ಪುನೀತ್ ರಾಜಕುಮಾರ್ 'ಮೈತ್ರಿ' ಯಶಸ್ವಿಯಾಗಲು 10 ಕಾರಣಗಳು

ಹೆಚ್ಚಿನ ಪ್ರಚಾರವೇ ಇರದೆ, ಅಬ್ಬರಕ್ಕೆ ಕಿಂಚಿತ್ತೂ ಬೆಲೆ ಕೊಡದೆ ತಣ್ಣಗೊಂದು ಚಿತ್ರ ಬಿಡುಗಡೆಯಾಗುತ್ತಿದೆ - 'ಮೈತ್ರಿ'. ಪುನೀತ್ ರಾಜಕುಮಾರ್, ಮೋಹನಲಾಲ್, ಅತುಲ್ ಕುಲಕರ್ಣಿ ಅಭಿನಯದ ನಿರ್ದೇಶಕ ಬಿ.ಎಂ.ಗಿರಿರಾಜ್ ರ 'ಮೈತ್ರಿ'
ಮೈತ್ರಿ ಸಿನೆಮಾ
ಮೈತ್ರಿ ಸಿನೆಮಾ

ಬೆಂಗಳೂರು: ಕೆಲವು ಸಿನೆಮಾಗಳು ಫೇಸ್ ಬುಕ್ನಲ್ಲಿ ಮಾತ್ರ ಸೂಪರ್ ಹಿಟ್ ಆಗ್ತವೆ. ಆ ಚಿತ್ರಗಳ ಬಗ್ಗೆ ಅವರದ್ದೇ ಸರ್ಕಲ್ ಗಳಲ್ಲಿ ಲೈಕುಗಳ ಬೆಂಕಿ ಹಚ್ಚಿ ಉರಿಸುತ್ತಾ ಹೋಗುತ್ತಾರೆ. ಆದರೆ ಗಾಂಧಿನಗರ ಈ ಫೇಸ್ ಬುಕ್ನಿಂದ ಹೊತ್ತಿ ಉರಿಯೋದಿಲ್ಲ ಎಂಬುದು ನಿಮಗೆ ಗೊತ್ತಿರಬೇಕಷ್ಟೆ.

ಹೆಚ್ಚಿನ ಪ್ರಚಾರವೇ ಇರದೆ, ಅಬ್ಬರಕ್ಕೆ ಕಿಂಚಿತ್ತೂ ಬೆಲೆ ಕೊಡದೆ ತಣ್ಣಗೊಂದು ಚಿತ್ರ ಬಿಡುಗಡೆಯಾಗುತ್ತಿದೆ - 'ಮೈತ್ರಿ'. ಪುನೀತ್ ರಾಜಕುಮಾರ್, ಮೋಹನಲಾಲ್, ಅತುಲ್ ಕುಲಕರ್ಣಿ ಅಭಿನಯದ ನಿರ್ದೇಶಕ ಬಿ.ಎಂ.ಗಿರಿರಾಜ್ ರ 'ಮೈತ್ರಿ' ಈಗ ಗಾಂಧಿನಗರದ ಬಹುನಿರೀಕ್ಷಿತ ಚಿತ್ರ ಎನ್ನಿಸಿಕೊಂಡಿದೆ. ಏಕೆಂದರೆ ಚಿತ್ರದ ಕುರಿತು ಒಳ್ಳೆಯ ಮಾತುಗಳು ಸಾಂಕ್ರಾಮಿಕವಾಗಿ ಹರಡಿ ಮೈತ್ರಿಯನ್ನು ಜನರು ಕಾತುರದಿಂದ ಕಾಯುವಂತೆ ಮಾಡಿದೆ.

ತನ್ನ ಮೂರನೇ ಚಿತ್ರಕ್ಕೇ ಗಾಂಧಿನಗರದ ಮಂದಿ ಅಚ್ಚರಿಗೊಳಗಾಗುವಂತೆ ಮಾಡಿರುವುದು ನಿರ್ದೇಶಕ ಬಿ.ಎಂ.ಗಿರಿರಾಜ್. ಜಟ್ಟ ಮತ್ತು ಅದ್ವೈತ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ತನ್ನ ಕಥನ ಮೂಲಕ ಗೆದ್ದದ್ದು ಗಿರಿರಾಜ್. ಆದರೆ ಮೈತ್ರಿ ಮೂಲಕ ಗಿರಿರಾಜ್ ಹೊಸ ಇತಿಹಾಸವನ್ನೇ ಬರೆಯಲು ಸಿದ್ಧವಾಗಿದ್ದಾರೆ ಎನ್ನುವುದು ಗಾಂಧಿನಗರದ ಪಂಡಿತರ ವ್ಯಾಖ್ಯಾನ. ಈಗಾಗಲೇ ಮೈತ್ರಿಯನ್ನು ಲ್ಯಾಬ್ ನಲ್ಲಿ ನೋಡಿದವರು ಈ ಚಿತ್ರ ಈ ವರ್ಷದ ಸೂಪರ್ ಹಿಟ್ ಸಿನೆಮಾ ಆಗೋದ್ರಲ್ಲಿ ಅನುಮಾನವೇ ಇಲ್ಲ ಅನ್ನುತ್ತಿದ್ದಾರೆ.

ಹಾಗಿದ್ದರೆ 'ಮೈತ್ರಿ' ಈ ವರ್ಷದ ಸೂಪರ್ ಹಿಟ್ ಚಿತ್ರ ಆಗೋದಕ್ಕೆ ಕಾರಣಗಳನ್ನು ಸ್ಥೂಲವಾಗಿ ಪಟ್ಟಿ ಮಾಡಿದಲ್ಲಿ.

1. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಚಿತ್ರದ ಕುರಿತು ಮಿತ್ರ ಸಮೂಹದಲ್ಲಿ ತುಂಬಾ ಹೊಗಳಿ ಮಾತನಾಡಿರುವುದು.

2. ಗಿರಿರಾಜ್ ಮಾಡಿಕೊಂಡಿದ್ದ ಚಿತ್ರಕಥೆ ಮತ್ತು ಪೂರ್ವಸಿದ್ಧತೆಯನ್ನು ಮೋಹನಲಾಲ್, ಅತುಲ್ ಕುಲಕರ್ಣಿ ಮತ್ತು ಪುನೀತ್ ರಾಜಕುಮಾರ್ ಅಪಾರವಾಗಿ ಮೆಚ್ಚಿದ್ದಾರೆ, ಅಲ್ಲದೆ ಚಿತ್ರ ನಿರ್ದೇಶಕ ಗಿರಿರಾಜ್ ಕನ್ನಡಕ್ಕೆ ಹೊಸ ಕೊಡುಗೆಯಾಗಬಲ್ಲ ಎಂಬುದನ್ನು ಮೋಹನಲಾಲ್ ಹಲವು ಕಡೆ ಹೇಳಿಕೊಂಡಿದ್ದಾರೆ.

3. ಇತ್ತೀಚಿನ ದಿನಗಳಲ್ಲಿ ಕಥನ ಕಲೆ ಗೊತ್ತಿದ್ದ ನಿರ್ದೇಶಕರ ಸಂಖ್ಯೆ ಕಡಿಮೆಯಿತ್ತು,  ಚಿತ್ರದ ಕಥೆ ಮತ್ತು ಅದನ್ನು ಮನರಂಜಕವಾಗಿ ಜನರ ಮುಂದೆ ಹೇಳಿ ಯಶಸ್ವಿಯಾಗಬಲ್ಲ ಕಲೆ ಗಿರಿರಾಜ್ ರಿಗೆ ಸಿದ್ಧಿಸಿದೆ ಎನ್ನಲು -  ಅವರ  ಜಟ್ಟ ಮತ್ತು ಅದ್ವೈತ ಸಾಕ್ಷಿ.

4. ಮಲ್ಟಿ ಸ್ಟಾರರ್ ಚಿತ್ರಗಳು ಬಂದು ಬಹುಕಾಲವಾಗಿದೆ. ಅಂಥದ್ದರಲ್ಲಿ ಇಲ್ಲಿ ಅಭಿನಯವೇ ಜೀವಾಳವಾಗಿರೋ 3 ಕಲಾವಿದರು ಒಟ್ಟಿಗೆ ಅಭಿನಯಿಸುತ್ತಿರೋದು ಜನರಿಗೆ ಮನರಂಜನೆ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.

5. ಯಾವುದೇ ಚಿತ್ರ ಮಾಡಿದರೂ ಅದನ್ನು ವಾಸ್ತವತೆಯ ಗೆರೆಯಲ್ಲಿ ತಂದು ನಿಲ್ಲಿಸುವ ಯಶಸ್ವಿ ತಂತ್ರ ಗಿರಿರಾಜ್ ರದು, ನಿರ್ದೇಶಕ ಶಶಾಂಕ್ ರ ಜೊತೆ ದುಡಿದ ಅವರ ಅನುಭವ, 2500 ಬೀದಿನಾಟಕಗಳಲ್ಲಿ ಭಾಗವಹಿಸಿರುವ ಗಿರಿರಾಜ್ ಈಗಾಗಲೇ ಸಾಂಸ್ಕೃತಿಕ ರಂಗದಲ್ಲಿ ಅತ್ಯಂತ ದೊಡ್ಡ ಹೆಸರು. ಕನ್ನಡದ ಅಪಾರ ಓದು, ಸಾಹಿತ್ಯ ಇವೆಲ್ಲವನ್ನೂ ಮೈತ್ರಿಯ ಕಥನ ಮತ್ತು ಒಟ್ಟಾರೆ ಚಿತ್ರಣದಲ್ಲಿ ಗುರುತಿಸಬಹುದು ಎನ್ನುತ್ತಾರೆ ನಿರ್ದೇಶಕರ ಗೆಳೆಯರು.

6. ಗಾಂಧಿನಗರದಲ್ಲಿ ಹೀರೋ ಓರಿಯೆಂಟೆಂಡ್ ಸಿನೆಮಾಗಳಷ್ಟೇ ತೆರೆ ಕಾಣುತ್ತಿರುವಾಗ, ಬಹುನಾಯಕರಿದ್ದೂ ಕಥೆಯೇ ಹೀರೋ ಆಗಿರುವ ಮೈತ್ರಿಯನ್ನು ಪುನೀತ್ ರಾಜಕುಮಾರ್ ಮೋಹನಲಾಲ್ ರಂಥಹ ಅಗ್ರನಾಯಕರು ಒಪ್ಪಿರುವುದೂ ಗಾಂಧಿನಗರದಲ್ಲಿ ಈ ಚಿತ್ರದ ಕುರಿತು ದೊಡ್ಡ ಚರ್ಚೆ ಹುಟ್ಟಲು ಕಾರಣ.

7. ಚಿತ್ರದ ಸಂಗೀತ ನೀಡಿರೋದು ಸಂಗೀತ ದಿಗ್ಗಜ ಇಳಯರಾಜಾ. ಇಳಯರಾಜಾ ಸಂಗೀತ ನೀಡಿ, ಅವರೊಂದು ಹಾಡು ಹಾಡಿ ಬಿಟ್ಟರೆ ಚಿತ್ರ ಸೂಪರ್ ಹಿಟ್ ಎಂಬ ಮಾತು ಗಾಂಧಿನಗರದಲ್ಲಿ ಜನಜನಿತ. ಮೈತ್ರಿ ಚಿತ್ರದಲ್ಲೂ ಇಳಯರಾಜಾ ಹಾಡಿರುವುದಲ್ಲದೆ, ಈ ಚಿತ್ರಕ್ಕೆ ಅತ್ಯಂತ ಅಪರೂಪದ ರಾಗಮಾಲಿಕೆಗಳನ್ನು ಅವರು ಕೊಟ್ಟಿದ್ದಾರೆ. ಆಡಿಯೋ ತಕ್ಕಮಟ್ಟಿಗೆ ಜನರ ಮನದಲ್ಲಿ ಪೂರ್ತಿಯಾಗಿ ಪರಿಣಾಮ ಬೀರಿಲ್ಲವಾದರೂ, ಚಿತ್ರಕ್ಕೆ ಪೂರಕವಾಗಿದೆ ಎಂಬುದು ತಂತ್ರಜ್ಞರ ಅಭಿಮತ.

8. ಕನ್ನಡದ ಸಂಸ್ಕೃತಿಯ ಗಂಧಗಾಳಿಯಿಲ್ಲದ ಹಲವು ನಿರ್ದೇಶಕರ ಚೌಚೌ ಚಿತ್ರಗಳು, ಐಟಂ ಸಾಂಗ್ ಗಳನ್ನೇ ತಮ್ಮ ಮುಸುಡಿಯ ಮೇಲೆ ಹಾಕಿಕೊಂಡು ಮೆರೆವ ಕಾಮಿಡಿ ಹೀರೋಗಳು, ಬೆತ್ತಲೆ ಹೀರೋಯಿನ್ಗಳ ಬೆನ್ನುಡಿಯನ್ನೇ ನಂಬಿರುವ ಕೆಲವು ನಿರ್ಮಾ'ಪೆಕರು'ಗಳು ಮತ್ತವರ ಕೆಟ್ಟ ಸಿನೆಮಾಗಳನ್ನು ನೋಡಿ ತಲೆ ಚಿಟ್ಟು ಹಿಡಿದುಹೋಗಿರುವ ಜನರಿಗೆ ಮೈತ್ರಿ - ಪ್ರಸ್ತುತ ಸಮಾಜದ ಸಮಸ್ಯೆಯೊಂದಕ್ಕೆ ಪ್ರತಿಬಿಂಬವಾಗುವ ಮೂಲಕ ಜನರಿಗೆ ಇಷ್ಟವಾಗಬಹುದು.

9. ನಿರ್ಮಾಪಕ ರಾಜಕುಮಾರ್ ಈ ಮುನ್ನ (ಮೈನಾ, ಜಟ್ಟ) ದಂಥ ಚಿತ್ರಗಳಿಗೆ ಜೊತೆಯಾಗಿ ನಿಂತವರು. ಅರ್ಥಪೂರ್ಣ ಚಿತ್ರಗಳ ಜೊತೆಗೆ ಹೊಸ ಬಗೆಯ ಸಂಚಲನಕ್ಕೆ ಒಡ್ಡಿಕೊಳ್ಳುವ ರಾಜಕುಮಾರ್ ಮತ್ತು ನಿರ್ದೇಶಕ ಗಿರಿರಾಜ್ ಮೈತ್ರಿಯ ಮೂಲಕ ಹೊಸತೊಂದು ಇತಿಹಾಸ ಸೃಷ್ಟಿಸೋದ್ರಲ್ಲಿ ಅನುಮಾನವಿಲ್ಲ ಎನ್ನುತ್ತದೆ ಗಾಂಧಿನರದ ಚಿತ್ರ ಪಂಡಿತರ ವಲಯ.

10. ಅಂದಹಾಗೆ, ಮೈತ್ರಿ ಚಿತ್ರ - ಆ ದಿನಗಳು, ಎದೆಗಾರಿಕೆಯಂತೆಯೇ ಜನರನ್ನು ತನ್ನ ಕ್ಲಾಸ್ ಮತ್ತು ಮಾಸ್ ಅಪೀಲಿನಿಂದ ಸೆಳೆಯುತ್ತದೆ ಎನ್ನುವುದು ಚಿತ್ರಪಂಡಿತರ ಲೆಕ್ಕಾಚಾರ. ಹಾಗೇನಾದರೂ ಆದಲ್ಲಿ ಗಿರಿರಾಜ್ ರ ದಾದಾಗಿರಿಯ ದಿನಗಳು ಆರಂಭಾಗೋದು ಗ್ಯಾರಂಟಿ. ಒಳ್ಳೆಯ ನಿರ್ದೇಶಕನ ಒಳ್ಳೆಯ ಚಿತ್ರಕ್ಕೆ ಕನ್ನಡಿಗರು ಜೊತೆಗಿದ್ದರೆ ಸಾಕು, ಅದುವೇ ಮೈತ್ರಿ!!!

- ಸುನಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com