ತಡಗಳು ಇದ್ದೇ ಇರುತ್ತವೆ. ಎಲ್ಲ ವಿಭಾಗಗಳಲ್ಲೂ ಸಿನಿಮಾ ಚೆನ್ನಾಗಿರಬೇಕೆಂಬ ಎಚ್ಚರಿಕೆಯಲ್ಲಿ 'ಅಭಿಮನ್ಯು' ಮಾಡಿದ್ದೇನೆ. ಪ್ರೇಕ್ಷಕ ಈ ಚಿತ್ರವನ್ನು ನೋಡಿದರೆ ನನ್ನ ಶ್ರಮ ಸಾರ್ಥಕವಾಗುತ್ತದೆ.

ಏಕಕಾಲಕ್ಕೆ ಮೂರು ಭಾಷೆಗಳಲ್ಲಿ ದರ್ಶನ ಕೊಡುತ್ತಿದ್ದೀರಿ. ಯಾವ ಭಾಷೆಯ ಮೇಲೆ ನಿಮಗೆ ಹೆಚ್ಚು ಕುತೂಹಲವಿದೆ?
ಒಬ್ಬ ನಟನಾಗಿ ಎಲ್ಲ ಭಾಷೆಗಳಲ್ಲಿಯೂ ನನ್ನ ಸಿನಿಮಾಗೆ ಪ್ರೇಕ್ಷಕ ಹೇಗೆ ರಿಯಾಕ್ಟ್ ಮಾಡುತ್ತಾನೋ ಅನ್ನುವ ಕುತೂಹಲ ಅಂತೂ ಇದೆ. ಆದರೆ, ಕನ್ನಡಿಗನಾಗಿ ಯೋಚಿಸುವಾಗಿ ನನ್ನೂರಿನ ಜನಕ್ಕೆ ನನ್ನ ಸಿನಿಮಾ ಇಷ್ಟವಾಗುತ್ತದೋ ಇಲ್ಲವೋ ಎನ್ನುವ ಭಯ ಮತ್ತು ಅಭಿಮಾನ ಇದೆ..

ಇಷ್ಟಕ್ಕೂ 'ಅಭಿಮನ್ಯು' ಚಿತ್ರದ ಕಥೆ ಏನು?
ಕಮರ್ಷಿಯಲ್ ಸಿನಿಮಾ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಕೇವಲ ಮನರಂಜನೆಗೆ ಮಾತ್ರ ನನ್ನ ಚಿತ್ರ ಸೀಮಿತವಾಗಬಾರದು ಎಂದು ಈ ಚಿತ್ರ ಮಾಡಿದ್ದೇನೆ. ಹೀಗಾಗಿ ಒಳ್ಳೆಯ ಸಂದೇಶ ಒಳಗೊಂಡಿದೆ. ವಿಶೇಷವಾಗಿ ಮಕ್ಕಳ ಶಿಕ್ಷಣ, ಅವರ ಹಕ್ಕುಗಳ ಬಗ್ಗೆ ಈ ಚಿತ್ರ ಮಾತನಾಡುತ್ತದೆ. ಈಗಿನ ಶಿಕ್ಷಣ ಹೇಗಿದೆ? ಮತ್ತು ಅದರಲ್ಲಿರುವ ಕೊರತೆಗಳ ಬಗ್ಗೆಯೂ ಇಲ್ಲಿ ಬೆಳಕು ಚೆಲ್ಲಿದ್ದೇವೆ. ನಿಜವಾದ ಅರ್ಥದಲ್ಲಿ ಕಮರ್ಷಿಯಲ್ ಕಂ ಸಾಮಾಜಿಕ ಕಾಳಜಿ ಇರುವ ಸಿನಿಮಾ ಇದು.

ಹಾಗಾದರೆ ಈಗಿನ ಶಿಕ್ಷಣದ ಬಗ್ಗೆ ಅಭಿಪ್ರಾಯವೇನು? ನಿಮ್ಮ ದೃಷ್ಟಿಯಲ್ಲಿ ಶಿಕ್ಷಣ ವ್ಯವಸ್ಥೆ ಹೇಗಿರಬೇಕು...?
ಶಿಕ್ಷಣ ಸೇರಿದಂತೆ ಮೂಲಭೂತ ಹಕ್ಕುಗಳು ಎಲ್ಲರಿಗೂ ಸಿಗಬೇಕು. ಅದರಲ್ಲೂ ಶಿಕ್ಷಣ ಯಾರ ಸ್ವತ್ತು ಅಲ್ಲ. ಪ್ರತಿಯೊಬ್ಬನಿಗೂ ಸಿಗಬೇಕಾದ ಸೌಲಭ್ಯ ಮೊದಲ ಸ್ಥಾನದಲ್ಲಿದೆ. ಈ ಮಾತು ನಾನು ಒಬ್ಬ ನಟನಾಗಿ ಮಾತ್ರವಲ್ಲ, ಮನುಷ್ಯನಾಗಿ ಹೇಳುತ್ತಿರುವೆ. ಇನ್ನು ಶಿಕ್ಷಣ ವ್ಯವಸ್ಥೆ ಹೇಗಿರಬೇಕು ಎಂಬುದರ ಬಗ್ಗೆ 'ಅಭಿಮನ್ಯು' ಚಿತ್ರ ನೋಡಿದ ಮೇಲೆ ತಿಳಿಯುತ್ತದೆ.

ಶಿಕ್ಷಣ ವ್ಯವಸ್ಥೆ, ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡಿದ್ದೀರಿ. ಅಂದರೆ, ಅಭಿಮನ್ಯು ಚಿತ್ರ ರೆಗ್ಯೂಲರ್ ಸರ್ಜಾ ಸಿನಿಮಾ ಅಲ್ಲವೇ.?
ಮೊದಲೇ ಹೇಳಿದಂತೆ ಎಂದಿನ ಅರ್ಜುನ್ ಸರ್ಜಾರ ಇಮೇಜ್ ನೋಡುತ್ತೀರಿ. ಜೊತೆಗೆ ಒಬ್ಬ ನಟನಾಗಿ ನಾನು ನನ್ನ ವ್ಯಾಪ್ತಿಯಲ್ಲಿ ಸಮಾಜಕ್ಕೆ ಕೊಡಬೇಕಾದ ಸಂದೇಶವೇನು? ಎಂದುಕೊಂಡಾಗ ನನಗೆ ಶಿಕ್ಷಣ ಮತ್ತು ಮಕ್ಕಳ ಹಕ್ಕುಗಳ ಕುರಿತು ಮಾತನಾಡಬೇಕು ಅನಿಸಿತು. ಹೀಗಾಗಿ ನೀವು ಅನುಮಾನಪಡುವಂತೆ ಒಂದು ಬಾನರ್‌ಗೆ ಸೇರುವ ಚಿತ್ರವಲ್ಲ ಇದು.

ನಿರ್ದೇಶನ, ನಟನೆ, ನಿರ್ಮಾಣ... ಎಲ್ಲವನ್ನೂ ಒಟ್ಟಿಗೆ ನಿಭಾಯಿಸಿದ್ದೀರಿ. ಭಾರ ಅನಿಸಲಿಲ್ಲವೇ..?
ನನಗೆ ಭಾರ ಎನ್ನುವುದಕ್ಕಿಂತ ಜವಾಬ್ದಾರಿ ಎಂದು ಕೊಂಡಿದ್ದೇನೆ. ನಟನೆ ಅಂದಾಗ ಅಲ್ಲಿ ಯಾರೋ ಕೊಟ್ಟ ಪಾತ್ರದಲ್ಲಿ ನನ್ನನ್ನು ತೊಡಗಿಸಿಕೊಳ್ಳುವ ಕೆಲಸ ಮಾತ್ರ ನನ್ನದಾಗಿತ್ತು. ಆದರೆ, ಇಲ್ಲಿ ಪಾತ್ರ, ಆ ಪಾತ್ರದ ಸೃಷ್ಟಿಕರ್ತ ಮತ್ತು ಅದರ ರೂಪುರೇಷೆ ನನ್ನದೇ ಆಗಿರುವುದರಿಂದ ಖುಷಿಯಾಗಿ ಜವಾಬ್ದಾರಿ ನಿಭಾಯಿಸಿದ್ದೇನೆ. ಯಾಕೆಂದರೆ ಸಿನಿಮಾ ನೋಡುವ ಪ್ರೇಕ್ಷಕನಿಗೆ ಭಾರ ಅನಿಸಬಾರದಲ್ಲವೆ?

ಈ ಚಿತ್ರದಲ್ಲಿ ನಿಮ್ಮ ಪುತ್ರಿ ಐಶ್ವರ್ಯ ಅರ್ಜುನ್ ಕೂಡ ನಟಿಸಿದ್ದಾರೆ. ತಂದೆಯಾಗಿ ಮಗಳ ಅಭಿನಯದ ಬಗ್ಗೆ ಹೇಳುವುದಾದರೆ..?
ಅವಳಿಗೂ ಇಲ್ಲಿ ಮುಖ್ಯವಾದ ಪಾತ್ರ ಇದೆ. ಆಕೆಗೆ ಎರಡನೇ ಸಿನಿಮಾ. ಮೊದಲು ನಟ ವಿಶಾಲ್ ಜೊತೆ ನಟಿಸಿದ್ದಾಳೆ. ತಂದೆಯಾಗಿ ಹೇಳಿದರೆ ಹೊಗಳಿಕೆಯಾಗಬಹುದು. ಆದರೆ, ನಾನು ಒಬ್ಬ ನಟ, ನಿರ್ದೇಶಕ ಮತ್ತು ನಿರ್ಮಾಪಕನಾಗಿ ಆಕೆಯನ್ನು ಅಭಿಮನ್ಯು ಚಿತ್ರದಲ್ಲಿ ದುಡಿಸಿಕೊಂಡಿದ್ದೇನೆ. ನನ್ನ ಮಗಳು ಒಳ್ಳೆಯ ಕಲಾವಿದೆಯಾಗಲಿ ಎನ್ನುವ ಆಸೆ ನನ್ನದು.

ಅಪರೂಪಕ್ಕಾದರೂ ಕನ್ನಡ ನಿಮ್ಮ ದರ್ಶನವಾಗಿದೆ. ಇಲ್ಲಿ ಆಗಲೇ ನಿಮ್ಮ ಅಳಿಯಂದಿರು ನಾಯಕರಾಗಿದ್ದಾರೆ. ಮೂವರು ಒಂದೇ ಚಿತ್ರದಲ್ಲಿ ಅಭಿನಯಿಸುತ್ತೀರಾ..?
 
ಒಟ್ಟಿಗೆ ಅಭಿನಯಿಸುವ ಆಸೆ ನಮಗೂ ಇದೆ. ಮತ್ತು ಮಾಡುವುದಾದರೆ ಒಂದು ಐತಿಹಾಸಿಕ ಸಿನಿಮಾ ಮಾಡುವ ಉದ್ದೇಶ ಇದೆ. ಯಾವಾಗ ಕಾಲ ಕೂಡಿ ಬರುತ್ತೋ ಗೊತ್ತಿಲ್ಲ.

ಮುಂದೆ ಮಗಳಿಗಾಗಿ ಸಿನಿಮಾ ನಿರ್ದೇಶಿಸುವ ಕನಸು ಇದೆಯಾ?
ಖಂಡಿತ ನನ್ನ ಮಗಳಿಗಾಗಿ ಸಿನಿಮಾ ನಿರ್ದೇಶಿಸುತ್ತೇನೆ. ಆದರೆ, ಆಗ ನಾನು ನಿರ್ದೇಶಕನಾಗಿ ಮಾತ್ರ ಇರುತ್ತೇನೆ. ಆಕೆ ನಟಿಸುವ ಚಿತ್ರದಲ್ಲಿ ನಾನು ಪಾತ್ರಧಾರಿಯಾಗಿ ಎಂಟ್ರಿಯಾಗಲ್ಲ.

ಕನ್ನಡದಲ್ಲೇ ಮುಂದೆ ಸಿನಿಮಾ ನಿರ್ದೇಶಿಸುವ ಮತ್ತು ಅಭಿನಯಿಸುವ ಯೋಚನೆ ಉಂಟೇ?
ಒಳ್ಳೆಯ ಕಥೆ ಮತ್ತು ಪಾತ್ರ ಸಿಕ್ಕರೆ ಅಭಿನಯಿಸುತ್ತೇನೆ. ಅಂಥ ಅವಕಾಶಕ್ಕಾಗಿ ನಾನು ಕಾಯುತ್ತಿದ್ದೇನೆ. ಆದರೆ, 'ಪ್ರಸಾದ್‌' ಚಿತ್ರದಲ್ಲಿ ನಟಿಸಿ, ಅದಕ್ಕೆ ಪಶಸ್ತಿ ಬಂದಾಗ ಎಲ್ಲರೂ ಖುಷಿಯಾದರು. ನನಗೂ ಆ ಚಿತ್ರದಲ್ಲಿ ಅಭಿನಯಿಸಿದ್ದು, ಸಾರ್ಥಕವೆನಿಸಿತು. ಮುಂದೆ ನಿರ್ದೇಶಿಸುವೆ. 'ಬೇರೆ ಭಾಷೆಯಲ್ಲಿ ದೊಡ್ಡ ಹೆಸರು ಮಾಡಿದ್ದೀಯಾ. ಕನ್ನಡದಲ್ಲಿ ಏನು ಮಾಡಿದ್ದೀಯಾ ಹೇಳು?' ಎಂದು ನನ್ನ ತಾಯಿ ಪದೇ ಪದೇ ಕೇಳುತ್ತಿದ್ದರು. ಹೀಗಾಗಿ ಮಾತೃ ಭಾಷೆಯಲ್ಲಿ ಆಕ್ಷನ್ ಕಟ್ ಹೇಳಿದ್ದೇನೆ. ಮುಂದೆಯೂ ಅಮ್ಮನ ಆಸೆಯಂತೆ ಇಲ್ಲಿ ನಿರ್ದೇಶನ ಮಾಡುವೆ.

ಆರ್. ಕೇಶವಮೂರ್ತಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com