
ತಮ್ಮ ಚೊಚ್ಚಲ ಸಿನಿಮಾ ರಂಗಿತರಂಗ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಿರ್ದೇಶಕ ಅನೂಪ್ ಭಂಡಾರಿ ಬ್ಯುಸಿ ಶೆಡ್ಯೂಲ್ ನ ಮಧ್ಯೆ ವಿಶ್ರಾಂತಿಗೆ ಸಮಯ ಹುಡುಕಬೇಕಾಗಿದೆ.
2015ರಲ್ಲಿ ಬಿಡುಗಡೆಗೊಂಡ ಚಿತ್ರಗಳಲ್ಲಿ ಒಂದಾದ ರಂಗಿತರಂಗ ಕರ್ನಾಟಕದಲ್ಲಿ ಈಗಾಗಲೇ 25 ವಾರಗಳ ಪ್ರದರ್ಶನ ಪೂರೈಸಿದೆ. ಆಸ್ಕರ್ ಸ್ಪರ್ಧೆಗೂ ನಾಮಾಂಕಿತಗೊಂಡಿದ್ದು, ವಿದೇಶಗಳಲ್ಲಿನ ಭಾರತೀಯರ ಮನ ಗೆದ್ದಿದೆ.
ಚಿತ್ರದ ಸಂಬಂಧ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿದ ಅನೂಪ್ ಭಂಡಾರಿ, ಚಿತ್ರದ ಪ್ರದರ್ಶನ ಸಂಬಂಧ ಅಮೆರಿಕದ ಮೂಲೆ ಮೂಲೆಗಳಿಗೂ ಓಡಾಡಿದ್ದೇನೆ. ನಾನು ರಂಗಿತರಂಗಕ್ಕೆ ಮುನ್ನ ನಾನು ಅಷ್ಟೊಂದು ಪ್ರವಾಸ ಪ್ರೇಮಿಯಾಗಿರಲಿಲ್ಲ. ಆದರೆ ಈಗ ನನ್ನ ಸಿನಿಮಾಕ್ಕಾಗಿ ವಿದೇಶಕ್ಕೆ 10 ಸಲ ಪ್ರಯಾಣಿಸಿದ್ದೇನೆ ಎಂದರು.
ರಂಗಿತರಂಗ ಸಿನಿಮಾಕ್ಕೆ ಸುಂದರ ತಾಣಗಳಿಗಾಗಿ ನಮ್ಮ ರಾಜ್ಯ ಸೇರಿದಂತೆ ಭಾರತದ ಅನೇಕ ಭಾಗಗಳಲ್ಲಿ ಸುತ್ತಾಡಿದ್ದೇನೆ. ಮಂಗಳೂರಿನಿಂದ ತಿರುವನಂತಪುರದವರೆಗೆ ನಾಲ್ಕೈದು ಸಲ ಹೋಗಿ ಬಂದಿದ್ದೇವೆ. ಮಡಿಕೇರಿ, ಸಕಲೇಶಪುರ, ಊಟಿಗಳಲ್ಲಿ ಶೂಟಿಂಗ್ ನಡೆಸಿದ್ದೇವೆ.
ಸಿನಿಮಾದ ಕಥೆಗೆ ಪೂರಕವಾದ ಲೊಕೇಶನ್ ಗಳನ್ನು ಹುಡುಕುತ್ತಾ ಹೊರಟಾಗ ಉತ್ತಮ ಸ್ಥಳಗಳು ಸಿಕ್ಕಿದಾಗ ತುಂಬಾ ಖುಷಿಯಾಗುತ್ತಿತ್ತು. ಕೇರಳದ ತಿರುವನಂತಪುರಕ್ಕೆ ಹೋದಾಗ ಹೊಸ ಅನುಭವವಾಯಿತು. ನನಗೆ ಮಲಯಾಳಂ ಅಷ್ಟಾಗಿ ಬರುವುದಿಲ್ಲ. ಆ ಮೇಲೆ ಅಲ್ಲಿನ ಜನರೊಂದಿಗೆ ಹೊಂದಿಕೊಂಡೆವು ಎಂದು ವಿವರಿಸುತ್ತಾರೆ.
ರಂಗಿತರಂಗವನ್ನು ಪ್ರೇಕ್ಷಕರು ಇಷ್ಟಪಡಲು ಮತ್ತೊಂದು ಕಾರಣ ಸುಂದರ ತಾಣಗಳು. ಅದಕ್ಕಾಗಿ ನಾವು ಊರೂರು ಅಲೆದಿದ್ದೇವೆ. ಕೆಲಸದ ಮಧ್ಯೆ ಪ್ರಯಾಣ ಮಾಡುವುದು ಸುಲಭವಲ್ಲ. ಚಿತ್ರೀಕರಣಕ್ಕೆ ಬೇಕಾದ ಉಪಕರಣಗಳು ಬರುವಲ್ಲಿಯವರೆಗೆ ನಾವು ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತಿದ್ದೆವು. ಸಹಜ ಪರಿಸರದಲ್ಲಿ ಶೂಟಿಂಗ್ ಮಾಡುವುದೆಂದರೆ ನನಗೆ ತುಂಬಾ ಇಷ್ಟ. ಆಧುನಿಕ ಕಟ್ಟಡಗಳು ನನಗೆ ಇಷ್ಟವಾಗುವುದಿಲ್ಲ. ಆದಷ್ಟು ನಾನು ಅಂತಹ ಸ್ಥಳಗಳಲ್ಲಿ ಚಿತ್ರೀಕರಣ ಮಾಡುವುದನ್ನು ತಪ್ಪಿಸಿಕೊಳ್ಳುತ್ತೇನೆ. ರಂಗಿತರಂಗ ಸಿನಿಮಾದ ಅತ್ಯಂತ ಸ್ಮರಣೀಯ ಗಳಿಗೆಯೆಂದರೆ ಮಡಿಕೇರಿಯ ಹಟ್ಟಿಹೊಳ್ಳೆ ಸ್ಥಳ. ಅಲ್ಲಿನ ಜಿನುಗುವ ಮಳೆ, ಅದರ ಮಧ್ಯೆ ಜೀಪಿನಲ್ಲಿ ಓಡಾಡಿದ್ದು ಮರೆಯಲಾಗದ ಅನುಭವ. ಅಮೆರಿಕದಲ್ಲಿಯೂ ವಿಮಾನದಲ್ಲಿ ಅನೇಕ ನಗರಗಳಲ್ಲಿ ಸುತ್ತಾಡಿದ್ದೇನೆ. ಒಂದು ವಿಮಾನ ನಿಲ್ದಾಣದಿಂದ ಇನ್ನೊಂದಕ್ಕೆ ಓಡಾಡುತ್ತಿದ್ದೆ. ಆಗ ಅಲ್ಲಿರುವ ಕನ್ನಡಿಗರು ನನ್ನ ಸಹಾಯಕ್ಕೆ ಬಂದಿದ್ದರು. ಅವರು ನನ್ನ ಜೊತೆ ಫೋಟೋ ತೆಗೆಸಿಕೊಳ್ಳಲು ಕಾತರರಾಗಿದ್ದರು. ಕನ್ನಡಿಗರಲ್ಲಿ ಒಬ್ಬರಿಗೆ ನನ್ನ ಜೊತೆ ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗಲಿಲ್ಲ.ಏಕೆಂದರೆ ನನಗೆ ಆಗಲೇ ವಿಮಾನ ಏರಲು ತಡವಾಗಿತ್ತು.
ಅನೂಪ್ ಅವರ ಪತ್ನಿ, ಮಗ ಅಮೆರಿಕದಲ್ಲಿದ್ದಾರೆ. ಮುಂದಿನ ವಾರ ನಾನು ಮತ್ತೆ ಅಮೆರಿಕಕ್ಕೆ ಹೋಗಬೇಕು ಎನ್ನುತ್ತಾರೆ ಅನೂಪ್.
Advertisement