ದೇವರ ನಾಡಲ್ಲಿ ಇದೆಂಥಾ ಅನ್ಯಾಯ?

ತೀರಾ ಸುತ್ತಿ ಬಳಸಿ ಮಾತನಾಡುವಷ್ಟು ಸಮಯವಿಲ್ಲ. ನೇರವಾಗಿ ವಿಷಯಕ್ಕೆ...
ದೇವರ ನಾಡಲ್ಲಿ
ದೇವರ ನಾಡಲ್ಲಿ

ತೀರಾ ಸುತ್ತಿ ಬಳಸಿ ಮಾತನಾಡುವಷ್ಟು ಸಮಯವಿಲ್ಲ. ನೇರವಾಗಿ ವಿಷಯಕ್ಕೆ ಬರಬೇಕಿದೆ. ಯಾಕಂದ್ರೆ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಏಳನೇ ಆವೃತ್ತಿ ಶುರುವಾಗಲು ಬರೀ ನಾಲ್ಕು ದಿನಗಳು ಉಳಿದಿವೆ. ಈ ಸಮಯದಲ್ಲಿ ಸಿನಿಮೋತ್ಸವದಲ್ಲಿ ಭಾಗಿಯಾಗಲು ಹಗಲು ರಾತ್ರಿ ಶ್ರಮಿಸುತ್ತಿರುವ ಅಧಿಕಾರಿಗಳನ್ನು ಹಾಗೂ ಸಿನಿಮಾ ಮಂದಿಯನ್ನು ವಿನಾಕಾರಣ ವಿವಾದ ಸೃಷ್ಟಿಸಿ ಎಳೆತರುವುದು ನಮ್ಮ ಉದ್ದೇಶವಲ್ಲ. ಆದರೆ  ಕೆಲವು ಅರ್ಥವಾಗದ ವಿಷಯಗಳನ್ನು ತಮ್ಮಿಂದ ಕೇಳಿ ತಿಳಿದುಕೊಳ್ಳಬೇಕಿದೆ. ಪ್ರಶ್ನೆಗಳಿವೆ. ಉತ್ತರ ಬೇಕಿದೆ. ಸ್ಪಷ್ಟನೆಗಳನ್ನು ನೀಡುವುದಾದರೆ, ತಪ್ಪಾಗಿದ್ದಲ್ಲಿ ತಿದ್ದಿಕೊಳ್ಳುವ ಮನಸ್ಸಿದ್ದರೆ, ದಯವಿಟ್ಟು ಒಮ್ಮೆ ಪರಾಂಬರಿಸಿ,

ಇದು ಸಿನಿಮೋತ್ಸವದಲ್ಲಿ ಪ್ರದರ್ಶಿತವಾಗುತ್ತಿರುವ ಚಲನಚಿತ್ರಗಳ ಆಯ್ಕೆಗೆ ಸಂಬಂಧಿಸಿದ್ದು. ಬಿ.ಸುರೇಶ ನಿರ್ದೇಶನದ 'ದೇವರ ನಾಡಲ್ಲಿ' ಚಿತ್ರವನ್ನು ಸಿನಿಮೋತ್ಸವದ ಪ್ರೀಮಿಯರ್ ಸಿನಿಮಾವನ್ನಾಗಿ ಆಯ್ಕೆ ಮಾಡಿದ್ದೀರಿ. ಹಾಗಂತ ನಿಮ್ಮ ವೆಬ್‌ಸೈಟ್ ಕೂಡಾ ಹೇಳುತ್ತಿದೆ. ಪ್ರಕಟಣೆಗಳಲ್ಲೂ ಇದೆ. ಮೇಲಾಗಿ ಬಿ. ಸುರೇಶ್ ಕೂಡಾ ತಮ್ಮ ಸಂತಸವನ್ನು ಫೇಸ್‌ಬುಕ್‌ನಲ್ಲಿ 19ರಂದು ಹಂಚಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಹೆಚ್ಚು ಕನ್ನಡ ಚಿತ್ರಗಳು ಪ್ರದರ್ಶಿತವಾದರೆ, ಪ್ರಶಸ್ತಿಗೂ ಪಾತ್ರವಾದರೆ ಅದಕ್ಕಿಂತ ಖುಷಿ ಕನ್ನಡಿಗರಿಗೆ ಇನ್ನೇನಿದೆ? ದೇವರ ನಾಡಲ್ಲಿ ಚಿತ್ರದಲ್ಲಿ ಪ್ರಕಾಶ್ ರೈ, ಮಂಡ್ಯ ರಮೇಶ್ ಆದಿಯಾಗಿ ಹಲವು ಅಪ್ಪಟ ಕಲಾವಿದರಿದ್ದಾರೆ. ಅದೊಂದು ಅದ್ಬುತ ಸಿನಿಮಾ ಆಗಿರುತ್ತದೆ ಎಂ ನಿರೀಕ್ಷೆ ಎಲ್ಲ ಕನ್ನಡ ಸಿನಿಪ್ರೇಮಿಗಳಲ್ಲಿಯೂ ಇದೆ. ಆದರೆ ಚಿತ್ರೋತ್ಸವದ ಆಯ್ಕೆ ಸಮಿತಿ ಆ ನಿರೀಕ್ಷೆಗಳನ್ನು ಆಧಾರವಾಗಿಟ್ಟುಕೊಂಡು ಅಥವಾ ಈ ಸಿನಿಮಾ ಚೆನ್ನಾಗಿರಬಹುದು ಎಂದು  ಭಾವಿಸಿಕೊಂಡು ಸಿನಿಮಾಗಳನ್ನು ಫೆಸ್ಟಿವಲ್‌ಗೆ ಆಯ್ಕೆ ಮಾಡಬಹುದೇ? ಅದು ತಪ್ಪಲ್ಲವೇ?

ಪ್ರಶ್ನೆ ಇಷ್ಟೆ, ದೇವರ ನಾಡಲ್ಲಿ ಚಿತ್ರವನ್ನು ಯಾವ ಮಾನದಂಡವಿಟ್ಟಕೊಂಡು ಆಯ್ಕೆ ಮಾಡಿದಿರಿ? ನೀವು ಆ ಚಿತ್ರವನ್ನು ಆಯ್ಕೆ ಮಾಡುವ ಹೊತ್ತಿಗೆ ಚಿತ್ರದ ಕೆಲಸವೇ ಪೂರ್ಣಗೊಂಡಿರಲಿಲ್ಲ ಎಂಬ ಮಾಹಿತಿಗಳಿವೆ. ತೀರಾ ಎರಡು ದಿನಕ್ಕೆ ಮುಂಚೆ ಕೂಡಾ ಚಿತ್ರವಿನ್ನೂ ಹಂಸಲೇಖಾರ ರೀರೆಕಾರ್ಡಿಂಗ್ ಟೇಬಲ್ ಮೇಲಿದುದನ್ನು ಚಿತ್ರತಂಡದ ಮೂಲಗಳೇ ತಿಳಿಸಿವೆ. ಎಲ್ಲಕ್ಕಿಂತ ಹೆಚ್ಚಾಗಿ ನಿರ್ದೇಶಕ ಬಿ.ಸುರೇಶ ಅವರೇ ತಮ್ಮ ಫೇಸ್‌ಬುಕ್ ಸ್ಟೇಟಸ್‌ನಲ್ಲಿ ನವೆಂಬರ್ 19ರಂದು 'ದೇವರ ನಾಡಲ್ಲಿ ಚಿತ್ರವು ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ  world premeir ವಿಭಾಗದಲ್ಲಿ ಪ್ರದರ್ಶನವಾಗಲು ಆಯ್ಕೆಯಾಗಿದೆ. ಆ ದಿನಗಳ ಒಳಗೆ ಸಿನಿಮಾದ ಎಲ್ಲಾ ಕೆಲಸವನ್ನೂ ಮುಗಿಸುವ ಒತ್ತಡವೀಗ ನನ್ನ ಮೇಲಿದೆ' ಎಂದು ಬರೆದುಕೊಳ್ಳುತ್ತಾರೆ. ಹಾಗಾದರೆ ಚಿತ್ರವೊಂದು ಪೂರ್ಣಗೊಳ್ಳದೆಯೇ ಹೇಗೆ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಯ್ತು?  ಅದರ ಅರ್ಹತೆಯನ್ನು ಹೇಗೆ ಜಸ್ಟಿಫೈ ಮಾಡುತ್ತೀರಿ? ಕೇವಲ ಕಥೆಯ ಸಾರಾಂಶ ತಿಳಿದು ಆಯ್ಕೆ ಮಾಡಿದಿರಾ? ಅಥವಾ ಬಿ. ಸುರೇಶ  ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಎಂಬ ಕಾರಣಕ್ಕೆ ಅವರ ಚಿತ್ರದ ಮೇಲೆ ಕುರುಡು ವಿಶ್ವಾಸವಾ? ನೋಡಿಯೇ ಆಯ್ಕೆ ಮಾಡಿದ್ದೇವೆ ಅನ್ನೋದು ನಿಮ್ಮ ಉತ್ತರವಾಗಿದ್ದರೆ, ಸೆನ್ಸಾರ್ ಕೂಡಾ ಆಗಿಲ್ಲದ ಚಿತ್ರವನ್ನು ಹೇಗೆ ನೋಡಿದಿರಿ? ಸೆನ್ಸಾರ್ ಟೇಬಲ್‌ನಲ್ಲಿ ಚಿತ್ರಕ್ಕೆ ಕತ್ತರಿ ಬೀಳಬಹುದು. ವಯಸ್ಕರ ಚಿತ್ರದ ಸರ್ಟಿಫಿಕೇಟ್ ಸಿಗಬಹುದು ಅಥವಾ ಸೆನ್ಸಾರ್ ಮಂಡಳಿ ಚಿತ್ರವನ್ನು ರಿವೈಸಿಂಗ್ ಕಮಿಟಿಗೆ ಕಳಿಸಬಹುದು ಅಥವಾ ಬೇರೆ ಚಿತ್ರಗಳ ಕ್ಯೂ ಇರೋ ಕಾರಣಕ್ಕೆ ನಿಗದಿತ ಸಮಯಕ್ಕೆ ಸೆನ್ಸಾರೇ ಆಗದಿರಬಹುದು.
ಹಾಗಾದ್ರೆ ಯಾವ ನಂಬಿಕೆಯ ಮೇಲೆ ಚಿತ್ರವನ್ನು ಲಿಸ್ಟಿಗೆ ಸೇರಿಸಿಕೊಂಡಿರಿ? ನಾಳೆ ಯಾರೋ ಖ್ಯಾತ ನಿರ್ದೇಶಕ 24 ಗಂಟೇಲಿ ಒಂದು ಅದ್ಭುತ ಸಿನಿಮಾ ರೆಡಿ ಮಾಡ್ಕೊಂಡು ಬರ್ತೀನಿ ಅಂಥ ಕತೆ ಹೇಳಿ ಹೋಗ್ತಾನೆ. ಅವನ ಚಿತ್ರವನ್ನು ಪ್ರೀಮಿಯರ್‌ಗೆ ಆಯ್ಕೆ ಮಾಡ್ತೀರಾ?

ಬಿ. ಸುರೇಶ ಅವರು ಈ ರೀತಿ ಪ್ರಶಸ್ತಿಗಾಗಿ, ಪ್ರಚಾರಕ್ಕಾಗಿ, ಹೆಸರಿಗಾಗಿ ಎಂದೂ ಲಾಬಿ ಮಾಡಿದವರಲ್ಲ. ಒಳದಾರಿ ಹುಡುಕುವವರಲ್ಲ. ವಾಮಮಾರ್ಗಗಳನ್ನು ಹಿಡಿದವರಲ್ಲ. ಸ್ಕ್ರೀನಿಂಗ್‌ಗೆ ಮೊದಲು ಸೆನ್ಸಾರ್ ಆಗಿ ರೆಡಿ ಇದ್ದರೆ ಸಾಕು ಅಂತ ಅವರು ಅಂದುಕೊಂಡಿರಬಹುದು. ಅವರನ್ನು ಈ ವಿಷಯದಲ್ಲಿ ತಪ್ಪಿತಸ್ಥರೆಂದು ಹೇಳಲಾಗುವುದಿಲ್ಲ. ಅವರು ಕಿರುತೆರೆ ವಿಷಯದಲ್ಲಿ ಅನುಭವಿಗಳಿರಬಹುದು. ಆರೆ ಸಿನಿಮಾ ವಿಭಾಗಕ್ಕೆ ಕೆಲನು ಪ್ರಶಸ್ತಿಗಳನ್ನು ಪಡೆದಿದ್ದರೂ ಇನ್ನಾದರೂ ಮುಗ್ಧರೇ, ಅವರು ವಿವಾದಗಳಿಂದ ದೂರವಿರುವವರು. ಅವರನ್ನು ಚಿತ್ರೋತ್ಸವ ಸಮಿತಿ ದಾರಿ ತಪ್ಪಿಸಿದ್ಯಾಕೆ?

ಅಕಸ್ಮಾತ್ ಕೊನೆಘಳಿಗೆಯಲ್ಲಿ ಸೆನ್ಸಾರ್ ಕಾರಣಕ್ಕೋ ಅಥವಾ ಇನ್ಯಾವುದೋ ಚಿತ್ರ ನಿರ್ದೇಶಕರಿಂದಲೋ ಈ ಪ್ರಶ್ನೆ ಬಂದು ಅವರ ಚಿತ್ರ ಪ್ರದರ್ಶನ ಆಗದಿದ್ದರೆ ಅವರಿಗೆ ಮುಜುಗರ ಆಗುವುದಿಲ್ಲವೇ? ನಿರಾಶೆ ಆಗುವುದಿಲ್ಲವೇ? ಎಲ್ಲಕ್ಕಿಂತ ಚಿತ್ರಪ್ರೇಮಿಗಳಿಗೆ ನಿರಾಶೆ ಆಗುವುದಿಲ್ಲವೇ?
ಇದೆಲ್ಲದರ ಜೊತೆ ಆ ಚಿತ್ರದಿಂದ ತೆರವಾದ ಜಾಗಕ್ಕೆ ಇನ್ಯಾವ ಚಿತ್ರವೂ ಆಯ್ಕೆ ಮಾಡಲಾಗದೇ ನೋಡುಗರಿಗೆ ಒಂದು ಸಿನಿಮಾ ಕಡಿಮೆ ಕೊಟ್ಟಂತಾಗೋದಿಲ್ಲವೇ? ಅಥವಾ ಕೊನೆಗಳಿಗೆಯಲ್ಲಿ ಆ ಜಾಗಕ್ಕೆ ಇನ್ಯಾವುದೋ ಅಯೋಗ್ಯ ಸಿನಿಮಾ ಹಾಕೋ ದು ಸರಿಯೇ?

ಇನ್ನೊಂದು ಪ್ರಶ್ನೆ. ಪ್ರದರ್ಶನ ವಿಭಾಗದಲ್ಲಿ ಸಂಪೂರ್ಣ ಅರ್ಹತೆಯೊಂದಿಗೆ ಆಯ್ಕೆಯಾದ ಚಿತ್ರ ದಯಾಳ್‌ರ 'ಹಗ್ಗದ ಕೊನೆ' ಮಾತ್ರ. ಅದನ್ನೇ ಈಗ ಲಿಸ್ಟಿನಲ್ಲಿ ಎರಡನೇ ಸ್ಥಾನಕ್ಕೆ ತಳ್ಳಿದ್ದೀರಿ. ಆಯ್ಕೆ ಸಮಿತಿ ಚಿತ್ರಕ್ಕೆ ಪ್ರಶಸ್ತಿ ಸಿಗುವ ಯೋಗ್ಯತೆ ಇದೆ ಎಂದು ಶಭಾಶ್‌ಗಿರಿ ನೀಡಿದಾಗಲೂ, ಆ ನಂತರ ದಯಾಳ್ ತಮ್ಮ ಚಿತ್ರವನ್ನು ಕಾಂಪಿಟಿಟಿವ್ ಸೆಕ್ಷನ್‌ನಲ್ಲಿ ಸೇರಿಸಿಕೊಡಿ ಎಂದು ಪತ್ರ ಮುಖೇನ ಮನವಿ ಮಾಡಿಕೊಂಡಾಗಲೂ ಅದನ್ನು ಪರಿಗಣಿಸುವ ಅವಕಾಶ ಇದ್ದಾಗಲೂ ಯಾಕೆ  ನಿರ್ಲಕ್ಷಿಸಿದಿರಿ? ಪ್ರಶಸ್ತಿಯ ಹಣ ಮುಖ್ಯವಲ್ಲದಿರಬಹುದು. ಆದರೆ ಬರುವ ವಾರದಲ್ಲಿ ರಾಜ್ಯಾದ್ಯಂತ ತೆರೆ ಕಾಣುತ್ತಿರುವ ಚಿತ್ರ ಇಲ್ಲಿಯೂ ಪ್ರಶಸ್ತಿಗೆ ಸ್ಪರ್ಧಿಸಿ ಗೆದ್ದಿದ್ದರೆ ಒಳ್ಳೆಯ ಚಿತ್ರಕ್ಕೆ ಅದು ಟಾನಿಕ್ ಆಗಿರುತ್ತಿತ್ತಲ್ಲವೇ ಇದಕ್ಕೆಲ್ಲ ನೆಕ್ಸ್ಟ್ ಟೈಮ್  ಅಂತ ಸಮಾಧಾನ ಮಾಡಿಕೊಳ್ಳೋ ಅವಕಾಶ ಕೂಡಾ ಇರೋದಿಲ್ಲ ಅಲ್ಲವೇ? ಹೋಗ್ಲಿಬಿಡಿ. ಅದು ನಿಮ್ಮ ವಿವೇಚನೆಗೆ ಬಿಟ್ಟ ನಿರ್ಧಾರ ಅಂದುಕೊಳ್ಳೋಣ.

ಆರ್ಟಿಸ್ಟಿಕ್ ನಿರ್ದೇಶಕ ಎಂಬ ಸ್ಥಾನದಲ್ಲಿ ಕುಳಿತಿರುವವರಿಗೆ ಒಂದು ಪ್ರಶ್ನೆ. ಉತ್ತಮ ಚಿತ್ರವೊಂದರ ಆಯ್ಕೆ ವಿಷಯದಲ್ಲಿ ಕೆಲವು ನಿಯಮಗಳನ್ನು ಸಡಿಲಿಸಬಲ್ಲ ಅವಕಾಶ ಇದ್ದಾಗಲೂ 'ಹಗ್ಗದ ಕೊನೆ'ಗೆ ರಿಯಾಯಿತಿ ನೀಡದ ನೀವು ಚಿತ್ರವನ್ನೇ ನೋಡದೆ ಅಥವಾ ಚಿತ್ರವನ್ನು ಸಂಪೂರ್ಣವಾಗುವ ಮೊದಲೇ ( ಸೆನ್ಸಾರ್‌ಗೆ ಮೊದಲೇ) ನೋಡಿ ಹೇಗೆ ಆಯ್ಕೆ ಮಾಡಿ ಬಿಟ್ಟಿರಿ?

ಪ್ರಾದೇಶಿಕ ಕಮಿಟಿಯ ಸದಸ್ಯರೂ ಹಾಗೂ ಸೆನ್ಸಾರ್ ಮಂಡಳಿಯ ಅಧ್ಯಕ್ಷರೂ ಆಗಿರುವ ನಾಗೇಂದ್ರ ಸ್ವಾಮಿ ಅವರನ್ನು ಈ ಚಿತ್ರದ ಆಯ್ಕೆಯ ಬಗ್ಗೆ ವಿಚಾರಿಸಿದರೆ, ಸೆನ್ಸಾರ್ ಆಗುವ ಮೊದಲು ಚಿತ್ರವು ಯಾವ ಚಿತ್ರೋತ್ಸವಕ್ಕೂ, ಪ್ರಶಸ್ತಿಗೂ ಆಯ್ಕೆಯಾಗುವಂತಿಲ್ಲ, ಪ್ರದರ್ಶನವೂ ಆಗುವಂತಿಲ್ಲ ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ಹೇಳುತ್ತಾರೆ. ಈವರೆಗೆ ಈ ಚಿತ್ರ ಸೆನ್ಸಾರ್ ಆಗಿಲ್ಲ ಎಂಬುದನ್ನೂ ಖಾತ್ರಿ ಪಡಿಸುವ ನಾಗೇಂದ್ರ ಸ್ವಾಮಿ, ಕ್ಯೂನಲ್ಲಿರುವ ಚಿತ್ರಗಳನ್ನು ಬಿಟ್ಟು ಚಿತ್ರೋತ್ಸವಕ್ಕೆ ಆಯ್ಕೆಯಾಗಿರೋ ಚಿತ್ರವೆಂಬ  ಕಾರಣಕ್ಕೆ ಮೊದಲೇ ಸೆನ್ಸಾರ್ ಮಾಡಿಕೊಡುವ ಅವಕಾಶ ಇದೆಯಾ ಎಂದು ಕೇಳಿದರೆ, ಖಡಕ್ಕಾಗಿ ಸಾಧ್ಯವೇ ಇಲ್ಲ ಅನ್ನುತ್ತಾರೆ. ಸೆನ್ಸಾರ್ ಆಗದೇ ಚಿತ್ರವೊಂದು ಆಯ್ಕೆ ಆಗೋದಾದ್ರೂ ಹೇಗೆ ಎಂದು ನಮ್ಮನ್ನೇ ಪ್ರಶ್ನಿಸುತ್ತಾರೆ.

ಈಗಾಗಲೇ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿರುವ ಶೇಷಾದ್ರಿಯವರ 'ಡಿಸೆಂಬರ್ 1' ಚಿತ್ರ ಚಿತ್ರೋತ್ಸವದ ಕಾಂಪಿಟಿಟಿವ್ ಸಿನಿಮಾಗಳ ಲಿಸ್ಟ್‌ನಲ್ಲಿ ಕೊನೆಕ್ಷಣದಲ್ಲಿ ಸೇರಿಕೊಂಡಿರುವ ಬಗ್ಗೆಯೂ ಕೆಲವು ಅಪಸ್ವರಗಳು ಹರಿದಾಡುತ್ತಿವೆ. ಇಲ್ಲಿ ಶೇಷಾದ್ರಿಯವಕ ಪ್ರಭಾವ ಕೆಲಸ ಮಾಡಿದೆ ಅಂತಲೂ ಅಸಮಾಧಾನಗೊಂಡವರು ಮಾತನಾಡುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ -ರಾಜ್ಯ ಪ್ರಶಸ್ತಿಯಲ್ಲಂತೂ ನಮಗೆ ಸ್ಪರ್ಧಿಸಲೂ ಅವಕಾಶವಿಲ್ಲದಂತೆ ಮಾಡಿದ್ದಾರೆ. ಕಡೆಯಪಕ್ಷ ನಮ್ಮೂರಿನ ಸಿನಿಮೋತ್ಸವದಲ್ಲೂ ನಾವು ಇವರ ಸಿನಿಮಾಗಳ ಕಾರಣಕ್ಕೆ ವಂಚಿತರಾಗಬೇಕಾ ಎಂಬ ದುಃಖ ಅವರದು. ಆದರೆ ಶೇಷಾದ್ರಿಯವರ ಚಿತ್ರ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಆಕ್ಷೇಪಾರ್ಹವಂತೂ ಅನಿಸುತ್ತಿಲ್ಲ. ಬೇಕಾದರೆ ಕನ್ನಡ ಸಿನಿಮಾಗಳ ಸಂಖ್ಯೆಯನ್ನು ಹೆಚ್ಚಿಸಿ ಎಂದು ಕೇಳಿಕೊಳ್ಳಬಹುದಷ್ಟೇ.

ಅಂದು ಟಿಎನ್ನೆಸ್‌ಗೆ ಛೀಮಾರಿ ಹಾಕಿದ್ದೇಕೆ?
ಈ ಹಿಂದೆ ಟಿ.ಎನ್. ಸೀತಾರಾಮ್ ಅವರ 'ಮೀರಾಮಾಧವ ರಾಘವ' ಚಿತ್ರವನ್ನು ಸೆನ್ಸಾರ್ ಆಗುವ ಮೊದಲೇ ತಮ್ಮ ಹಿತೈಷಿಗಳ ನಡುವೆ ಸ್ಕ್ರೀನಿಂಗ್ ಮಾಡಿದ್ದಕ್ಕೇ ಸೆನ್ಸಾರ್ ಮಂಡಳಿ ಛೀಮಾರಿ ಹಾಕಿ ಸೀತಾರಾಮ್ ಅವರಿಂದ ಕ್ಷಮೆಯಾಚಿಸುವಂತೆ ಮಾಡಿತ್ತು. ಅಂಥದರಲ್ಲಿ ಚಿತ್ರೋತ್ಸವಕ್ಕೆ ಸೆನ್ಸಾರ್ ಆಗದ ಚಿತ್ರ ಆಯ್ಕೆ ಆಗೋದು ಯಾವ ನಿಯಮದ ಅಡಿಯಲ್ಲಿ ಸರಿಯಾದೀತು? ಉತ್ತರಿಸಬೇಕು.

- ನವೀನ್ ಸಾಗರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com