ಕನ್ನಡಪ್ರಭ.ಕಾಂ ಸಂವಾದ: 'ಹರಿವು' ಸಾಮಾನ್ಯ ಪ್ರೇಕ್ಷಕರ ಮನಕಲಕಿದೆ, ನಿರ್ದೇಶಕ ಮಂಸೋರೆ

ತಮ್ಮ ಚೊಚ್ಚಲ ನಿರ್ದೇಶನದ 'ಹರಿವು' ಚಲನಚಿತ್ರಕ್ಕೆ ಕನ್ನಡದ ಅತ್ಯುತ್ತಮ ಚಲನಚಿತ್ರ ರಾಷ್ಟ್ರಪ್ರಶಸ್ತಿ ಪಡೆದ ಯುವನಿರ್ದೇಶಕ ಮಂಸೋರೆ
ಕನ್ನಡಪ್ರಭ.ಕಾಂ ಕಚೇರಿಯ ಸಂವಾದದಲ್ಲಿ ಭಾಗವಹಿಸಿದ ನಿರ್ದೇಶಕ ಮಂಸೋರೆ
ಕನ್ನಡಪ್ರಭ.ಕಾಂ ಕಚೇರಿಯ ಸಂವಾದದಲ್ಲಿ ಭಾಗವಹಿಸಿದ ನಿರ್ದೇಶಕ ಮಂಸೋರೆ

ಬೆಂಗಳೂರು: ತಮ್ಮ ಚೊಚ್ಚಲ ನಿರ್ದೇಶನದ 'ಹರಿವು' ಚಲನಚಿತ್ರಕ್ಕೆ ಕನ್ನಡದ ಅತ್ಯುತ್ತಮ ಚಲನಚಿತ್ರ ರಾಷ್ಟ್ರಪ್ರಶಸ್ತಿ ಪಡೆದ ಯುವನಿರ್ದೇಶಕ ಮಂಸೋರೆ ಸೋಮವಾರ ಕನ್ನಡಪ್ರಭಾ.ಕಾಂ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂವಾದದಲ್ಲಿ ಭಾಗಿಯಾದರು.

ಮೂಲತಃ ಕಲಾವಿದನಾಗಿರುವ ಮಂಸೋರೆ ತಮ್ಮ ಸಿನೆಮಾ 'ಕಲಾ ಸಿನೆಮಾ' ಅಥವಾ 'ಪ್ರಶಸ್ತಿ ವಿಜೇತ ಸಿನೆಮಾ' ಎಂಬ ವಿಂಗಡನೆಯನ್ನು ಒಪ್ಪುವುದಿಲ್ಲ. ಸಿನೆಮಾ ಎಂದರೆ ಕಲೆ. ಅದು ಇತರ ಕಲೆಗಳಿಂದ ಬಹಳಷ್ಟು ತೆಗೆದುಕೊಂಡು ವಿಭಿನ್ನ ಕಲಾಪ್ರಾಕಾರವಾಗಿ ಉಳಿದುಕೊಂಡಿದೆ. ಸ್ವಲ್ಪ ಮಟ್ಟಿಗೆ 'ಪ್ಯಾರಲಲ್ ಸಿನೆಮಾ' ಎನ್ನುವ ವಿಂಗಡನೆಯನ್ನು ಒಪ್ಪಬಹುದು ಎನ್ನುತ್ತಾರೆ ಮಂಸೋರೆ.

ಸಿನೆಮಾಗಳಲ್ಲಿ ಶಬ್ದದ-ಸಂಗೀತದ ಪ್ರಾಮುಖ್ಯತೆಯನ್ನು ವರ್ಣಿಸಿದ ಮಂಸೋರೆ, ತಮ್ಮ ಸಿನೆಮಾಕ್ಕೆ ಸಿಂಕ್ ಸೌಂಡ್ ತಂತ್ರಜ್ಞಾನವನ್ನು ಬಳಸಿದ್ದರ ಬಗ್ಗೆ ವಿವರಿಸಿದರು. ಅಂತರಾಷ್ಟ್ರೀಯ ಸಿನೆಮಾಗಳ ಗುಣಮಟ್ಟಕ್ಕೆ ಡಬ್ಬಿಂಗ್ ಹೊಂದುವುದಿಲ್ಲ, ಸಿಂಕ್ ಸೌಂಡ್ ಇರಲೇಬೇಕು ಎನ್ನುತ್ತಾರೆ ಮಂಸೋರೆ. ಪ್ರತಿಯೊಂದು ನಗರಕ್ಕೂ, ಪ್ರತಿಯೊಂದು ಮನೆಗೂ, ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ವಿಭಿನ್ನ ಶಬ್ದ ಇರುತ್ತದೆ. ಸಿನೆಮಾ ಆ ಶಬ್ದವನ್ನು ಸೆರೆ ಹಿಡಿಯಬೇಕು. ಆ ನಿಟ್ಟಿನಲ್ಲಿ ಹರಿವು ಸಿನೆಮಾ ಸೌಂಡ್ ತಂತ್ರಜ್ಞ ಮಹಾವೀರ್ ಸಾಬಣ್ಣನವರ್ (ಇವರೂ ಕೂಡ ಮರಾಠಿ ಚಲನಚಿತ್ರವೊಂದಕ್ಕೆ ಈ ವರ್ಷ ರಾಷ್ಟ್ರಪ್ರಶಸ್ತಿ ವಿಜೇತರು) ಅವರ ಸಹಯೋಗದೊಂದಿಗೆ ಬಹಳ ಪರಿಣಾಮಕಾರಿಯಾಗಿ ಸೌಂಡ್ ಬಳಸಲಾಗಿದೆ ಎನ್ನುತ್ತಾರೆ.

"ಸಿನೆಮಾವನ್ನು ಅಸಂಗತವಾಗಿ ಮುಗಿಸುವುದು ನನಗೆ ಒಮ್ಮತವಿಲ್ಲ" ಎನ್ನುವ ಮಂಸೋರೆ, ಹರಿವು ಸಿನೆಮಾಗೆ ಒಂದು ತಾರ್ಕಿಕ ಅಂತ್ಯವನ್ನು ಕೊಡಲು ಪ್ರಯತ್ನಿಸಿದ್ದೇನೆ ಎಂದಿದ್ದಾರೆ. ತಂದೆ ಮಗನ ಸಂಬಂಧದ ಕಥೆಯುಳ್ಳ ಈ ಸಿನೆಮಾವನ್ನು ನಮ್ಮ ತಂದೆಗೆ ಅರ್ಪಿಸಿದ್ದೇನೆ ಎನ್ನುತ್ತಾರೆ. ನನಗೆ ಸಿನೆಮಾ ಎಂದರೆ ಕಲೆ. ಆದರೆ ಸಿನೆಮಾ ಭಾವನೆಗಳನ್ನು ಕೆರಳಿಸಬೇಕು. ನನ್ನ ಸಿನೆಮಾ ನೋಡಿಯಾ ಎಷ್ಟೋ ಜನರು ಅತ್ತಿದ್ದಾರೆ. ಪ್ರೇಕ್ಷಕರು ತಮ್ಮ ತಂದೆ ತಾಯಿಯರ ಜೊತೆಗಿನ ಸಂಬಂಧದ ಭಾವನೆಗಳನ್ನು ನನ್ನ ಸಿನೆಮಾ ಕೆರಳಿಸುತ್ತದೆ. ಆದುದರಿಂದ ಸಿನೆಮಾ ಅಂದುಕೊಂಡದ್ದನ್ನು ಸಾಧಿಸಿದ ಧನ್ಯತೆ ನನ್ನಲ್ಲಿದೆ ಎಂದಿದ್ದಾರೆ ಮಂಸೋರೆ.

ನಾನು ಸಿನೆಮಾ ಮಾಡುವಾಗ ಪ್ರಶಸ್ತಿಯ ಬಗ್ಗೆ ಕಿಂಚಿತ್ತೂ ಚಿಂತಿಸಿರಲಿಲ್ಲ ಎಂದ ಮಂಸೋರೆ ಮತ್ತೊಂದು ಪ್ರಶ್ನೆಗೆ ನಟನಾಗುವ ಆಸೆಯಂತೂ ಇಲ್ಲವೇ ಇಲ್ಲ ಎನ್ನುತ್ತಾರೆ. ಇಂತಹ ಹೊಸ ಅಲೆಯ ಸಿನೆಮಾಗಳು ಹೆಚ್ಚಿನ ಜನಕ್ಕೆ ತಲುಪಬೇಕೆನ್ನುವ ದೃಷ್ಟಿಯಿಂದ ರಾಜ್ಯದಾದ್ಯಂತ ಯಾರೇ ಆಸಕ್ತಿ ತೋರಿದರೂ ಅವರಿಗೆ ಪ್ರದರ್ಶಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂದು ಮಂಸೋರೆ ತಿಳಿಸಿದ್ದಾರೆ.

ತಮಗೆ ನಿರ್ದೇಶಕ ಆಂಡ್ರಿ ಟಾರ್ಕೋವಸ್ಕಿ ಅವರ ಸಿನೆಮಾಗಳು ಬಹಳ ಪ್ರಭಾವ ಬೀರಿವೆ ಎಂದು ಮಂಸೋರೆ ಸಂವಾದದಲ್ಲಿ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com