
ಬೆಂಗಳೂರು: ನಿರ್ದೇಶಕ-ಸಿನೆಮ್ಯಾಟೋಗ್ರಾಫರ್ ಎಸ್ ಡಿ ವಿಜಯ್ ಮಿಲ್ಟನ್ ಬರೆದು ನಿರ್ದೇಶಿಸಿದ್ದ ತಮಿಳು ಸಿನೆಮಾ 'ಗೋಲಿ ಸೋಡಾ' ಸೂಪರ್ ಹಿಟ್ ಆಗಿತ್ತು. ಜೀವನಕ್ಕಾಗಿ ಕೂಲಿ ಕೆಲಸ ಮಾಡುವ ಪಡ್ಡೆ ಯುವಕರ ಸುತ್ತ ಸುತ್ತುವ ಕಥೆಯುಳ್ಳ ಚಿತ್ರ ಕನ್ನಡಕ್ಕೂ ರಿಮೇಕ್ ಆಗುವುದಕ್ಕೆ ಚಿತ್ರೀಕರಣ ಪ್ರಾರಂಭವಾಗಿತ್ತು. ರಘು ಜಯ ನಿರ್ದೇಶಿಸಿ, ಕೊಲ್ಲ ಪ್ರವೀಣ್ ನಿರ್ಮಿಸುತ್ತಿದ್ದ ಈ ಸಿನೆಮಾದ ಚಿತ್ರೀಕರಣ ಕೆಲವು ದಿನಗಳ ನಂತರ ನಿರ್ಮಾಪಕರು ತೊಂದರೆಗೀಡಾಗಿ ಸ್ಥಗಿತಗೊಂಡಿತ್ತು.
'ಗೋಲಿ ಸೋಡಾ'ಗೆ ಈಗ ಸಂತಸದ ಸುದ್ದಿ. ಚಿತ್ರದ ಚಿತ್ರೀಕರಣ ಮತ್ತೆ ಪ್ರಾರಂಭಿಸುವಂತೆ ನಿರ್ಮಾಪಕರು ನಿರ್ದೇಶಕನ ಮೊರೆ ಹೋಗಿದ್ದಾರೆ. "ಡಿಸೆಂಬರ್ ನಲ್ಲೇ ಚಿತ್ರೀಕರಣ ಪ್ರಾರಂಭಿಸಿದ್ದೆವು. ನಿರ್ಮಾಪಕರು ಸ್ವಲ್ಪ ತೊಂದರೆ ಎದುರಿಸಿದ್ದರಿಂದ ಚಿತ್ರ ಅರ್ಧದಲ್ಲೇ ನಿಂತಿತ್ತು. ಈಗ ಅವರು ಮತ್ತೆ ಮನವಿ ಮಾಡಿರುವುದರಿಂದ ಚಿತ್ರೀಕರಣ ಮತ್ತೆ ಪ್ರಾರಂಭಿಸುತ್ತೇವೆ. ಆದರೆ ಸದ್ಯಕ್ಕೆ ನಾನು ರಾಜಧಾನಿ-೨ ರಲ್ಲಿ ನಿರತನಾಗಿರುವುದರಿಂದ, ಈ ಸಿನೆಮಾದ ನಂತರವೇ ಜುಲೈನಲ್ಲಿ ಗೋಲಿ ಸೋಡಾ ಕೈಗೆತ್ತಿಕೊಳ್ಳುತ್ತೇನೆ" ಎನ್ನುತ್ತಾರೆ ರಾಘವ.
ಹಾಸ್ಯ ನಟ ಸಾಧು ಕೋಕಿಲಾ ಅವರ ಮಗ ಸುರಾಗ್ ಹಾಗೂ ನಟ ಅರುಣ್ ಸಾಗರ ಅವರ ಮಗ ಕೂಡ ಚಿತ್ರದಲ್ಲಿ ನಟಿಸಲಿದ್ದಾರೆ.
Advertisement