ಶಿವರಾಜ್ ಕುಮಾರ್ ಚಿತ್ರಕ್ಕೆ ರಾಮಗೋಪಾಲ ವರ್ಮಾ ನಿರ್ದೇಶನ
ಬೆಂಗಳೂರು: ವರನಟ ರಾಜಕುಮಾರ್ ಕುಡಿಗಳು ಅವರ ಹುಟ್ಟಿದ ದಿನಕ್ಕೆ ಸಿನೆಮಾ ಮಹೂರ್ತಗಳನ್ನು ನೆರವೇರಿಸಲು ಕಾತರರಾಗಿದ್ದಾರೆ. ಇದು ಪುನೀತ್ ರಾಜಕುಮಾರ್ ಅವರ ಒಂದು ಸಿನೆಮಾ, ರಾಘವೇಂದ್ರ ರಾಜಕುಮಾರ ಅವರ ಮಗ ವಿನಯ್ ರಾಜಕುಮಾರ ಅವರ ಒಂದು ಸಿನೆಮಾ ಕೂಡ ಒಳಗೊಂಡಿದೆ. ವಿನಯ್ ರಾಜಕುಮಾರ್ ಅವರ ಸಿನೆಮಾವನ್ನು ನಟ-ನಿರ್ದೇಶಕ ಪ್ರೇಮ್ ನಿರ್ದೇಶಿಸಲಿದ್ದಾರೆ. ಅದೇ ದಿನ ಶಿವರಾಜ್ ಕುಮಾರ ಅವರ 'ಬಾದಶಃ' ಸಿನೆಮಾದ ಮುಹೂರ್ತವನ್ನು ನೆರವೇರಿಸಲು ನಿರ್ದೇಶಕ ಚಂದ್ರು ಸಿದ್ಧರಾಗುತ್ತಿದ್ದಾರೆ.
ಈ ಎಲ್ಲದರ ಮಧ್ಯೆ ಮತ್ತೊಂದು ಸುದ್ದಿ ಅಧಿಕೃತ ಘೋಷಣೆಗೆ ಕಾಯುತ್ತಿದೆ. ಖ್ಯಾತ ಟಾಲಿವುಡ್-ಬಾಲಿವುಡ್ ನಿರ್ದೇಶಕ ರಾಮಗೋಪಾಲ್ ವರ್ಮಾ ಶಿವರಾಜ್ ಕುಮಾರ್ ಅವರ ಸಿನೆಮಾವೊಂದನ್ನು ನಿರ್ದೇಶಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಶಿವರಾಜ್ ಕುಮಾರ್ ಅವರು ಇನ್ನು ಸ್ಕ್ರಿಪ್ಟ್ ಓದಬೇಕಿದೆ ಎಂದು ಮೂಲಗಳು ತಿಳಿಸಿದ್ದರು, ಎಲ್ಲವೂ ಅಂತಿಮಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲದೆ ಹೋದರೂ, ಕನ್ನಡ, ತೆಲಗು, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಈ ಸಿನೆಮಾವನ್ನು ನಿರ್ದೇಶಿಸಲು ವರ್ಮಾ ಉತ್ಸುಕರಾಗಿದ್ದಾರೆ.
ಸತ್ಯ, ಸರ್ಕಾರ್ ಮತ್ತು ಕಂಪನಿ ಅಂತಹ ಚಿತ್ರಗಳನ್ನು ನಿರ್ದೇಶಿಸಿರುವ ವರ್ಮಾ, ರಣ್ ಮತ್ತು ರಕ್ತಚರಿತ್ರ ಸಿನೆಮಾಗಳಲ್ಲಿ ಕನ್ನಡ ನಟ ಸುದೀಪ್ ಅವರೊಂದಿಗೂ ಕೆಲಸ ಮಾಡಿದ್ದಾರೆ. ಎಲ್ಲವೂ ಸರಿಯಾದರೆ ವರ್ಮಾ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ