
ಈ ಚಿತ್ರದ ನಿರ್ದೇಶನ, ಕತೆ, ಚಿತ್ರಕಥೆ, ಸಂಭಾಷಣೆ ಎಲ್ಲವೂ ನನ್ನದೆ. ಟೊಟಲಿ ಈ ಚಿತ್ರದ ಸೂತ್ರಧಾರ ನಾನೇ...
ಹೀಗೆ ಒಂದೇ ಉಸಿರನಲ್ಲಿ ಹೇಳಿಕೊಂಡಿದ್ದು ನಿರ್ದೇಶಕ ಉದಯ್ ಪ್ರಕಾಶ್ ಅಲ್ಲಲ್ಲ. ವಿಜಯ್ ಹಂಪಳ್ಳಿ. ಅವರ ಈ ಮಾತು ಡಿಕೆ ಚಿತ್ರಕ್ಕೆ ಸಂಬಂಧಿಸಿದ್ದು. ಈ ಚಿತ್ರ ಪ್ರೇಕ್ಷಕರ ಮುಂದೆ ಬಂದಿರುವ ಸಂದರ್ಭದಲ್ಲಿ ವಿಜಯ್ ಹೀಗೆ ಹೇಳಿಕೊಳ್ಳುವುದಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಮುಖ್ಯವಾಗಿ ಚಿತ್ರದ ನಾಯಕ ಪ್ರೇಮ್. ಹೌದು, ಸಿನಿಮಾ ಶುರುವಾಗಿನಿಂದಲೂ 'ವಿಜಯ್ ಹಂಪಳ್ಳಿ ನಿರ್ದೇಶನದ ಡಿಕೆ ಸಿನಿಮಾ ಇದು' ಎನ್ನುವುದಕ್ಕಿಂತ 'ಜೋಗಿ ಪ್ರೇಮ್ ಅಭಿನಯದ ಚಿತ್ರ'ವೆಂದು ಪ್ರಚಾರವಾಗಿದ್ದೇ ಹೆಚ್ಚು. ಇದರ ನಡುವೆ ಸನ್ನಿಲಿಯೋನ್ ಹವಾ, ಟೈಟಲ್‌ನಿಂದಾಗಿ ರಾಜಕಾರಣಿ ಡಿ.ಕೆ.ಶಿವಕುಮಾರ್ ಹೆಸರಿನ ಸದ್ದು. ಈ ಕಾರಣಕ್ಕೆ ಮರೆಗೆ ಸರಿದಿದ್ದ ವಿಜಯ್ ಹಂಪಳ್ಳಿ ಈಗ ತೆರೆಗೆ ಬರುತ್ತಿದ್ದಾರೆ. ಅರ್ಥಾತ್ 'ಡಿಕೆ' ಸೂತ್ರಧಾರ ತಾನೇ ಎನ್ನುವ ಸತ್ಯದ ಮುದ್ರೆಯನ್ನು ಗಟ್ಟಿಯಾಗಿ ಒತ್ತಿದ್ದಾರೆ. ಅವರದ್ದೇ ಸಿನಿಮಾದ ಡೈಲಾಗ್‌ನ ಹಾಗೆ ಬರೀ ಡಿಕೆ ನಹಿ, ವಿಜಯ್ ಸಾಬ್ ಬೋಲೋ ಎನ್ನುತ್ತಿದ್ದಾರೆ.
'ಕೆರಕೊಳ್ಳೋರು ಕೆರಕೊಳ್ಳಿ... ಉರುಕ್ಕೋಳ್ಳರು ಉರುಕೊಳ್ಳಿ... ನನ್ ಸ್ಟೈಲೇ ಹಿಂಗೆ' ಮಚ್ ಹೆಂಗ್ ಹಿಡಿಯೋದು ಅಂತ ಹೇಳಿಕೊಟ್ಟೋನೇ ನಾನು... ಇಂಥ ಸಂಭಾಷಣೆಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಲಿರುವ ಡಿಕೆ ಚಿತ್ರಕ್ಕೆ ಪ್ರೇಕ್ಷಕರು ಬಹುಪರಾಕ್ ಹಾಕುವುದು ಗ್ಯಾರಂಟಿ ಎನ್ನುವ ವಿಶ್ವಾಸ ವಿಜಯ್ ಅವರದ್ದು.
ಒಬ್ಬ ನಿರ್ದೇಶಕನಾಗಿ ವಿಜಯ್ ಹಂಪಳ್ಳಿ, ಈ ಚಿತ್ರದ ಮೇಲೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. ಪ್ರೇಮ್ ಅವರ ಹಿಂದಿನ ಸಿನಿಮಾಗಳು ತಕ್ಕ ಮಟ್ಟಿಗೆ ಗೆದ್ದಿವೆ. ಹೇಳಿಕೊಳ್ಳುವಂಥ ಗೆಲುವು ಸಿಕ್ಕಿಲ್ಲ. ಆದರೆ ಡಿಕೆ ಸಿನಿಮಾ ಗೆದ್ದೇ ಗೆಲ್ಲುತ್ತದೆ. ನನ್ನ ಪ್ರಕಾರ ಕಥೆಗೆ ನಾಯಕ ಮುಖ್ಯ ಅಲ್ಲ. ಯಾಕೆಂದರೆ ಇಡೀ ಕಥೆ ನಡೆಯುವುದು ನಾಯಕಿ ಮೇಲೆ. ಹಾಗೆ ನೋಡಿದರೆ ಶರತ್ ಲೋಹಿತಾಶ್ವ, ಕಾಳಿಸ್ವಾಮಿ, ಶೋಭರಾಜ್ ಇವರು ಕೂಡ ಚಿತ್ರದ ಮುಖ್ಯ ಪಿಲ್ಲರ್‌ಗಳು. ಆದರೆ, ಪ್ರೇಮ್ ಅವರನ್ನು ಈ ಹಿಂದಿನ ಚಿತ್ರಗಳಲ್ಲಿ ನೀವು ಹೇಗೆ ನೋಡಿದ್ದಿರೋ ಅದಕ್ಕಿಂತ ಭಿನ್ನವಾಗಿ ಈ ಚಿತ್ರದಲ್ಲಿ ನೋಡುತ್ತೀರಿ. ಈ ಚಿತ್ರದಲ್ಲಿ ಪ್ರೇಮ್ ಮಾಡಿರುವ ಸ್ಟೈಲು ರಾಜಕಾರಣಿ ಡಿ.ಕೆ. ಶಿವಕುಮಾರ್ ಅವರ ಕಾಲೇಜ್ ದಿನಗಳ ಸ್ಟೈಲು. ಆಗ ಡಿಕೆ ಅವರನ್ನು ಸಿಲ್ಕ್ ಶಿವ, ರೇಬಾನ್ ಗೌಡ ಅಂತ ಕರೆಯುತ್ತಿದ್ದರು. ಅಷ್ಟು ಸ್ಟೈಲಿಸ್ ಆಗಿದ್ದವರು ಡಿ.ಕೆ.ಶಿವಕುಮಾರ್. ಅವರದ್ದೇ ಮ್ಯಾನರಿಸಂ, ಸ್ಟೈಲ್ ಈ ಚಿತ್ರದಲ್ಲಿದೆ. ಆದರೆ ಕಥೆ, ಡಿ.ಕೆ.ಶಿವಕುಮಾರ್ ಅವರದ್ದಾ? ಎಂದರೆ ಈ ಪ್ರಶ್ನೆಗೆ ನೀವು ಚಿತ್ರ ನೋಡಬೇಕು ಎನ್ನುತ್ತಾರೆ ವಿಜಯ್.
ಇದು ಪಕ್ಕಾ ಎಂಟರ್‌ಟೈನ್‌ಮೆಂಟ್ ಸಿನಿಮಾ. ಸೀರಿಯಸ್ ಕಾಮಿಡಿ ಚಿತ್ರ. ಇಲ್ಲಿ ಪ್ರೇಮ್ ನಟರಾಗಿ ಮಾತ್ರ ಕೆಲಸ ಮಾಡಿದ್ದಾರೆ. ನಿರ್ಮಾಪಕಿಯಾಗಿ ರಕ್ಷಿತಾ ಅವರು ಚಿತ್ರಕ್ಕೆ ಏನು ಬೇಕೋ ಅದನ್ನು ಕೊಟ್ಟಿದ್ದಾರೆ. ದೇವರನ್ನು ನಂಬುವ ಮತ್ತು ನಂಬದ ಇಬ್ಬರಿಗೆ ಒಬ್ಬನೇ ಸ್ವಾಮಿ. ಇವರ ನಡುವೆ ಒಬ್ಬ ಹುಡುಗಿ, ಈಕೆಯ ಹಿಂದೆ ಅನಕ್ಷರಸ್ಥ ಹಳ್ಳಿಯ ಪೋಲಿ ಹುಡುಗ. ಇವರೆಲ್ಲರ ಸುತ್ತ ಕಥೆ ಸಾಗುತ್ತದೆ. ವಿದ್ಯಾವಂತನ ಬುದ್ಧಿಗಿಂತ ಅವಿದ್ಯಾವಂತನ ಗತ್ತು, ದೌವಲತ್ತು ಹೆಚ್ಚು ಸದ್ದು ಮಾಡುತ್ತದೆ. ಅದೇ ಡಿಕೆ ಪಾತ್ರಕ್ಕಿರುವ ಔಟ್ ಲುಕ್. ಅದನ್ನು ತೆರೆ ಮೇಲೆ ನೋಡಬೇಕು.
ಡಿಕೆ ಅಂದ್ರ ಡಿ.ಕೆ.ಶಿವಕುಮಾರ್ ನೆನಪಾಗುವುದು ಸಹಜ. ಆದರೂ ಟೈಟಲ್‌ಗೆ ಯಾವುದೇ ಅಡ್ಡಿ ಮಾಡದೆ ಕೊಟ್ಟಿದ್ದಕ್ಕೆ ಡಿ.ಕೆ.ಶಿವಕುಮಾರ್ ಅವರ ಮೇಲೆ ನನಗೆ ಅಪಾರವಾದ ಗೌರವ ಇದೆ. ಈ ಚಿತ್ರದಲ್ಲಿ ನಿರ್ದೇಶಕನಿಗಿಂತ ನಾಯಕ ಪ್ರೇಮ್ ಅವರ ಹೆಸರು ಹೆಚ್ಚು ಓಡಿದ್ದು ಹೌದು. ಅದು ಕಾಮನ್. ಯಾಕೆಂದರೆ ನಾಯಕ ಕಂ ನಿರ್ಮಾಪಕ ಅವರೇ. ಆದರೆ ಒಬ್ಬ ನಿರ್ದೇಶಕನಾಗಿ ಪ್ರೇಮ್ ಅವರಿಗೆ ಒಳ್ಳೆಯ ಸಿನಿಮಾ ಮಾಡಿರುವ ಸಂತೋಷ ನನಗಿದೆ ಎಂಬುದು ವಿಜಯ್ ಅವರ ಮಾತು.
ಅಂದಹಾಗೆ ಉದಯ್ ಪ್ರಕಾಶ್, ವಿಜಯ್ ಹಂಪಳ್ಳಿ ಆಗಿದ್ದು ಯಾಕೆ? ಚಿತ್ರರಂಗದಲ್ಲಿ ಸಾಕಷ್ಟು ಮಂದಿ ಪ್ರಕಾಶ್‌ಗಳಿದ್ದಾರೆ. ಓಂಪ್ರಕಾಶ್ ರಾವ್, ಸಾಯಿ ಪ್ರಕಾಶ್, ಮಿಲನ ಪ್ರಕಾಶ್, ಸಂಕಲನಕಾರ ಕೆ.ಎ.ಪ್ರಕಾಶ್.... ಈ ಎಲ್ಲ ಪ್ರಕಾಶಮಾನದ ಹೆಸರುಗಳ ನಡುವೆ ತಾನೂ ಯಾಕೆ? ಎಂದು ಬೇರೆ ರೀತಿಯಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ತಮ್ಮ ಹೆಸರನ್ನು ವಿಜಯ್ ಹಂಪಳ್ಳಿ ಎಂದು ಬದಲಾಯಿಸಿಕೊಂಡಿದ್ದಾರೆ. ಹೊಸ ಹೆಸರಿನೊಂದಿಗೆ ಡಿಕೆಯನ್ನು ಜತೆ ಮಾಡಿಕೊಂಡು ಬರುತ್ತಿರುವ ವಿಜಯ್ ಹಂಪಳ್ಳಿ ಅವರನ್ನು ಪ್ರೇಕ್ಷಕರು ಸ್ವಾಗತಿಸುವಂತಾಗಲಿ.
-ಕೇಶವ
Advertisement