ಅನಂತ ನೀ ಅನಂತನಾಗ್

ಅನಂತ್‌ನಾಗ್ ಅವರಿಗೆ ಎಷ್ಟೇ ವಯಸ್ಸಾದರೂ ಅವರ ಕ್ರೇಜ್ ಎಂದೆಂದಿಗೂ ಅನಂತ. ಈ ಚಿತ್ರಗಳನ್ನು ನೋಡಿದರೆ ಅರವತ್ತಾರರ ...
'ಪ್ಲಸ್‌' ಚಿತ್ರದಲ್ಲಿ ಅನಂತ್‌ನಾಗ್  (ಕೃಪೆ: ಫೇಸ್ ಬುಕ್)
'ಪ್ಲಸ್‌' ಚಿತ್ರದಲ್ಲಿ ಅನಂತ್‌ನಾಗ್ (ಕೃಪೆ: ಫೇಸ್ ಬುಕ್)
Updated on

ಅನಂತ್‌ನಾಗ್ ಅವರಿಗೆ ಎಷ್ಟೇ ವಯಸ್ಸಾದರೂ ಅವರ ಕ್ರೇಜ್ ಎಂದೆಂದಿಗೂ ಅನಂತ. ಈ ಚಿತ್ರಗಳನ್ನು ನೋಡಿದರೆ ಅರವತ್ತಾರರ ಹರೆಯದಲಲ್ಲಿ ಮತ್ತೆ ಆರಕ್ಕೇರಿದ್ದಾರೆ ಅನಂತ್ ಎನ್ನಬಹುದು. ಕೆಲವು ತೀರಾ ಮಡಿವಂತರು ಇದನ್ನು ಅನಂತನ ಅವಾಂತರ ಎನ್ನಲೂಬಹುದು. ಆದರೆ ಇದು ನಿಜಕ್ಕೂ ಅನಂತ್ ಅಚ್ಚರಿ. ಇದನ್ನು ಸಾಧ್ಯವಾಗಿಸಿದವರು 'ಪ್ಲಸ್‌' ಚಿತ್ರದ ನಿರ್ದೇಶಕ ಗಡ್ಡ ವಿಜಿ ಮತ್ತು ಸೂಟುಬೂಟಿನಲ್ಲಿ ಮಿಂಚುತ್ತಿರುವ ಅನಂತ್‌ರ ಫೋಟೋ ಶೂಟ್ ಮಾಡಿದ ಛಾಯಾಗ್ರಾಹಕ ಮಹೇಂದ್ರ ಸಿಂಹ.

ಗಡ್ಡ ವಿಜಿ ತಮ್ಮ ಹೆಸರಿಗೆ ತಕ್ಕಂತೆ ಅನಂತ್‌ನಾಗ್ ಅವರಿಗೂ ಕುರುಚಲು ಗಡ್ಡ ಬಿಡಿಸಿದ್ದಾರೆ ಮತ್ತು ಅನಂತ್‌ರ ಈ ಅವತಾರಗಳನ್ನು ಪೇಂಟಿಂಗ್‌ನಂತೆ ಬಿಡಿಸಿದ್ದಾರೆ ಮಹೇಂದ್ರ ಸಿಂಹ.
ಇಂದಿನ ಸೂಪರ್‌ಸ್ಟಾರ್‌ಗಳಿಗೆ ಪೋಸು ನೀಡುವ ಪಾಠ ಹೇಳಿಕೊಡುವಂತೆ ಅನಂತ್ ಇಲ್ಲಿ ಮಿಂಚಿದ್ದಾರೆ. ಅದು 66 ಹರೆಯದಲ್ಲೂ ಬಾಗದ ಬಾಡಿ ಲ್ಯಾಗ್ವೇಂಜ್ ಇರಬಹುದು, ಬಾಡದ ಹೂನಂಥ ಫೇಶಿಯಲ್ ಎಕ್ಸ್‌ಪ್ರೆಶನ್ ಇರಬಹುದು ಅನಂತ್ ಪ್ರತಿ ಫ್ರೇಮಿನಲ್ಲೂ ಪ್ರೀತಿ ಹುಟ್ಟಿಸುತ್ತಾರೆ.

ಮನೆಯಲ್ಲಿರುವ ಖಾಸಗಿ ಪಬ್‌ನಲ್ಲಿ ಕೂತಿರುವ 'ಮುಂಗಾರು ಮಳೆ'ಯ ಅನಂತ್, ಗಾಲ್ಫ್ ಕ್ಲಬ್‌ನ 'ಬಯಲುದಾರಿ'ಯಲ್ಲಿ  ಬಾಲ್ ಹೊಡೆದು ನಿಂತಿರುವ ಅನಂತ್,  ಚೆಸ್‌ಬೋರ್ಡ್ ಮುಂದೆ 'ಬೆಳದಿಂಗಳ ಬಾಲೆ'ಯನ್ನು ನೆನಪಿಸುವಂತೆ ಆಡುತ್ತಿರುವ ಅನಂತ್, ಲಾಂಜ್‌ನ ಮೇವೆ ಲಾರ್ಜ್ ಹಿಡಂದು ಕೂತಿರುವ ಅನಂತ್, ನ್ಯೂಸ್ ಪೇಪರ್ ನೋಡುತ್ತಿರುವ ನ್ಯೂಸ್ ಮೇಕರ್ ಅನಂತ್, ಏನನ್ನೋ ಯೋಚನೆ ಮಾಡುತ್ತ ತತ್ವಜ್ಞಾನಿಯಂತೆ ಕಾಣುವ ಅನಂತ 'ಸ್ವಾಮಿ'. ಹೀಗೆ ಇಲ್ಲಿ ಅನಂತ್‌ರ ಹತ್ತು ಹಲವು ಮುಖಗಳಿವೆ. ಆದರೆ ಇವುಗಳಲ್ಲಿ ಯಾವುದು ಚೆನ್ನಾಗಿದೆ ಎಂದು ಹೇಳುವುದೇ ದೊಡ್ಡ ಕಷ್ಟ ಎನಿಸುವಂತೆ ಕಷ್ಟಪಟ್ಟು ಕುಸುರಿ ಕೆಲಸ ಮಾಡಿರುವ ಮಹೇಂದ್ರ ಸಿಂಹ ಅವರಿಗೆ ಅನಂತ್‌ನಾಗ್ ಸೇರಿದಂತೆ ಎಲ್ಲರೂ ಅಭಿನಂದನೆ ಹೇಳಲೇಬೇಕು. ಈಗಾಗಲೇ ಫೇಸ್‌ಬುಕ್, ವಾಟ್ಸಾಪ್‌ನಲ್ಲಿ ಮಿಂಚುತ್ತಿರುವ ಈ ಫೋಟೋಗಳಿಗೆ ನಮ್ಮ ಕಡೆಯಿಂದಲೂ ಹ್ಯಾಟ್ಸಾಫ್. ಅನಂತ್‌ರ ಈ ಗೆಟಪ್ಪೇ, 'ಪ್ಲಸ್‌' ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗುವುದರಲ್ಲಿ ಅನುಮಾನವಿಲ್ಲ. ಆದರೆ, ಅನಂತ್ ಅವರಷ್ಟೇ ವಯಸ್ಸಾಗಿರುವ ಅನಂತ್‌ರ ಒಂದು ಕಾಲದ ಮಹಿಳಾ ಅಭಿಮಾನಿಗಳ ರಿಯಾಕ್ಷನ್ನು ಏನಿರುತ್ತೆ ಅನ್ನೋದು ಕುತೂಹಲ.


ಅನಂತ್ ಸರ್ ಜೊತೆ ಕೆಲಸ ಮಾಡೋದೆ ಖುಷಿ. ತುಂಬಾ ಕಂಫರ್ಟಬಲ್. ಅವರು ತುಂಬಾ ಫೋಟೋಜೆನಿಕ್ ಮತ್ತು ವೈವಿಧ್ಯತೆ ಇರೋ ನಟ. ಇತ್ತೀಚೆಗೆ ಅವರನ್ನ ಬರೀ ಜುಬ್ಬಾ ಪೈಜಾಮ ಹಾಕಿಸಿ ಅಪ್ಪನ ಪಾತ್ರಗಳಲ್ಲೇ ತೋರಿಸಲಾಗಿತ್ತು. ಇಲ್ಲಿ ಅವರನ್ನು ದೊಡ್ಡ ಬ್ಯುಸಿನೆಸ್‌ಮೆನ್ ಆಗಿ ತೋರಿಸುವುದು ಚಾಲೆಂಜಿಂಗ್ ಆಗಿತ್ತು. ಚಿತ್ರ ತಂಡ ಮೊದಲು ವೈಟ್ ಬ್ಯಾಕ್ ಗ್ರೌಂಡ್‌ನಲ್ಲಿ ಶೂಟ್ ಮಾಡೋಣ ಅಂದ್ರು. ನಾನು ಬೇಡ, ಹೊರಾಂಗಣದಲ್ಲಿ ಕಲರ್‌ಫುಲ್ ಆಗಿ ಮಾಡೋಣ ಅಂದೆ. ಅನಂತರ ಬೇರೆ ಬೇರೆ ಜಾಗಗಳಲ್ಲಿ ನಾವು ಮಾಡಿದ ಕೆಲಸ ಈಗ ನಿಮ್ಮ ಮುಂದೆ ಇದೆ. ಇದೊಂದು ಟೀಮ್ ವರ್ಕ್.

-ಮಹೇಂದ್ರ ಸಿಂಹ


ಮಹೇಂದ್ರ ಸಿಂಹ ಅವರ ಕೆಲಸದ ಬಗ್ಗೆ ಮಾತನಾಡುವಂತೇ ಇಲ್ಲ. ಜಾಕಿ, ಜಂಗ್ಲಿ, ಅಣ್ಣಾಬಾಂಡ್‌ಗಳಿಗೆ  ಅವರ ಜೊತೆ ಕೆಲಸ ಮಾಡಿದ್ದೇವೆ. ವೈಟ್ ಬ್ಯಾಕ್‌ಗ್ರೌಂಡ್‌ನಲ್ಲಿ ಶೂಟ್ ಮಾಡೋದು ಕಾಮನ್. ಆದರೆ ಮಹೇಂದ್ರ ಸಿಂಹ ಕಥೆ ಕೇಳಿ ಚಿತ್ರಕ್ಕೆ ಲೈವ್ ಶೂಟ್ ಮಾಡ್ತಾರೆ. ಕಡ್ಡಿ ಪುಡಿಗೂ ಹಾಗೇ ಮಾಡಿದ್ರು. ಕಡಿಮೆ ಲೈಟ್ ಮತ್ತು ಕಡಿಮೆ ಸಮಯದಲ್ಲಿ ಅದ್ಭುತ ರಿಸಲ್ಟ್  ಕೊಡೋ ಒಬ್ಬ ಪರಿಪೂರ್ಣ ಸ್ಟಿಲ್ ಫೋಟೋಗ್ರಾಫರ್ ಮಹೇಂದ್ರ ಸಿಂಹ. ಅನಂತ್ ಅವರಿಗೆ ಈ ಚಿತ್ರದಲ್ಲಿ 3 ಗೆಟಪ್ ಇದೆ. ಅದರಲ್ಲಿ ಇದು ಒಂದು .ಇದಕ್ಕಿಂತವೀ ಒಂದು ಹತ್ತು ವರ್ಷ ಯಂಗ್ ಆಗಿರುವಂಥದ್ದು ಇದೆ. ಮೂರನೇಯದನ್ನು ಆಮೇಲೆ ರಿವೀಲ್ ಮಾಡ್ತೀವಿ. ಈ ಚಿತ್ರಕ್ಕೆ ನಂಗೆ ಅನಂತ್ ಅವರನ್ನು ಬಿಟ್ಟು ಜಗತ್ತಲ್ಲಿ ಬೇರೆ ಯಾವ ನಟನೂ ಸೂಟ್ ಆಗಲ್ಲ ಅನ್ನಿಸಿತು. ಈ ಚಿತ್ರಕ್ಕೆ ಅವರೇ ಒಂಥರಾ ಹೀರೋ ಇದ್ದ ಹಾಗೆ.

-ಗಡ್ಡ ವಿಜಿ

-ಹರಿ


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com