ಕನ್ನಡ ಸಿನೆಮಾ; ಕನ್ನಡಪ್ರಭ.ಕಾಂ ವಿಮರ್ಶೆಗಳ ವಿಮರ್ಶೆ

ಕನ್ನಡಪ್ರಭ.ಕಾಂ ವಿಮರ್ಶೆಗಳನ್ನು ಶ್ರದ್ಧೆಯಿಂದ ನೀವು ಓದುತ್ತಿರುವುದು ಆಯಾ ವಿಮರ್ಶೆಗೆ ನೀವು ನೀಡುತ್ತಿರುವ ಅಸಂಖ್ಯಾತ ಪ್ರತಿಕ್ರಿಯೆಗಳೇ
ವಿಮರ್ಶೆಗಳ ವಿಮರ್ಶೆ
ವಿಮರ್ಶೆಗಳ ವಿಮರ್ಶೆ

ಬೆಂಗಳೂರು: ಕನ್ನಡಪ್ರಭ.ಕಾಂ ವಿಮರ್ಶೆಗಳನ್ನು ಶ್ರದ್ಧೆಯಿಂದ ನೀವು ಓದುತ್ತಿರುವುದು ಆಯಾ ವಿಮರ್ಶೆಗೆ ನೀವು ನೀಡುತ್ತಿರುವ ಅಸಂಖ್ಯಾತ ಪ್ರತಿಕ್ರಿಯೆಗಳೇ(ನಮ್ಮ ಅಂತರ್ಜಾಲ ತಾಣ ಮತ್ತು ಫೇಸ್ಬುಕ್) ಸಾಕ್ಷಿ. ಕೆಲವೊಮ್ಮೆ ಸಹಮತ ವ್ಯಕ್ತಪಡಿಸಿದ್ದೀರಿ ಮತ್ತೆ ಕೆಲವೊಮ್ಮೆ ಕೋಪ ವ್ಯಕ್ತಪಡಿಸಿದ್ದೀರಿ ಆದರೆ ಕನ್ನಡಪ್ರಭ.ಕಾಂ ಜೊತೆಗಿನ ನಿಮ್ಮ ಪ್ರೀತಿ ವಿಶ್ವಾಸ ಎಂದಿಗೂ ಕುಂದದಂತೆ ನೋಡಿಕೊಂಡಿದ್ದೀರಿ.

ಈ ಪ್ರೀತಿ ವಿಶ್ವಾಸಗಳೇ ನಾವು ನಮ್ಮ ಅಂತರ್ಜಾಲದ ಕಂಟೆಂಟ್ ಬಗೆಗೆ ಚಿಂತೆ, ವಿಮರ್ಶೆಗಳನ್ನು ಮಾಡಲು ಆಗಾಗ ನಮ್ಮನ್ನು ನೂಕುತ್ತಿರುತ್ತದೆ. ಈ ಸಿನೆಮಾ ವಿಮರ್ಶೆಗಳು ಅಷ್ಟೇ. ನಾವು ವಿಮರ್ಶೆ ಯಾರಿಗಾಗಿ ಬರೆಯುವುದು ಎಂದು ನಮ್ಮ ವಿಮರ್ಶಾ ತಂಡದಲ್ಲಿ ನಾವು ಆಗಾಗ ಕೇಳಿಕೊಳ್ಳುತ್ತಿರುತ್ತೇವೆ! ನಾವು ಸ್ವಲ್ಪ ಖಾರದ ವಿಮರ್ಶೆ ಬರೆದಾಗ ಹಲವಾರು ಓದುಗರು ನಮ್ಮನ್ನು 'ಕನ್ನಡ ಚಿತ್ರರಂಗ'ದ ವಿರೋಧಿಗಳು ಎಂದು ಪ್ರೀತಿಯಿಂದ ಜರಿದದ್ದುಂಟು. ಆ ಪ್ರತಿಕ್ರಿಯೆಗಳನ್ನು ಅಷ್ಟೇ ಪ್ರೀತಿಯಿಂದ ಸ್ವೀಕರಿಸಿದ್ದೇವೆ, ಏಕೆಂದರೆ ನಮ್ಮ ಬದ್ಧತೆ ಇರುವುದು ಕನ್ನಡ ಚಿತ್ರ ಪ್ರೇಕ್ಷಕರ ಮೇಲೆ ಹಾಗು ಕನ್ನಡಪ್ರಭ.ಕಾಂ ಓದುಗರ ಮೇಲೆ. ಆದುದರಿಂದ ನಾವು ಚೆನ್ನಾಗಿಲ್ಲದ ಸಿನೆಮಾಗಳ ಮೇಲೆ ಯಾವುದೇ  ಕನಿಕರ ತೋರುವುದಿಲ್ಲ. ಪಕ್ಕದ ರಾಜ್ಯಗಳ ಸಿನೆಮಾರಂಗಗಳಿಗಿಂತಲೂ ಉನ್ನತವಾಗಿ ನಮ್ಮ ಸಿನೆಮಾಗಳು ಬೆಳೆಯಬೇಕು ಎಂಬ ಉದ್ದೇಶದಿಂದಲೇ, ಕನ್ನಡ ಚಿತ್ರಗಳ ಕುಂದುಕೊರತೆಗಳನ್ನು ಮುಂದೆಯೂ ಪಟ್ಟಿಮಾಡುತ್ತಲೇ ಇರುತ್ತೇವೆ.

ನಮ್ಮ ವಿಮರ್ಶೆಗಳ ಮೇಲೆ ಮತ್ತೊಂದು ಆಕ್ಷೇಪಣೆ ಇರುತ್ತದೆ. ಇದು ಹೆಚ್ಚಿನ ಸಂಖ್ಯೆಯಲ್ಲಿರದಿದ್ದರೂ ಕೆಲವೊಮ್ಮೆ ಕಂಡುಬರುವುದುಂಟು. ನಾವು ಒಂದು ಸಿನೆಮಾದ ಬಗ್ಗೆ ಒಳ್ಳೆಯ ವಿಮರ್ಶೆ ಬರೆದಾಗ ಆ ಚಿತ್ರತಂಡದಿಂದ ಯಾವುದೋ ಪ್ರಭಾವಕ್ಕೆ ಒಳಾಗಿದ್ದೇವೆ ಎಂದೋ, ಅಥವಾ ಋಣಾತ್ಮಕ ವಿಮರ್ಶೆ ಬರೆದಾಗ ವಿರೋಧಿ ತಂಡದಿಂದ ಪ್ರಭಾವಿತವಾಗಿದ್ದೇವೆ ಎನ್ನುವುದು. ಇದನ್ನು ಮಾತ್ರ ಕನ್ನಡಪ್ರಭ.ಕಾಂ ತಂಡ ಸಾರಾಸಗಟಾಗಿ ಅಲ್ಲಗೆಳೆಯುತ್ತೇವೆ. ನಮ್ಮ ತಂಡದ ಪ್ರಾಮಾಣಿಕತೆಯ ಮೇಲೆ ನಿಮಗೆ ಯಾವುದೇ ಸಂಶಯ ಬೇಡ. ಇಲ್ಲಿಯವರೆಗೂ ನಾವು ಮಾಡಿರುವ ಚಿತ್ರವಿಮರ್ಶೆಗಳು ಪ್ರಾಮಾಣಿಕತೆಯಿಂದ ನಿರ್ಭಿಡೆಯಿಂದ ಬರೆಯಲಾಗಿದೆ. ಓದುಗರ ವಿಶ್ವಾಸಕ್ಕೆ ಧಕ್ಕೆ ತರುವಂತಹುವವು ಯಾವುವೂ ಇಲ್ಲ! ಆದರೆ ನಮ್ಮ ಬರವಣಿಗೆಯಲ್ಲಿ ಅಂದರೆ ಅದರ ಸಾಹಿತ್ಯಿಕ ಗುಣಮಟ್ಟದಲ್ಲಿ ಸುಧಾರಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತೇವೆ.

೨೦೧೫ರ ತ್ರೈಮಾಸಿಕದಲ್ಲಿ ಬಂದಿರುವ ಸಿನೆಮಾಗಳಲ್ಲಿ ಕನ್ನಡಪ್ರಭ.ಕಾಂ ೧೦ ಸಿನೆಮಾಗಳ ವಿಮರ್ಶೆ ಮಾಡಿದೆ. ನಮ್ಮ ತಂಡ ಸಣ್ಣದಿರುವುದರಿಂದ ಎಲ್ಲ ಸಿನೆಮಾಗಳನ್ನು ನೋಡದಿರುವುದಕ್ಕೆ ಕ್ಷಮೆ ಇರಲಿ. ಆದರೆ ನಾವು ಬರೆದ ವಿಮರ್ಶೆಗೂ ಹಾಗೂ ಸಿನೆಮಾಗಳು ಚಿತ್ರಮಂದಿರದಲ್ಲಿ ನೀಡಿದ ಪ್ರದರ್ಶನಕ್ಕೂ ಒಮ್ಮೆ ತಾಳೆ ಮಾಡಿ ನೋಡಿ ಆಗ ನೀವು ನಮ್ಮ ಪ್ರಾಮಾಣಿಕತೆಯನ್ನು ಪ್ರಶ್ನಿಸಲಾರಿರಿ. 'ಸಿದ್ದಾರ್ಥ' ಸಿನೆಮಾವೊಂದು ಮಾತ್ರ ವಿಮರ್ಶಕನನ್ನು ಮೀರಿ ಅದ್ಯಾಕೆ ಪ್ರೇಕ್ಷಕನ ಪ್ರತಿಕ್ರಿಯೆಗಳನ್ನು ಮೀರಿ ೫೦ ದಿನ ಪೂರೈಸಿದ್ದು. ಇದೊಂದನ್ನು ಹೊರತುಪಡಿಸಿದರೆ ಈ ತ್ರೈಮಾಸಿಕದಲ್ಲಿ ಹಿಟ್ ಚಿತ್ರಗಳ್ಯಾವುವು? ನಾವು 'ಮೈತ್ರಿ'ಯನ್ನು ನೋಡಿ ಎಂದು ಹೇಳಿದ್ದೆವು. ಅದು ೪೦ ದಿನಗಳನ್ನು ಮೀರಿ ಓಡುತ್ತಿದೆ. 'ಕೃಷ್ಣಲೀಲಾ' ಒಳ್ಳೆಯ ಸಿನೆಮಾ ಎಂದೆವು. ಅದಕ್ಕೆ ಕೂಡ ಉತ್ತಮ ಓಪನಿಂಗ್ ದೊರೆತು ಮುನ್ನಡೆಯುತ್ತಿದೆ.

'ಜಾಕ್ಸನ್', 'DK ', 'ಶಿವಂ' ಸಿನೆಮಾಗಳನ್ನು ನೋಡಲಾಗುವುದಿಲ್ಲ ಎಂದಿದ್ದೆವು. ಈ ಸಿನೆಮಾಗಳು ಬಿದ್ದುಹೋದ ರೀತಿ ನೀವೆಲ್ಲ ಬಲ್ಲಿರಿ. ರಿಮೇಕ್ ಗಳಿಂದ ಕನ್ನಡ ಚಿತ್ರರಂಗ ಹೊರಬರಬೇಕು ಎಂದು, 'ಖುಷಿಖುಷಿಯಾಗಿ', 'ರಾಜ ರಾಜೇಂದ್ರ', 'ಗೋವಾ' ಇತ್ಯಾದಿ ಸಿನೆಮಾಗಳ ಬಗ್ಗೆ ಕಟು ನಿಲುವು ತಳೆದೆವು. ರಿಮೇಕ್ ಎಂದಷ್ಟೇ ಅಲ್ಲ. ಅದರ ಹೊರತಾಗಿಯೂ ಇವುಗಳ ಗುಣಮಟ್ಟ ಕಳಪೆಯಾಗಿತ್ತು. ಇವುಗಳ ಸ್ಥಿತಿ ಏನಾಯಿತು ನೀವು ಬಲ್ಲಿರಿ. ಇನ್ನು ರುದ್ರತಾಂಡವ ಒಳ್ಳೆಯ ರಿಮೇಕ್ ಎಂದು ನಾವು ಹೇಳಿದರೂ ಪ್ರೇಕ್ಷಕರಾಗಿ ನೀವೇ ರಿಮೇಕ್ ಸಿನೆಮಾವನ್ನು ತಿರಸ್ಕರಿಸಿದಿರಿ. ಸ್ವಲ್ಪ ಹಿಂದಕ್ಕೆ ಹೋಗಿ ನೆನಪಿಸಿಕೊಂಡರೆ ೨೦೧೪ರ ದ್ವಿತೀಯ ಭಾಗದಲ್ಲಿ ನಾವು ಪೂರ್ಣ ಅಂಕ ಕೊಟ್ಟ 'ಲವ್ ಇನ್ ಮಂಡ್ಯ' ಮತ್ತು 'ಮಿ&ಮಿಸೆಸ್ ರಾಮಾಚಾರಿ' ಶತದಿನ ಪೂರೈಸಿದೆವು. ಈಗ 'ವಾಸ್ತುಪ್ರಕಾರ' ಸಿನೆಮಾದ ವಿಮರ್ಶೆ ನಿಮ್ಮ ಮುಂದಿದೆ. ಅದರ ಭವಿಷ್ಯವನ್ನು ನೀವು ನಿರ್ಧರಿಸಲಿದ್ದೀರಿ.

ನೀವು ಮತ್ತೊಮ್ಮೆ ನೆನಪಿಸಿಕೊಳ್ಳಲು ಈ ತ್ರೈಮಾಸಿಕದಲ್ಲಿ ನಾವು ವಿಮರ್ಶಿಸಿದ ಚಿತ್ರಗಳ ಪಟ್ಟಿ ಮತ್ತು ಅವುಗಳ ಗುಣಮಟ್ಟದ ಬಗ್ಗೆ ನಾವು ಬರೆದ ಕೆಲವು ಸಾಲುಗಳನ್ನು ನೀಡಿದ್ದೇವೆ. ಮತ್ತೊಮ್ಮೆ ಓದಿ. ಪ್ರೀತಿ ವಿಶ್ವಾಸ ಇರಲಿ.  

೧. [ಜನವರಿ-೧] ಖುಷಿ ಖುಷಿಯಾಗಿ - ಹೊಸ ವರ್ಷಕ್ಕೆ ಪೇಲವ ರಿಮೇಕ್ ಸ್ವಾಗತ
ಅಷ್ಟೇನೂ ಸಶಕ್ತ ಕಥೆಯಿಲ್ಲದ, ತೆಲಗಿನಲ್ಲಿ ೧೦೦ ದಿನ ಪ್ರದರ್ಶನ ಕಂಡಿದೆ ಎಂಬುದನನ್ನು ಹೊರತುಪಡಿಸಿದರೆ, ಬೇರೆ ಇನ್ಯಾವ ಅಂಶಗಳೂ ಈ ಕಥೆಯನ್ನು ಯಥಾವತ್ತಾಗಿ ಕನ್ನಡದಲ್ಲಿ ರಿಮೇಕ್ ಮಾಡಲೇಬೇಕು ಎಂಬ ಅಂಶಕ್ಕೆ ಪುಷ್ಟಿ ನೀಡುವುದಿಲ್ಲ.
೨. [ಜನವರಿ-1] ಶಿವಂ - 'ಶಿವಂ' ಅಂತಾ ಹೋಗಬೇಡಿ ರೋಡಿನಲಿ
ಹಿನ್ನೆಲೆ ಸಂಗೀತ ಚಿತ್ರಕ್ಕೆ ಜೀವಾಳವಾಗಿದೆ. ಸಿ. ಆರ್ ಮನೋಹರ್ ಚಿತ್ರಕ್ಕೆ ಬಂಡವಾಳ ಹೂಡಿದ್ದರೂ, ಚಿತ್ರಕಥೆಯಲ್ಲಿ ಬಂಡವಾಳವೇ ಇಲ್ಲ.
ಈ ಭಾನುವಾರ ಕಾಯಕವೇ ಕೈಲಾಸ ಎಂದುಕೊಂಡು ನಿಮ್ಮ ನಿಮ್ಮ ಕೆಲಸದಲ್ಲಿ ಮಗ್ನರಾಗುವುದು, ಕಾಯಕಯೋಗಿ ಬಸವಣ್ಣನವರಿಗೆ ತೋರಬಹುದಾದ ಗೌರವ.
೩. [ಜನವರಿ-೧೫] ಜಾಕ್ಸನ್- ಮೂನ್ ವಾಕ್ ಅಲ್ಲ ಇದು.. ಜಾಕ್ಸನ್ ನ ಬೇನ್-ವಾಕ್ (Bane-Walk)
ಮೈಕೆಲ್ ಜಾಕ್ಸನ್ ಅವರ ಮೂನ್ ವಾಕ್ ಜಗತ್-ಪ್ರಸಿದ್ಧ ಹಾಗೂ ಕೋಟ್ಯಂತರ ಜನರಿಗೆ ರಂಜಿಸಿದ ಸ್ಫೂರ್ತಿ ಕೊಟ್ಟ ನೃತ್ಯ. ಆದರೆ ಕನ್ನಡದ ಈ ಜಾಕ್ಸನ್ ಸಿನೆಮಾ ಬೇನ್-ವಾಕ್ (ಹಿಂಸೆಯ ನಡಿಗೆ).
೪. [ಜನವಿರಿ-೨೩] ಸಿದ್ಧಾರ್ಥ - ಪ್ರಸಿದ್ಧನಾಗಲು ಸಿದ್ಧನಾಗಬೇಕು ಸಿದ್ಧಾರ್ಥ
ಬಿಗಿ ನಿರೂಪಣೆಯಷ್ಟೇ ಪ್ರೇಕ್ಷಕನಿಗೆ ಸಮಾಧಾನ ತರುವ ಅಂಶ. ದ್ವಿತೀಯಾರ್ಧದ ಅಂತ್ಯದಲ್ಲಿ ಸಾಧುಕೋಕಿಲಾ ಅವರ ಬರುವಿಕೆಯ ನಂತರ ಸಿನೆಮಾ ಸ್ವಲ್ಪ ಚುರುಕು ಪಡೆದು, ಅಂತ್ಯ ಪ್ರೇಕ್ಷಕನಿಗೆ ಒಂದು ಚೂರು ಕಚಗುಳಿ ಇಡುವುದು ಬಿಟ್ಟರೆ ಗಮನಾರ್ಹ ಎಂಬುದಂತೂ ಏನು ಇಲ್ಲ!
ಈ ಸಿದ್ಧಾರ್ಥ ಕಲಿಯುವುದು ಬಹಳಷ್ಟಿದೆ. ಈ ಸಿದ್ಧಾರ್ಥ ಮುಂದಿನ ದಿನಗಳಲ್ಲಿ ಕನ್ನಡ ಚಲನಚಿತ್ರೋದ್ಯಮದ ಬುದ್ಧನಾಗಲಿ ಎಂದು ಆಶಿಸೋಣ!
೫. [ಫೆಬ್ರವರಿ -೬] ರಾಜ ರಾಜೇಂದ್ರ - ಹಿಸ್ ಹೈನೆಸ್ಸ್ ರಾಜ ರಾಜೇಂದ್ರ
ಒಟ್ಟಿನಲ್ಲಿ ಸತ್ವ ಕತೆಯಿಲ್ಲದೆ, ಚುರುಕು ಹಾಸ್ಯ ಸಂಭಾಷಣೆ-ಸನ್ನಿವೇಶಗಳ ಕೊರತೆಯಿಂದ, ಕೆಟ್ಟ ಸಂಗೀತದಿಂದ ಸಿನೆಮಾ ಹಿಸ್ ಹೈನೆಸ್ಸ್ ಯಾವಾಗ ಮುಗಿಯುತ್ತಪ್ಪಾ ಎಂದೆನಿಸುತ್ತದೆ.
೬. [ಫೆಬ್ರವರಿ -13] DK  - ಸಿನೆಮಾವಿಡೀ ಬಾಯಿಬDK, ಪ್ರೇಕ್ಷಕನ ಚಡಪದಕ್
ಉತ್ತಮವಾದ ವಿಷಯವೊಂದನ್ನು ತೆಗೆದುಕೊಂಡು ಅದನ್ನು ಕಾರ್ಯರೂಪಕ್ಕೆ ತರಲು ಕಥೆಯ ಆಯ್ಕೆಯಲ್ಲಿ, ನಟರ ಆಯ್ಕೆಯಲ್ಲಿ, ಸಂಭಾಷಣೆ ಬರೆಯುವುದರಲ್ಲಿ, ಸ್ಕ್ರಿಫ್ಟಿಂಗ್ ನಲ್ಲಿ ಎಲ್ಲದರಲ್ಲೂ ನಿರ್ದೇಶಕರು ಅತಿ ಕಳಪೆ ಕೆಲಸ ಮಾಡಿದ್ದಾರೆ.
ಇಂತಹ ಸಿನೆಮಾಗಳಿಂದ ರಕ್ಷಿಸಲು ಚಲನಚಿತ್ರ ಅಕಾಡೆಮಿಗಳು ಇಂತಹ ಸಿನೆಮಾ ಮಾಡುವವರಿಗಾಗಿ ಸಿನೆಮಾ ಗಂಜಿ ಕೇಂದ್ರಗಳನ್ನು ಸ್ಥಾಪಿಸಿ ಸ್ವಲ್ಪ ಪಾಠ ಹೇಳುವುದೊಳಿತು.
೭. [ಫೆಬ್ರವರಿ -20] ಮೈತ್ರಿ-  'ಮೈತ್ರಿ' ಮನರಂಜನೆ ಐತ್ರೀ!
ರಿಮ್ಯಾಂಡ್ ಹೋಮಿನ ವಾರ್ಡನ್ ಅತುಲ್ ಕುಲಕರ್ಣಿ 'ಚಿನ್ನಾರಿ ಮುತ್ತಾ'ದ ಅಥ್ಲೆಟಿಕ್ ಕೋಚ್ ಅವಿನಾಶ್ ರನ್ನು ನೆನಪಿಸುತ್ತಾರೆ. ಯಾವುದೇ ಚಿತ್ರವಾಗಲಿ, ಸ್ಪೂರ್ತಿಯನ್ನು ಎಲ್ಲೆಲ್ಲಿಂದಲೋ ಪಡೆದರೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳದಿದ್ದರೆ ಅದು ವ್ಯರ್ಥ. ಈ ನಿಟ್ಟಿನಲ್ಲಿ ನಿರ್ದೇಶಕ ಗಿರಿರಾಜ್ ಒಂದುತ್ತಮ ಚಿತ್ರವನ್ನು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
೮. [ಫೆಬ್ರವರಿ-೨೭] ರುದ್ರತಾಂಡವ - ಹಳೆಯ ಪ್ರತೀಕಾರ ಹೊಸ ಅವತಾರ
ಡಾನ್ ಪಾತ್ರದಲ್ಲಿನ ವಿಪರೀತತೆ ಮತ್ತು ಕೆಲವು ಅನಗತ್ಯ ಪಾತ್ರಗಳ ಸೃಷ್ಟಿಯನ್ನು ಹೊರತುಪಡಿಸಿದರೆ ನಿರ್ದೇಶಕ ಗುರು ದೇಶಪಾಂಡೆ ರಿಮೇಕ್ ಸ್ಪೆಷಲಿಸ್ಟ್ ಎನ್ನಲು ಅಡ್ಡಿಯಿಲ್ಲ.
ಇಂತಹ ವಾದ ವಿವಾದದ ನಡುವೆ ಯೂವುದೇ ಲಾಜಿಕ್ ಹುಡುಕದೆ ಒಮ್ಮೆ ನೋಡಿ ಬರಬಹುದಾದ ನೀಟ್ ರಿಮೇಕ್ ಚಿತ್ರ 'ರುದ್ರತಾಂಡವ'.
೯. [ಮಾರ್ಚ್-6] ಗೋವಾ- 'ಗೋವಾ' ನೋಡುವ ಬದಲು ಮಲಗೋವಾ!
ಒಟ್ಟಿನಲ್ಲಿ ಹೇಳುವುದಾದರೆ ಈ ಸಿನೆಮಾ ನೋಡುವುದರ ಬದಲು ನೀವೊಬ್ಬರೇ ಆದರೂ ಪರವಾಗಿಲ್ಲ ಸ್ವಲ್ಪ ಹೆಚ್ಚು ಸಮಯ ದುಡ್ಡು ಖರ್ಚು ವ್ಯಯಿಸಿ ಗೋವಾ ನಗರ-ಬೀಚುಗಳಿಗೇ  ಹೋಗಿ ಬರಬಾರದೇಕೆ? ಇವೆಲ್ಲಾ ಬೇಡವೆಂದಾದರೆ ಸುಮ್ಮನೆ ಮನೆಯಲ್ಲಿ ಮಲಗಬಾರದೇಕೆ?
೧೦. [ಮಾರ್ಚ್-೨೦] ಕೃಷ್ಣಲೀಲಾ- ಒಳ್ಳೆ ಚಿತ್ರ ಬಂದಿದೆ ಮಾತಾಡ್ರೊ
ಒಟ್ಟಿನಲ್ಲಿ ಮನರಂಜನೆಯ ದೃಷ್ಟಿಯಿಂದ ಶಶಾಂಕ್ ಒಳ್ಳೆಯ ಚಿತ್ರವೊಂದನ್ನು ನೀಡಿದ್ದಾರೆ.
ಜೀವನದಲ್ಲಿ ಮೂಡುವ ಹತಾಶೆ ಜೀವನದ ಬಗ್ಗೆ ಪ್ರೀತಿಯನ್ನೂ ಹುಟ್ಟಿಸುತ್ತದೆ ಎಂಬ ಧೀಮಂತರೊಬ್ಬರ ಮಾತನ್ನು ನೆನಪಿಸುವಂತಹ ಈ ಸಿನೆಮಾವನ್ನು ಒಮ್ಮೆ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com