
ಬೆಂಗಳೂರು: 'ಈ ಸಿನೆಮಾ ಚಿತ್ರೀಕರಣದ ವೇಳೆ ಯಾವ ಪ್ರಾಣಿಗೂ ಹಾನಿಯಾಗಿಲ್ಲ' ಎನ್ನುವ ಸೂಚನೆಯನ್ನು ಮುಂಗಾರು ಮಳೆ-೨ ಸಿನೆಮಾದಲ್ಲಿ ಈ ರೀತಿ ಬದಲಾಯಿಸುವ ಸಾಧ್ಯತೆಯಿದೆ: 'ಚಿತ್ರೀಕರಣದ ವೇಳೆಯಲ್ಲಿ ಯಾವುದೇ ಪ್ರಾಣಿಗೆ ಹಾನಿಯಾಗಿಲ್ಲ ಆದರೆ ನಟಿಗೆ ಪೆಟ್ಟಾಗಿದೆ' ಎಂದು!
ಹೌದು. ಚಿತ್ರತಂಡ ರಾಜಸ್ಥಾನದಲ್ಲಿ ಕೆಲವು ಹಾಡುಗಳಿಗೆ ಚಿತ್ರೀಕರಣ ನಡೆಸುವಾಗ ನಟ ಗಣೇಶ್ ಮತ್ತು ನಟಿ ನೇಹಾ ಶೆಟ್ಟಿ ಒಂಟೆ ಸವಾರಿ ಮಾಡಿದ್ದಾರೆ. ಆದರೆ ಈ ಸಮಯದಲ್ಲಿ ನಟಿಗೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ. ಶಶಾಂಕ್ ನಿರ್ದೇಶನದ ಮುಂಗಾರು ಮಳೆ-೨ ಚಿತ್ರೀಕರಣವನ್ನು ಕಳೆದ ಗುರುವಾರ ಮರುಭೂಮಿಯಲ್ಲಿ ನಡೆಸುವಾಗ ಈ ಘಟನೆ ಸಂಭವಿಸಿದೆ.
ನಿರ್ದೇಶಕ ಹೇಳುವಂತೆ ಗಣೇಶ್ ಮತ್ತು ನೇಹಾ ಹೊತ್ತ ಒಂಟೆ ವೇಗವಾಗಿ ನಡೆಯುವಾಗ ನೇಹಾ ಆಯತಪ್ಪಿ ಕೆಳಗೆ ಬಿದ್ದರಂತೆ. "ಗಣೇಶ್ ಕೂಡ ಬಿದ್ದರು ಆದರೆ ಅವರಿಗೆ ಯಾವುದೇ ಪೆಟ್ಟಾಗಲಿಲ್ಲ. ನೇಹಾ ಅವರಿಗೆ ಪೆಟ್ಟಾಯಿತು. ಆದರೆ ಚಿತ್ರೀಕರಣ ಎಲ್ಲ ಮುಗಿಯುವ ವೇಳೆಗೆ ಇದು ನಡೆದದ್ದು. ಅವರ ಪೆಟ್ಟಿನಿಂದಾಗಿ ನಮ್ಮ ಚಿತ್ರೀಕರಣಕ್ಕೆ ಯಾವುದೇ ತೊಂದರೆಯಾಗಲಿಲ್ಲ" ಎನ್ನುತ್ತಾರೆ.
ಚಿತ್ರೀಕರಣದ ಸ್ಥಳದಿಂದ ೫೦ ಕಿಮೀ ದೂರದಲ್ಲಿರುವ ಆಸ್ಪತ್ರೆಗೆ ನಟಿಯನ್ನು ಕರೆದೊಯ್ಯಲಾಯಿತಂತೆ. ಈಗ ಸದ್ಯಕ್ಕೆ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ನಟಿ ಮುಂದಿನ ವಾರಕ್ಕೆ ಮತ್ತೆ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ. ಇದೇ ಮೊದಲ ಬಾರಿಗೆ ಒಂಟೆ ಮೇಲೆ ಹತ್ತಿದ್ದ ನಟಿ ಇನ್ನುಮುಂದೆ ಎಂದಿಗೂ ಒಂಟೆ ಮೇಲೆ ಪ್ರಯಾಣ ಮಾಡುವುದಿಲ್ಲ ಎಂದು ಶಪಥಗೈದಿದ್ದಾರಂತೆ.
Advertisement