
ಬೆಂಗಳೂರು: ನಟ ಧನಂಜಯ್ ನಾಯಕನಟನಾಗಿ ಅಭಿನಯಿಸಿರುವ 'ವಿಜಯಾದಿತ್ಯ' ಸಿನೆಮಾದ ಮೊದಲ ಟೀಸರ್ ಅನ್ನು ನಿರ್ದೇಶಕ ನಿರ್ಭಯ್ ಚಕ್ರವರ್ತಿ ಬಿಡುಗಡೆ ಮಾಡಿದ್ದು ಅದರಲ್ಲಿ ಪಾರುಲ್ ಯಾದವ್ ಅವರ ಮೊದಲ ಅವತಾರವನ್ನು ಬಿಚ್ಚಿಟ್ಟಿದ್ದಾರೆ.
ಈ ಸಾಮಾಜಿಕ ಡ್ರಾಮಾ ಸಿನೆಮಾದಲ್ಲಿ ಪಾರುಲ್ ಯಾದವ್ ಮಾಡೆಲ್ ಆಗಿ ಕಾಣಿಸಿಕೊಂಡಿದ್ದಾರಂತೆ. ಸಿನೆಮಾದಲ್ಲಿ ಪಾರುಲ್ ಭೂತ ಮತ್ತು ವರ್ತಮಾನ ಕಾಲಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ದೆಹಲಿ ಮೂಲದ ಪ್ರೀತಿ ಎಸ್ ಕಪೂರ್ ಸಿನೆಮಾಗೆ ವಸ್ತ್ರವಿನ್ಯಾಸ ಮಾಡಿದ್ದು, ನಿರ್ಮಾಪಕರ ಜೇಬಿಗೆ ಇದರಿಂದಲೇ ಭಾರಿ ಕತ್ತರಿ ಬಿದ್ದಿದೆಯಂತೆ. ಕಾವ್ಯಾ ಶೆಟ್ಟಿ ಮತ್ತು ಶ್ರಾವ್ಯ ಸಿನೆಮಾದ ಇತರ ನಾಯಕ ನಟಿಯರು.
ಪಾರುಲ್ ಅವರೇ ಹೇಳುವ ಪ್ರಕಾರ ಸಿನೆಮಾದಲ್ಲಿ ಫ್ಯಾಶನ್ ನಡಿಗೆಯಿದೆಯಂತೆ. ಇದರ ಮೊದಲ ಸುತ್ತಿನ ಚಿತ್ರೀಕರಣ ಸೋಮವಾರ ಪೂರ್ಣಗೊಂಡಿದೆಯಂತೆ. "ಇನ್ನೂ ಎರಡು ಸುತ್ತುಗಳಿಗೆ ಇನ್ನಿಬ್ಬರು ವಿನ್ಯಾಸಗಾರರನ್ನು ಎದುರು ನೋಡುತ್ತಿದ್ದೇವೆ. ಇದಲ್ಲದೆ 'ವಿಜಯಾದಿತ್ಯ' ದಲ್ಲಿ ನನ್ನ ಭಾಗದ ಕೆಲವು ಹಾಡುಗಳು ಮತ್ತು ದೃಶ್ಯಗಳ ಚಿತ್ರೀಕರಣ ಬಾಕಿ ಇದೆ" ಎಂದಿದ್ದಾರೆ.
Advertisement