ಒಂದು ಫೋನ್ ಕಥೆ
ಮೊದಲ ಚಿತ್ರ ಅರವತ್ತು ಭಾಗ ಚಿತ್ರೀಕರಣ ಮಾಡಿ, ಆ ಚಿತ್ರವನ್ನು ಅಲ್ಲಿಗೆ ಬಿಟ್ಟು ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡು ಚಿತ್ರೀಕರಣ ಮುಗಿಸಿದ್ದಾರೆ ನಿರ್ದೇಶಕ ತಿಮ್ಮಂಪಲ್ಲಿ ಚಂದ್ರ. ಅಂದಹಾಗೆ ಇವರು ನಿರ್ದೇಶನ ಮಾಡಿರುವ ಚಿತ್ರದ ಹೆಸರು, 'ಸವಾರಿ 2000'. ಈಗ ಚಿತ್ರೀಕರಣ ಮುಗಿಸಿರುವ ಚಿತ್ರ 'ಮಿಸ್ಡ್ ಕಾಲ್'.
ಕಾರ್ತಿಕ್ ಡ್ರೀಮ್ಸ್ ಹಾಗೂ ಪಿ.ಚಂದ್ರಶೇಖರ್ ನಿರ್ಮಾಣ ಮಾಡಿರುವ ಈ ಚಿತ್ರದ ನಾಯಕ ರಾಜ್ ಕಿರಣ್. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂದಮಂದಿರದಲ್ಲಿ ಇತ್ತೀಚಿಗೆ ಚಿತ್ರದ ಆಡಿಯೋ ಬಿಡುಗಡೆ ನಡೆಯಿತು. ಸಚಿವ ಎಚ್.ಕೆ.ಪಾಟೀಲ್, ಕರ್ನಾಟಕ ರಕ್ಷಣಾ ವೇದಿಕೆಯ ಶಿವಾನಂದ ಶೆಟ್ಟಿ, ಕೆ.ಸಿ.ಎನ್. ಚಂದ್ರಶೇಖರ್. ಲಹರಿ ವೇಲು, ಚಿತ್ರ ವಿತರಕ ತಿಮ್ಮೆಗೌಡ ಮುಂತಾದವರು ಆಗಮಿಸಿ ಚಿತ್ರದ ಆಡಿಯೋ ಬಿಡುಗಡೆ ಮಾಡಿದರು.
'ನನ್ನ ಮೊದಲ ಚಿತ್ರಕ್ಕೆ ಶೇ.60 ಭಾಗ ಚಿತ್ರೀಕರಣ ಮುಗಿದಿದೆ. ಕೆಲವು ಕಾರಣಗಳಿಂದ ಸದ್ಯಕ್ಕೆ ಚಿತ್ರೀಕರಣ ನಿಲ್ಲಿಸಿದ್ದೇನೆ. ಹೀಗಾಗಿ ನಾನೇ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡು ಮುಗಿಸಿದ್ದೇನೆ. ನಾನು ಅಂದುಕೊಂಡಂತೆ ಚಿತ್ರ ಬಂದಿದೆ. ಚಿತ್ರದ ನಾಯಕ ರಾಜ್ ಕಿರಣ್ ಸಹಾಯಕ ನಿರ್ದೇಶಕರಾಗಿ ಬಂದವರು. ನನ್ನ ನಿರ್ದೇಶನದ ತಂಡದಲ್ಲಿ ಕೆಲಸ ಮಾಡುತ್ತಿದ್ದ ರಾಜ್ ಕಿರಣ್ ಪ್ರತಿಭೆ ಬಗ್ಗೆ ಗೊತ್ತಿತ್ತು. ಈ ಕಾರಣಕ್ಕೆ ಚಿತ್ರಕ್ಕೆ ಅವರನ್ನೇ ನಾಯಕನನ್ನಾಗಿಸಿದೆ. ತುಂಬಾ ಚೆನ್ನಾಗಿ ಅಭಿನಯಿಸಿದ್ದಾನೆ. ಇದೊಂದು ಹಾರ್ಟ್ ಫೀಲ್ ಪ್ರೇಮ ಕಥೆ' ಎಂದರು ನಿರ್ದೇಶಕ ತಿಪ್ಪಂಪಲ್ಲಿ ಚಂದ್ರ.
ಸಿನಿಮಾಗಳಲ್ಲಿ ನಾಯಕಿ ಪಾತ್ರ ಇರುವುದು ಕಾಮನ್. ಆದರೆ ಈ ಸಿನಿಮಾದಲ್ಲಿ ನಾಯಕಿಯೇ 'ಮಿಸ್' ಆಗಿದ್ದಾರೆ. ಅಂದರೆ ನಾಯಕಿ ಇಲ್ಲದ ನಾಯಕನ ಪ್ರೇಮ ಕಥೆ ಇದು. ಈ ಕಾರಣಕ್ಕೆ ಚಿತ್ರಕ್ಕೆ 'ಮಿಸ್ಟ್ ಕಾಲ್' ಎನ್ನುವ ಹೆಸರು ಇಡಲಾಗಿದೆ. ಅಲ್ಲದೆ ಒಂದು ಮಿಸ್ ಕಾಲ್‌ನಿಂದ ಏನೆಲ್ಲ ಕಥೆಗಳು ಹುಟ್ಟಿಕೊಳ್ಳುತ್ತವೆ ಎಂಬುದು ಚಿತ್ರದ ಒಂದು ಸಾಲಿನ ಕಥೆ. ಆದರೆ, ಆ ಮಿಸ್ ಕಾಲ್ ಯಾವ ಹುಡುಗಿಯದ್ದು ಎಂಬುದು ಕೂಡ ಚಿತ್ರದ ಬಹು ಮುಖ್ಯ ಸಸ್ಪೇನ್ಸ್ ಅಂತೆ. ಫೋನ್‌ನಲ್ಲೇ ಲವ್ ಮಾಡುವ ಹುಡುಗನಾಗಿ ಕಾಣಿಸಿಕೊಂಡಿರುವ ರಾಜ್ ಕಿರಣ್ ಅವರಿಗೆ ಒಂದು ವಿಭಿನ್ನವಾದ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡ ಸಂತೋಷವಿದೆ.
'ಸಿನಿಮಾದಲ್ಲಿ ನಾಯಕನಾಗಬೇಕು ಎಂಬುದು ನನ್ನ ಕನಸು. ಆದರೆ, ಸಹಾಯಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಬಂದಿದ್ದೆ. ಈಗ ಚಂದ್ರ ಅವರ ನೆರವಿನಿಂದ ನಾಯಕನಾಗಿದ್ದೇನೆ' ಎಂಬುದು ರಾಜ್ ಕಿರಣ್ ಮಾತು. ಮತ್ತೊಂದು ವಿಶೇಷ ಅಂದರೆ ಇಲ್ಲಿ ಮೊಬೈಲ್ ಫೋನ್ ಚಿತ್ರದ ನಾಯಕಿ!
ವಿಜಯ್ ಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ದರ್ಶನ್ ಗದಗ್ ಚಿತ್ರದ ಎರಡನೇ ನಾಯಕ. 'ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಎಲ್ಲರು ಸೇರಿ ಒಂದು ಒಳ್ಳೆಯ ಸಿನಿಮಾ ಮಾಡಿದ್ದೇವೆ' ಎಂದರು ದರ್ಶನ್. ಚಿತ್ರಕ್ಕೆ ರಾಕೇಶ್ ಕ್ಯಾಮೆರಾ ಹಿಡಿದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ