ಮಹೇಶ್ ಬಾಬು ಈಗ ಚಂದ್ರು 'ಅತಿಥಿ'

ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಈಗ ಚಂದ್ರು 'ಅತಿಥಿ'
ಮಹೇಶ್ ಬಾಬು
ಮಹೇಶ್ ಬಾಬು

ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಈಗ ಮತ್ತೊಮ್ಮೆ ಅತಿಥಿಯಾಗಿದ್ದಾರೆ. ಈ ಹಿಂದೆ 'ಅತಿಥಿ' ಎಂಬ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದ ಮಹೇಶ್ ಬಾಬು ಈಗ ಕನ್ನಡ ಚಿತ್ರದ ತೆಲುಗು ರಿಮೇಕ್ ಚಿತ್ರವೊಂದರಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ.

ಚಾರ್‌ಮಿನಾರ್ ಚಿತ್ರ ನಿರ್ದೇಶಿಸಿದ್ದ ಆರ್. ಚಂದ್ರು ಯಾವಾಗಲೂ ಹೊಸದೇನನ್ನಾದರೂ ಮಾಡುವ ಛಾತಿ ಇರುವವರು. ಈಗಲೂ ಅವರು ಮತ್ತೆ ಅಂಥದೇ ಕೆಲಸ ಮಾಡುತ್ತಿದ್ದಾರೆ. ಚಾರ್‌ಮಿನಾರ್‌ನ ತೆಲುಗು ರಿಮೇಕ್ ಆದ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿರುವುದು ಸುಧೀರ್ ಬಾಬು. ಹೇಳಿ ಕೇಳಿ ಈತ ಮಹೇಶ್ ಬಾಬು ಕಸಿನ್. ಹಾಗಾಗಿ ಚಂದ್ರುಗೆ ಈ ಸಾಹಸ ಕಷ್ಟದ ಕೆಲಸ ಏನಾಗಿರಲಿಕ್ಕಿಲ್ಲ. ಈ ಬಗ್ಗೆ ಕೇಳಿದರೆ 'ಹೌದು ನಮ್ಮ ಚಿತ್ರದ ನಾಯಕ ಮತ್ತು ನಿರ್ಮಾಪಕರು ಮಹೇಶ್ ಬಾಬು ಅವರ ಜೊತೆ ಮಾತನಾಡಿದ್ದಾರೆ. ಅವರಿಂದ ಗ್ರೀನ್ ಸಿಗ್ನಲ್ ದೊರೆತಿದೆ. ಅವರದ್ದು ಚಿಕ್ಕ ಪಾತ್ರ. ಈಗಲೇ ಏನೂ ಡೀಟೈಲ್ಸ್ ಕೇಳಬೇಡಿ. ಅವರು ಡೇಟ್ಸ್ ಕೊಟ್ಟ ತಕ್ಷಣ ಶೂಟಿಂಗ್ ಶುರು ಮಾಡುತ್ತೇನೆ.' ಎನ್ನುತ್ತಾರೆ ಚಂದ್ರು. ಅಲ್ಲದೆ ವಿಶೇಷ ಎಂದರೆ ಮಹೇಶ್ ಬಾಬು ಅತಿಥಿ ಎಂಬ ಚಿತ್ರದಲ್ಲಿ ಅಭಿನಯಿಸಿದ್ದು ಬಿಟ್ಟರೆ ಈವರೆಗೂ ಯಾವ ಚಿತ್ರದಲ್ಲೂ ಅತಿಥಿ ಪಾತ್ರದಲ್ಲಿ ನಟಿಸಿಲ್ಲ. ಹಾಗಾಗಿ ಪ್ರಿನ್ಸ್ ಮಹೇಶ್ ಬಾಬು ಗೆಸ್ಟ್ ಅಪಿಯರೆನ್ಸ್ ಪಾತ್ರ ಮಾಡಿದ ಮೊದಲ ಚಿತ್ರ ಎಂಬ ಖ್ಯಾತಿಗೂ ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ ಚಿತ್ರ ಪಾತ್ರವಾಗಲಿದೆ.

ಸದ್ಯಕ್ಕೆ ಹೈದರಾಬಾದ್‌ನಲ್ಲೇ ಠಿಕಾಣಿ ಹೂಡಿರುವ ಚಂದ್ರು ಈ ಚಿತ್ರದ ಬಹುತೇಕ ಶೂಟಿಂಗ್ ಮಾಡಿದ್ದಾರೆ. ಮಹೇಶ್ ಬಾಬು ಅವರ ಪೋರ್ಷನ್ ಮುಗಿದರೆ ಚಿತ್ರ ಸಂಪೂರ್ಣವಾದಂತೆ. ಅದು ಮುಗಿದ ನಂತರ ಚಂದ್ರು ಇನ್ನೊಂದು ತೆಲುಗು ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ, ಅದರಲ್ಲಿ ದೊಡ್ಡ ಸ್ಟಾರ್ ಒಬ್ಬರು ನಾಯಕರಾಗಿ ಅಭಿನಯಸಲಿದ್ದಾರೆ ಎನ್ನುವ ಸುದ್ದಿಯೂ ಇದೆ. ಆದರೆ ಚಂದ್ರು, ಸದ್ಯ ನನ್ನ ಚಿತ್ತ ನನ್ನ ನಿರ್ಮಾಣದ 'ಮಳೆ' ಚಿತ್ರದತ್ತ ಎನ್ನುತ್ತಾರೆ. ಮೊದಲು 'ಮಳೆ' ಮುಗಿಸಿ ನಂತರ ಚಂದ್ರು ಅವರ ಲಿಸ್ಟ್‌ನಲ್ಲಿ ಶಿವಣ್ಣ ಅಭಿನಯದ ಚಿತ್ರ ಇದೆ. ಅದರ ಜೊತೆಗೆ ಉಪೇಂದ್ರ ಅಭಿನಯದ ಬಹುಭಾಷಾ ಚಿತ್ರ, ಹೀಗೆ ಸಾಲು ಸಾಲು ಚಿತ್ರಗಳು ಚಂದ್ರು ಅವರ ಕೈಯಲ್ಲಿವೆ.

'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಚಿತ್ರದ ಡಬ್ಬಿಂಗ್ ಕೆಲಸ ಜೋರಾಗಿದೆ, ಈ ಗ್ಯಾಪ್‌ನಲ್ಲಿ ಇನ್ನೊಂದು ತೆಲುಗು ಚಿತ್ರಕ್ಕೆ ಕಮಿಟ್ ಆಗುತ್ತಿದ್ದೇನೆ. ಸದ್ಯದಲ್ಲೇ ಅನೌನ್ಸ್ ಮಾಡ್ತೀನಿ. ಹೈದರಾಬಾದ್ ಅಪ್ಪಿಕೊಳ್ತಿದೆ ಎಂದು ಸ್ವತಃ ಚಂದ್ರು ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ. ಹಾಗಾಗಿ ಕನ್ನಡದಿಂದ ತೆಲುಗಿಗೆ ಹೋದ ಚಂದ್ರು ಅವರ ಸ್ಟೇಟಸ್ ದಿನೇ ದಿನೇ ಹೆಚ್ಚುತ್ತಿದೆ ಎನ್ನಬಹುದು.

-ಹ್ಯಾರಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com