
ಬೆಂಗಳೂರು: ತಮ್ಮ ಚೊಚ್ಚಲ ಚಿತ್ರ 'ಸಿಂಪಲ್ ಆಗಿ ಒಂದು ಲವ್ ಸ್ಟೋರಿ' ಮೂಲಕ ಗೆದ್ದಿದ್ದ ನಿರ್ದೇಶಕ ಸುನಿ ಈಗ ಅದರ ಎರಡನೆ ಭಾಗ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ'ಯಲ್ಲಿ ನಿರತರಾಗಿದ್ದು ಸಂಕ್ರಾತಿ ವೇಳೆಗೆ ಟೀಸರ್ ಬಿಡುಗಡೆಯಾಗಲಿದೆ.
"ಅದೇ ತಾಜಾತನ ಮತ್ತು ಸರಳತನವನ್ನು ಮತ್ತೆ ತರಲು ಪ್ರಯತ್ನಿಸುತ್ತಿದ್ದೇನೆ. ಟೀಸರ್ ಜನವರಿ ೧೪ರ ಹೊತ್ತಿಗೆ ಸಿದ್ಧವಾಗುತ್ತದೆ" ಎಂದಿದ್ದಾರೆ.
ಇತ್ತೀಚೆಗಷ್ಟೇ ಅವರು ಮತ್ತು ನಿರ್ಮಾಪಕ ಆಶು ಬೆದ್ರ ಮುಂಬೈಗೆ ಭೇಟಿ ನೀಡಿ ಸೋನು ನಿಗಮ್ ಕಂಠದಲ್ಲಿ ಹಾಡೊಂದನ್ನು ರೆಕಾರ್ಡ್ ಮಾಡಿ ಬಂದಿದ್ದಾರೆ.
"'ತುಸು ಪ್ರೀತಿಯ ಪಿಸು ನುಡಿಗೆ' ಹಾಡಿನ ಸಾಹಿತ್ಯ ಕೇಳಿದವರೆಲ್ಲಾ ಈ ರೊಮ್ಯಾಂಟಿಕ್ ಹಾಡಿಗೆ ಸೋನು ನಿಗಮ್ ಅವರ ಕಂಠ ಸೂಕ್ತ ಎಂದರು. ಅವರು ಸೋಮವಾರ ಸಂಜೆ ಈ ಹಾಡನ್ನು ಹಾಡಿದರು ಮತ್ತು ಸಂಗೀತ ನಿರ್ದೇಶಕರನ್ನು ಪ್ರಶಂಸಿಸಿದರು" ಎನ್ನುತ್ತಾರೆ ಸುನಿ.
ಸಿನೆಮಾಗೆ ಇಬ್ಬರು ಸಂಗೀತ ನಿರ್ದೇಶಕರಾದ ಸಾಯಿ ಕಿರಣ್ ಮತ್ತು ಬಿ ಜೆ ಭರತ್ ಅವರ ಒಟ್ಟು ೫ ಹಾಡುಗಳಿವೆಯಂತೆ. ಸೋನು ನಿಗಮ್ ಹಾಡಿದ ಹಾಡನ್ನು ಸಾಯಿಕಿರಣ್ ಟ್ಯೂನ್ ಮಾಡಿದ್ದಾರೆ.
'ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ'ಯಲ್ಲಿ ರಕ್ಷಿತ್ ಶೆಟ್ಟಿ ಮತ್ತು ಶ್ವೇತಾ ಶ್ರೀವಾತ್ಸವ್ ಕಾಣಿಸಿಕೊಂಡರೆ ಇದರಲ್ಲಿ ಪ್ರವೀಣ್ ಮತ್ತು ಮೇಘನಾ ಗೋವಂಕರ್ ಮುಖ್ಯ ಪಾತ್ರಗಳಲ್ಲಿದ್ದಾರೆ.
Advertisement