
ಮುಂಬೈ: ಮಹಿಳಾ ಸಬಲೀಕರಣಕ್ಕಾಗಿ ಮಾಡಿರುವ "ಮೈ ಚಾಯ್ಸ್" (ನನ್ನ ಆಯ್ಕೆ) ವಿಡಿಯೋವನ್ನು ಬೆನ್ನು ತಟ್ಟಬೇಕು, ಆದರೆ ಮಹಿಳಾವಾದಿಗಳಾಗುವುದರಿಂದ ಸಬಲೀಕರಣ ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತೆ ಕಂಗನಾ ರನೌತ್ ಅಭಿಪ್ರಾಯ ಪಟ್ಟಿದ್ದಾರೆ.
"ಪುರುಷರಲ್ಲಿ ಸಣ್ಣವರು ಎಂಬ ಅಭಿಪ್ರಾಯ ಮೂಡಿಸುವುದು ಮಹಿಳಾ ಸಬಲೀಕರಣ ಅಲ್ಲ. ಹೀಗೆ ಮಾಡುತ್ತಾ ಹೋದರೆ ಪುರುಷರ ಸಬಲೀಕರಣಕ್ಕೆ ಇನ್ನೂ ೨೦ ವರ್ಷ ಹಿಡಿಯುತ್ತದೆ. ಸಬಲೀಕರಣ ಮನುಷ್ಯನಾಗಿ, ಒಳ್ಳೆಯ ಆತ್ಮವಾಗಿ ಹೊರಹೊಮ್ಮುವುದು ಎಂದಿದ್ದಾರೆ. ಇದಕ್ಕಾಗಿ ನೀವು ಮಹಿಳಾವಾದಿ ಆಗಬೇಕಿಲ್ಲ" ಎಂದು ಗುರುವಾರ ಹೇಳಿದ್ದಾರೆ.
ಹೋಮಿ ಅದ್ಜಾನಿಯಾ ನಿರ್ದೇಶನದ "ಮೈ ಚಾಯ್ಸ್" ವಿಡಿಯೋ, ಮಹಿಳೆಯರ ಬಗ್ಗೆ ಪುರುಷರು ತಮ್ಮ ಮನೋಧರ್ಮವನ್ನು ಬದಲಿಸಿಕೊಳ್ಳಲು ಸಲಹೆ ನೀಡುತ್ತದೆ. ಮಹಿಳೆಯರ ಆಯ್ಕೆಗಳನ್ನು ಪ್ರಶ್ನಿಸದಂತೆ ಹೇಳುತ್ತದೆ.
ಈ ವಿಡಿಯೋದಲ್ಲಿ ಮಹಿಳೆಯ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ದೀಪಿಕಾ ಪಡುಕೋಣೆ, ಮದುವೆಗೆ ಮುಂಚಿನ ಲೈಂಗಿಕತೆ, ಮದುವೆಯಾಚೆಗಿನ ಲೈಂಗಿಕತೆ ನನ್ನ ಆಯ್ಕೆ ಎಂದು ಹೇಳುತ್ತಾರೆ.
"ಮೈ ಚಾಯ್ಸ್" ದೃಶ್ಯಾವಳಿಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ದೊರಕುತ್ತಿದೆ. ಕೆಲವರು ದೀಪಿಕಾ ಅವರ ಕೆಲಸವನ್ನು ಹೊಗಳಿ ಹಾಡುತ್ತಿದ್ದರೆ ಕೆಲವರು ಸಾರಸಗಟಾಗಿ ತಳ್ಳಿಹಾಕಿ ತೆಗಳುತ್ತಿದ್ದಾರೆ
"ಆದರೆ ಜನರು ತಮ್ಮದೇ ಆದ ರೀತಿಯಲ್ಲಿ ಮಹಿಳಾ ಸಬಲೀಕರಣಕ್ಕೆ ಕೊಡುಗೆ ನೀಡುತ್ತಿದ್ದಾರೆ. ಅದಕ್ಕೆ ನಾವು ಬೆನ್ನುತಟ್ಟಬೇಕು. ಎಲ್ಲರ ನಿರೀಕ್ಷೆಗಳೂ ವಿಭಿನ್ನವಾಗಿರುತ್ತವೆ" ಎಂದು ಕಂಗನಾ ಹೇಳಿದ್ದಾರೆ.
Advertisement