
ನವದೆಹಲಿ: ಮಾಜಿ ರಾಷ್ಟ್ರಪತಿ ದಿವಂಗತ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಸ್ಪೂರ್ತಿದಾಯಕ ಮತ್ತು ಪ್ರೇರಕ ಸಂದೇಶಗಳು ಬಹಳ ಜನಪ್ರಿಯ ಮತ್ತು ಅನೇಕರ ಬಾಳಿಗೆ ಸ್ಪೂರ್ತಿಯಾಗಿದೆ. ಇದೀಗ ಅವರ ಸಂದೇಶಗಳು ಮತ್ತು ಸರಳ ಜೀವನಶೈಲಿಯನ್ನಿಟ್ಟುಕೊಂಡು ವೆಬ್ ಕಾಮಿಕ್ ನ್ನು ಸಿದ್ಧಪಡಿಸಲಾಗಿದೆ.
ಭಾರತದ ಕ್ಷಿಪಣಿ ಮನುಷ್ಯನ ಆತ್ಮಕಥೆ 'ವಿಂಗ್ಸ್ ಆಫ್ ಫೈರ್' ನಿಂದ ಆಯ್ದ ಸಂದೇಶಗಳನ್ನು ಆಸ್ಟ್ರೇಲಿಯಾ ಮೂಲದ ಹವ್ಯಾಸಿ ಚಿತ್ರಗಾರ ಗೇವಿನ್ ಔಂಗ್ ತಾನ್ ತನ್ನ ಝೆನ್ ಪೆನ್ಸಿಲ್ ಎಂಬ ಆನ್ ಲೈನ್ ಪೋರ್ಟಲ್ ನಲ್ಲಿ ಆನಿಮೇಶನ್ ಚಿತ್ರವನ್ನಾಗಿ ತಯಾರಿಸಿದ್ದಾರೆ.
ಚಿತ್ರದ ಆರಂಭದಲ್ಲಿ ಹುಡುಗಿಯೊಬ್ಬಳು ತನಗೆ ಈಜು ಕಲಿಯಬೇಕೆನ್ನುವ ತೀವ್ರ ಬಯಕೆ ಹೊಂದಿರುತ್ತಾಳೆ. ಆದರೆ ಅದಕ್ಕೆ ಅವಳ ಹೆತ್ತವರು ಪ್ರೋತ್ಸಾಹ ನೀಡುವುದಿಲ್ಲ. ನಿರಾಕರಿಸುತ್ತಾರೆ. ಆಗ ಯುವಕರು ತಮ್ಮೆಲ್ಲಾ ಕಷ್ಟಗಳನ್ನು ಮೆಟ್ಟಿ ನಿಂತು ಹೇಗೆ ಮುಂದೆ ಬರಬೇಕು ಎಂಬುದನ್ನು ಕಲಾಂ ಅವರ ಸಂದೇಶಗಳ ಮೂಲಕ ತಾನ್ ಚಿತ್ರದಲ್ಲಿ ತೋರಿಸುತ್ತಾರೆ.
ಕಲಾಂ ಅವರು ತಮ್ಮ ಆತ್ಮಚರಿತ್ರೆ 'ವಿಂಗ್ಸ್ ಆಫ್ ಫೈರ್ ನಲ್ಲಿ ಯುವಜನರ ಜೀವನಕ್ಕೆ ಹತ್ತಿರವಾದ ಅನೇಕ ಅಂಶಗಳನ್ನು ವಿವರಿಸಿದ್ದರು. ಇಂದಿನ ಯುವಕರು ಆತ್ಮ ಸೋಲನ್ನು ಒಪ್ಪಿಕೊಂಡು ಜೀವಿಸುವುದನ್ನು ಎಂದಿಗೂ ಕಲಿಯಬಾರದು ಎಂದು ಹೇಳಿದ್ದಾರೆ.
ದೇಶದ 11ನೇ ರಾಷ್ಟ್ರಪತಿಯಾಗಿದ್ದ ಕಲಾಂ ಅವರು, ತಮಿಳುನಾಡಿನ ರಾಮೇಶ್ವರ ಎಂಬ ಸಣ್ಣ ಪಟ್ಟಣದಲ್ಲಿ ಬಡ ಕುಟುಂಬದಿಂದ ಬಂದವರಾಗಿದ್ದರು. ಬಹಳ ಕಷ್ಟದಲ್ಲಿ ವಿದ್ಯಾಭ್ಯಾಸ ಕಲಿತು ಭಾರತೀಯ ರಕ್ಷಣಾ ಇಲಾಖೆಯಲ್ಲಿ ನಂತರ ಇಸ್ರೋದಲ್ಲಿ ಕಾರ್ಯನಿರ್ವಹಿಸಿದ್ದರು. ನಂತರ ನಾಸಾಕ್ಕೂ ಭೇಟಿ ಕೊಟ್ಟಿದ್ದರು.
ಸುಮಾರು 40 ವರ್ಷಗಳ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಮಹತ್ತರ ಸಾಧನೆಗಳನ್ನು, ಕೆಲಸಗಳನ್ನು ಮಾಡಿದ ಕಲಾಂ ಅವರ ನಡೆ, ನುಡಿ, ಜೀವನಶೈಲಿ ಅನೇಕರಿಗೆ ದಾರಿದೀಪ.
Advertisement