ಅಕ್ಕಿ ಕೈಗೆ ಲಾಂಗು!

ಮುಖ ನೋಡಿದರೆ 'ಸಾಫ್ಟ್‌'ವೇರ್ ಇಂಜಿನಿಯರ್‌ನಂತೆ. ಆದರೂ ಕೈಯಲ್ಲಿ ಲಾಂಗ್ ಹಿಡಿದು ಕೊತ್ವಾಲ್ ..
ಅಕ್ಕಿ ಕೈಗೆ ಲಾಂಗು!

ಮುಖ ನೋಡಿದರೆ 'ಸಾಫ್ಟ್‌'ವೇರ್ ಇಂಜಿನಿಯರ್‌ನಂತೆ. ಆದರೂ ಕೈಯಲ್ಲಿ ಲಾಂಗ್ ಹಿಡಿದು ಕೊತ್ವಾಲ್ ರಾಮಚಂದ್ರನನ್ನೂ ಮೀರಿಸುವ ರೇಂಜಿಗೆ ಹೀಗೆ ಪೋಸು ಕೊಡುತ್ತಿದ್ದವರ ಪರಿಚಯ ನಿಮಗಿದೆ. ಸುವರ್ಣ ನ್ಯೂಸ್‌ನ ಗೌರೀಶ್ ಅಕ್ಕಿ ಮಾಧ್ಯಮ ಕ್ಷೇತ್ರ ಬಿಟ್ಟು ಸಿನಿಮಾ ಕಡೆಗೆ ಮುಖ ಮಾಡಿದ್ದು ನಿಮಗೆ ಗೊತ್ತೇ ಇದೆ. ಆದರೆ, 'ಸಿನಿಮಾ ಮೈ ಡಾರ್ಲಿಂಗ್‌' ಎಂದು ಹೊರಟ ಗೌರೀಶ್ ಅಕ್ಕಿ ಕೈಗೆ ಮಚ್ಚು ಕೊಟ್ಟ ಪುಣ್ಯಾತ್ಮ ನಾಗರಾಜ್ ಪೀಣ್ಯ. ಈಗಾಗಲೇ ಕೆಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಗೌರೀಶ್ ಮೊದಲ ಬಾರಿಗೆ ಲಾಂಗು ಹಿಡಿದಿದ್ದಾರೆ. ಅಕ್ಕಿಗೆ ಮಾತ್ರವಲ್ಲ, ಅವರನ್ನು ಹತ್ತಿರದಿಂದ ಕಂಡವರಿಗೂ ಇದೊಂದು ಬ್ರೇಕಿಂಗ್ ನ್ಯೂಸ್ ಅಂದುಕೊಳ್ಳಿ ಎಂಬುದು ನಿರ್ದೇಶಕ ನಾಗರಾಜ್ ಪೀಣ್ಯರ ಮಾತು.
 ಗೌರೀಶ್ ಅಕ್ಕಿ ಹೀಗೆ ಲಾಂಗು ಹಿಡಿದಿರುವುದನ್ನು ನೋಡಿ 'ಪೆನ್ನು ಹಿಡಿಯುವ ಪತ್ರಕರ್ತರು ಮಚ್ಚು ಹಿಡಿದಿದ್ದಾರಲ್ಲಪ್ಪ!?' ಎನ್ನುವ ಹಾಗಿಲ್ಲ. ಯಾಕೆಂದರೆ ಪತ್ರಕರ್ತರು ಪೆನ್ನು ಬಿಟ್ಟು ತುಂಬಾ ವರ್ಷಗಳಾಗಿದೆ. ಪೆನ್ನು ಜಾಗಕ್ಕೆ ಕೀ ಬೋರ್ಡ್ ಬಂದಿದೆ. ಪಾಪ ಗೌರೀಶ್ ಅಕ್ಕಿ ಅವರು ಕೀ ಬೋರ್ಡ್ ಅನ್ನೂ ಹೆಚ್ಚು ಬಳಸಿಲ್ಲ. ಯಾಕೆಂದರೆ ಅವರದ್ದು ದೃಶ್ಯ ಮಾಧ್ಯಮ. ಇರಲಿ, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರ ಕೈಯಿಂದ ತಪ್ಪಿಸಿಕೊಂಡು ಬಂದಂತೆ ಕಾಣುವ ಈ ಲಾಂಗ್‌ಗೆ ಲಾಂಗ್ ಲೈಫ್ ಇದೆ ಎಂಬುದು ಅಕ್ಕಿ ಮಾತು. ಈ ಹಿಂದೆ 'ಪದೇ ಪದೇ' ಎನ್ನುವ ಚಿತ್ರವನ್ನು ನಿರ್ದೇಶಿಸಿದ ನಾಗರಾಜ್ ಪೀಣ್ಯರ ಎರಡನೇ ಚಿತ್ರ, 'ನಮಕ್ ಹರಾಮ್‌'. ಗೋಲ್ಡನ್ ಸ್ಟಾರ್ ಗಣೇಶ್ ಸೋದರ ಮಹೇಶ್ ಈ ಚಿತ್ರದ ನಾಯಕ. ಇದೇ ಚಿತ್ರಕ್ಕೆ ಗೌರೀಶ್ ಅಕ್ಕಿ ಹೀಗೆ ಲಾಂಗ್ ಹಿಡಿದು ರೌಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪತ್ರಕರ್ತರಾಗಿ ಸಿನಿಮಾ ಮಂದಿಯನ್ನು ಸಂದರ್ಶಿಸಿರುವ ಗೌರೀಶ್ ಅಕ್ಕಿ ಅವರ ಸ್ಟೈಲಿನಲ್ಲೇ ಈ ಲಾಂಗು ಸ್ಟೋರಿ ಕೇಳೋಣ ಬನ್ನಿ... ಗೌರೀಶ್ ಅಕ್ಕಿ ಅವರೇ ನನ್ನ ದ್ವನಿ ನಿಮಗೆ ಕೇಳಿಸುತ್ತಿದೆಯಾ. ನೀವು ಲಾಂಗು ಹಿಡಿದಿದ್ದೀರಿ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? 'ಹೌದು ನಮಕ್ ಹರಾಮ್ ಚಿತ್ರದಲ್ಲಿ ನಾಗರಾಜ್ ಅವರು ಒಳ್ಳೆಯ ಪಾತ್ರ ಕೊಟ್ಟಿದ್ದಾರೆ. ನಾನು ಚಿತ್ರದಲ್ಲಿ ಪೂರ್ತಿ ರೌಡಿ ಅಲ್ಲ. ಮಾಜಿ ರೌಡಿ. ಒಂದು ಗ್ಯಾರೇಜ್ ಇಟ್ಟುಕೊಂಡಿರುತ್ತೇನೆ. ಆದರೆ, ಒಮ್ಮೆ ನಾಯಕನನ್ನು ಸಾಯಿಸುವ ಸಂಚಿನಲ್ಲಿ ನಾನೂ ಭಾಗಿಯಾಗುತ್ತೇನೆ. ಪಾತ್ರದ ಹೆಸರು ಬಂಗಾರು ಅಂತ. ತುಂಬಾ ಚೆನ್ನಾಗಿದೆ. ಲಾಂಗ್ ನನಗೆ ಸೂಟ್ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಶೂಟಿಂಗ್ ಅಂತೂ ಮಾಡಿದ್ದಾರೆ...' ನಿಮ್ಮ ಮಾಹಿತಿಗೆ ಧನ್ಯವಾದಗಳು ಗೌರೀಶ್ ಅವರೇ.
ಸಿನಿಮಾ ನಿರ್ದೇಶಕನಾಗಲು ಹೋಗಿ ರೌಡಿಯಾಗಿರುವ ಗೌರೀಶ್ ಅಕ್ಕಿ ಅವರ ಕುರಿತು ಇನ್ನಷ್ಟು ಮಾಹಿತಿ ಹೇಳುವುದಾದರೆ... ಮಾಧ್ಯಮ ಕ್ಷೇತ್ರ ಬಿಟ್ಟ ಮೇಲೆ 'ಸಿನಿಮಾ ಮೈ ಡಾರ್ಲಿಂಗ್‌' ಚಿತ್ರದ ನಿರ್ದೇಶನಕ್ಕೆ ತಯಾರಿ ನಡೆಸಿಕೊಳ್ಳುತ್ತಿದ್ದರು. ಈ ಮಧ್ಯೆ ಸಿಪಾಯಿ, ಬಸವಣ್ಣ, ಲೂಸಿಯಾ, ಉಳಿದವರು ಕಂಡಂತೆ, ಚಾರ್ಮಿನಾರ್, ಮತ್ತೆ ಬನ್ನಿ ಪ್ರೀತ್ಸೋಣ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 'ನಿರ್ದೇಶಕರಾಗಿ ಕಾಸಿನ ಮುಖ ಇನ್ನೂ ನೋಡಿಲ್ಲ. ಆದರೆ, ನಟನೆಯಲ್ಲಿ ಸಂಪಾದನೆ ಕೈ ಹಿಡಿದಿದೆ. ನನಗೆ ಗೊತ್ತಿಲ್ಲದ ಪಾತ್ರ ಮಾಡಬೇಕು ಅಂದುಕೊಂಡಾಗ ಬಂಗಾರು ಎನ್ನುವ ರೌಡಿ ಪಾತ್ರ ಸಿಕ್ಕಿದೆ. ತುಂಬಾ ಚೆನ್ನಾಗಿದೆ. ಅಲ್ಲದೇ ಈ 'ನಮಕ್ ಹರಾಮ್‌' ಚಿತ್ರದಲ್ಲಿ 5 ಮಂದಿ ನಿರ್ದೇಶಕರು ಐಟಂ ಸಾಂಗಿನಲ್ಲಿ ಕಾಣಿಸಿಕೊಂಡಿದ್ದೇವೆ. ಇಂಥ ವಿಶೇಷಗಳಿಂದ ಕೂಡಿದ್ದರಿಂದ ಪಾತ್ರ ಮಾಡಲು ಒಪ್ಪಿಕೊಂಡೆ' ಎನ್ನುವಲ್ಲಿಗೆ ಗೌರೀಶ್ ಅಕ್ಕಿಯ 'ಲಾಂಗ್ ಸ್ಟೋರಿ' ಮುಗಿಸೋಣ.

-ಆರ್.ಕೇಶವಮೂರ್ತಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com