
ಬಾಲಿವುಡ ನಟ ಸುನಿಲ್ ಶೆಟ್ಟಿ ಅವರು ಕನ್ನಡಕ್ಕೆ `ಅಲೋನ್' ಸಿನಿಮಾದಲ್ಲಿ ಸೂಪರ್ ಕಾಪ್ ಪಾತ್ರದಲ್ಲಿ ಅಭಿನಯಿಸುತ್ತಾರೆಂದು ಸುದ್ದಿಯಾಗಿತ್ತು. ಆದರೆ ಕಡೇ ಕ್ಷಣದಲ್ಲಿ ಬದಲಾವಣೆಯಾಗಿದೆ.
ಹಿಂದಿಯಲ್ಲಿ `ಬಾರ್ಡರ್ -2' ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ಸುನಿಲ್ ಶೆಟ್ಟಿ ಅವರ ಜಾಗಕ್ಕೆ ಖ್ಯಾತ ನಟಿ ಸಿಮ್ರಾನ್ ಅವರು ಬಂದಿದ್ದಾರೆ. ಸೂಪರ್‍ಕಾಪ್ ಆಗಿ ಏಳು ದಿವಸಗಳ ಕಾಲ ಈ ತ್ರಿಭಾಷಾ ಚಿತ್ರದಲ್ಲಿ ಅಭಿನಯಿಸಲು ಸಮ್ಮತಿ ಸಿಮ್ರಾನ್ ಸೂಚಿಸಿದ್ದಾರೆ.
ಸಿಮ್ರಾನ್ ಅವರು ಕನ್ನಡದಲ್ಲಿ ಈ ಹಿಂದೆ ಶಿವರಾಜಕುಮಾರ್ ಅವರ ಜೊತೆ 1997ರಲ್ಲಿ ಬಿಡುಗಡೆ ಆದ `ಸಿಂಹದ ಮರಿ' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ಈಗ ಕನ್ನಡ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ತಯಾರಾಗುತ್ತಿರುವ ಜೆಕೆ ನಿರ್ದೇಶನದ `ಅಲೋನ್' ಮೂಲಕ ಮತ್ತೆ ಬರುತ್ತಿದ್ದಾರೆ. ಸಿಮ್ರಾನ್‍ಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸುಪ್ರಸಿದ್ದ ನಟರುಗಳ ಜೊತೆ ನಟಿಸಿದ ಖ್ಯಾತಿ ಇದೆ.
`ಅಲೋನ್' ಕ್ಲೈಮಾಕ್ಸ್ ಚಿತ್ರೀಕರಣ ಏಪ್ರಿಲ್ 15ರಿಂದ ಒಂದು ವಾರದ ಕಾಲ ಚೆನ್ನೈನಲ್ಲಿನ ಬಿನ್ನಿಮಿಲ್ ಆವರಣದಲ್ಲಿ ನಡೆಯಲಿದೆ. ಏಪ್ರಿಲ್ 6ರಿಂದ ಕ್ಲೈಮಾಕ್ಸ್ಗೆ ಬೇಕಾದ ಸೆಟ್ ರಚನೆ ಒಂದು ವಾರದಲ್ಲಿ ಪೂರ್ಣಗೊಳ್ಳಲಿದೆ ಎಂದು ನಿರ್ದೇಶಕ ಜೆಕೆ ಅವರು ತಿಳಿಸಿದ್ದಾರೆ.
ನಿಕೀಶ ಪಟೇಲ್ `ಅಲೋನ್' ಚಿತ್ರದ ನಾಯಕಿ. ಮಂಗಳೂರಿನ ಬೀಚ್ ಬಳಿ ಒಂದು ವಿಶೇಷ ಮನೆಯಲ್ಲಿ ಬಹುತೇಕ ಭಾಗದ ಚಿತ್ರೀಕರಣ ನಡೆಸಲಾಗಿದೆ.
ಈ ಕುತೂಹಲಕಾರಿ ಸಿನಿಮಾದ ತಾರಾಗಣದಲ್ಲಿ ನಿಕೀಶ ಪಟೇಲ್, ಇನಿಯ, ವಸಿಷ್ಠ, ಗಣೇಶ್, ಸಾಧು ಕೋಕಿಲ, ತಬಲಾ ನಾಣಿ, ದಿಲೀಪ್, ಅವಿನಾಷ್, ಮಂಗಳೂರು ಸುರೇಶ್, ಶಾಂತಮ್ಮ ಹಾಗೂ ಇತರರು ಇದ್ದಾರೆ.
ಈ ಚಿತ್ರದ ನಿರ್ಮಾಪಕರು ಅನಂತ್ ಹಾಗೂ ಪಿಕೆ ಫುಡ್ಸ್ ಒಡೆಯ ರಾಮಲಿಂಗಯ್ಯ. ಸುಜಿತ್ ಶೆಟ್ಟಿ ಅವರ ಸಂಗೀತ ಹಾಗೂ ಜೈ ಆನಂದ್ ಅವರ ಛಾಯಾಗ್ರಹಣ ಒದಗಿಸಿದ್ದಾರೆ.
Advertisement