ಕಸ್ತೂರಿ ನಿವಾಸ ತಂದ ಪುಳಕ

ಕನ್ನಡಿಗರ ಅಭಿಮಾನದ ಹುಚ್ಚುಹೊಳೆಯನ್ನು ನೋಡಬೇಕಾದರೆ ನೀವು ಈಗಿಂದೀಗಲೇ...
ಕಸ್ತೂರಿ ನಿವಾಸ ಚಿತ್ರದ ಸಾಂದರ್ಭಿಕ ಚಿತ್ರ
ಕಸ್ತೂರಿ ನಿವಾಸ ಚಿತ್ರದ ಸಾಂದರ್ಭಿಕ ಚಿತ್ರ
Updated on

ಕನ್ನಡಿಗರ ಅಭಿಮಾನದ ಹುಚ್ಚುಹೊಳೆಯನ್ನು ನೋಡಬೇಕಾದರೆ ನೀವು ಈಗಿಂದೀಗಲೇ ಬಣ್ಣದ ಕಸ್ತೂರಿ ನಿವಾಸ ನೋಡಲು ಥಿಯೇಟರ್ ಗಳಿಗೆ ಧಾವಿಸಬೇಕು.

ಇಂದಿನ ಹೊಸ ಚಿತ್ರಗಳಂತೆ ಕಸ್ತೂರಿ ನಿವಾಸ ಕೂಡ ಇನ್ನೂರು ಮುನ್ನೂರು ಥೇಟರುಗಳಲ್ಲಿ ಬಿಡುಗಡೆಯಾಗಿದ್ದರೆ, ಇತ್ತೀಚಿನ ಕನ್ನಡ ಚಿತ್ರಗಳ ಎಲ್ಲ ದಾಖಲೆಗಳೂ ಧೂಳೀಪಟವಾಗಿ ಹೋಗುತ್ತಿತ್ತು. ಗಾಂಧಿನಗರ ಇತ್ತೀಚಿನ ದಿನಗಳಲ್ಲಿ ಈ ಮಟ್ಟದ ಸಂಭ್ರಮ ಕಂಡದ್ದೇ ಇಲ್ಲ. ಕೆಂಪೇಗೌಡ ರಸ್ತೆ ಗಂಟೆಗಟ್ಟಲೆ ಬ್ಲಾಕ್ ಆದದ್ದೇನು, ಟ್ರಾಫಿಕ್ಭರಿತ ರಸ್ತೆಯಲ್ಲಿ ಬಸ್ಸುಗಳು ತಮಗೇ ಗೊತ್ತಿಲ್ಲದಂತೆ ಸ್ಟಾಪಾಗಿ ಅಣ್ಣಾವ್ರ ಕಟೌಟು...ಅದರೆ ಎದುರಿನ ಜನಸ್ತೋಮವನ್ನು ನೋಡುತ್ತಾ ಕಳೆದು ಹೋದದ್ದೇನು, ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸುವುದನ್ನೂ ಮರೆತು ಆ ಸಂಭ್ರಮವನ್ನು ನೋಡುತ್ತಾ ಮೈ ಮರೆತದ್ದೇನು...ಗಾಂಧಿನಗರ ತನ್ನ ಗತವೈಭವಕ್ಕೆ ಮರಳಲು ಮತ್ತೆ ಅಣ್ಣಾವ್ರ ಚಿತ್ರವೇ ತೆರೆ ಕಾಣಬೇಕಾಯಿತು ಅನ್ನುವುದು ಸಂತಸ ತರುವ ವಾಸ್ತವ.

ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆ ಚಾನೆಲ್ಲೂಗಳಲ್ಲಿ ಮನೆಮನೆಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಕಸ್ತೂರಿ ನಿವಾಸದ್ದೇ ಮಾತು. ಭೂಮಿಕಾ ಅಲಿಯಾಸ್ ಸ್ಟೇಟ್ಸ್ ಚಿತ್ರಮಂದಿರ ತೊಂಬತ್ತರ ದಶಕದಂಚಿನಲ್ಲಿ ತನಗಂಟಿಸಿಕೊಂಡಿದ್ದ ಪೋಲಿ ಚಿತ್ರಗಳ ಪಾಪವನ್ನು, ತೆಲುಗುಚಿತ್ರ ಪಕ್ಷಪಾತಿ ಎಂಬ ಅಪವಾದವನ್ನು, ಈ ಥೇಟರಲ್ಲಿ ಕನ್ನಡ ಚಿತ್ರಗಳು ಓಡಲ್ಲ ಅನ್ನೋ ಗೊಣಗನ್ನು ಎಲ್ಲವನ್ನೂ ಒಂದು ಕಸ್ತೂರಿ ನಿವಾಸದ ಮೂಲಕ ಕಳೆದುಕೊಂಡಿದೆ. ಒಂದು ಸಾಂಸ್ಕೃತಿಕ ಹಬ್ಬವೇನೋ ಎಂಬಂತೆ ಕಸ್ತೂರಿ ನಿವಾಸ ಸಿಗದಂತಾಗಿ ಅಭಿಮಾನಿಗಳು ಪರದಾಡುವಂತಾಗಿದ್ದು, ಅವರ ಪಾಡು ನೋಡಲಾಗದೇ ಚಿತ್ರಮಂದಿರದವರು ಅವರನ್ನು ಒಳಗೆ ಬಿಟ್ಟಿದ್ದು ಎಲ್ಲವೂ ನಡೆಯಿತು.

ಚಿತ್ರ ಮಂದಿರದೊಳಕ್ಕೆ ಚಿತ್ರ ನೋಡಲಾಗದಷ್ಟು ಜನ ತೆರೆಯನ್ನು ಆವರಿಸಿಕೊಂಡಿದ್ದರು. ಅಭಿಮಾನದ ಸ್ಟಾರುಬುಟ್ಟಿಗಲು, ಕನ್ನಡ ಬಾವುಟಗಳು ರಾರಾಜಿಸಿದವು.

ಅರ್ಧ ಸಂಖ್ಯೆಯಷ್ಟು ವೀಕ್ಷಕರು ನಿಂತೇ ಚಿತ್ರ ವೀಕ್ಷಿಸಿದರು. ಕಾರಣ ತೆರೆಯ ಬಳಿ ಆವರಿಸಿಕೊಂಡಿದ್ದ ಅಭಿಮಾನಿಗಳ ಸಂಖ್ಯೆ ಅರ್ಧ ತೆರೆಯನ್ನೇ ಮರೆಮಾಚುತ್ತಿತ್ತು. ಜೊತೆಗೆ ಇಡೀ ಚಿತ್ರ ಮಂದಿರದಲ್ಲಿ ಮೊಬೈಲುಗಳು ಫೋಟೋ, ವೀಡಿಯೋ ಕ್ಲಿಕ್ಕಿಸುತ್ತಿದ್ದವು. ಆಡಿಸಿ ನೋಡು ಬೀಳಿಸಿ ನೋಡು ಹಾಡನ್ನು ಪ್ರೇಕ್ಷಕರ ಒತ್ತಾಯದ ಮೇರೆಗೆ ರಿಪೀಟ್ ಕೂಡ ಪ್ರದರ್ಶಿಸಲಾಯಿತು. ಕ್ಲೈಮಾಕ್ಸ್ ಹೊತ್ತಿನಲ್ಲಿ ಭಾವೋದ್ರೇಕಗೊಂಡ ವೃದ್ಧರೋಬ್ಬರಿಗೆ ಆರೋಗ್ಯದಲ್ಲಿ ಏರುಪೇರಾಗಿ ತುರ್ತು ಚಿಕಿತ್ಸೆ ನೀಡುವ ಪರಿಸ್ಥಿತಿಯೂ ನಿರ್ಮಾಣವಾಗಿದ್ದು ಕಸ್ತೂರಿ ನಿವಾಸ ಚಿತ್ರ ಮಾಡುತ್ತಿರುವ ಪವಾಡಗಳ ಝಲಕ್ಗಳಲ್ಲೊಂದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com