ನಿರ್ಧಾರ ಸಮರ್ಥಿಸಿಕೊಂಡ ಪಹಲಾಜ್ ನಿಹಲಾನಿ

ಸಿನಿಮಾಗಳಲ್ಲಿ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಪದಗಳ ಮಾರ್ಗಸೂಚಿ ನಿರ್ಬಂಧದಿಂದ ಯಾರಿಗಾದರೂ ಸಮಸ್ಯೆಯಿದ್ದರೆ...
ಸೆನ್ಸಾರ್ ಬೋರ್ಡ್ ಮುಖ್ಯಸ್ಥ ಪಹಲಾಜ್ ನಿಹಲಾನಿ
ಸೆನ್ಸಾರ್ ಬೋರ್ಡ್ ಮುಖ್ಯಸ್ಥ ಪಹಲಾಜ್ ನಿಹಲಾನಿ

ನವೆದೆಹಲಿ: ಸಿನಿಮಾಗಳಲ್ಲಿ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಪದಗಳ ಮಾರ್ಗಸೂಚಿ ನಿರ್ಬಂಧದಿಂದ ಯಾರಿಗಾದರೂ ಸಮಸ್ಯೆಯಿದ್ದರೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಹೋಗಬಹುದು ಎಂದು ಸೆನ್ಸಾರ್ ಬೋರ್ಡ್ ಮುಖ್ಯಸ್ಥ ಪಹಲಾಜ್ ನಿಹಲಾನಿ ಹೇಳಿದ್ದಾರೆ.

ಇನ್ನು ಮುಂದೆ ನಿರ್ಮಾಣ ಮಾಡುವ ಸಿನಿಮಾಗಳಲ್ಲಿ ಡಬಲ್ ಮೀನಿಂಗ್ ಪದಗಳು ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ, ರಕ್ತಪಾತಗಳನ್ನು ವೈಭವೀಕರಣ ಮಾಡುವಂತಿಲ್ಲ. ಒಂದು ವೇಳೆ ಮಂಡಳಿಯ ಮಾರ್ಗಸೂಚಿಯನ್ನು ಪಾಲಿಸದ ಚಿತ್ರಗಳ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂಬ ಆದೇಶವನ್ನು ಪಹಲಾಜ್ ನಿಹಲಾನಿ ಹೊರಡಿಸಿದ್ದರು.

ಈ ಆದೇಶಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಚಿತ್ರ ನಿರ್ಮಾಪಕ ಹಾಗೂ ಸೆನ್ಸಾರ್ ಬೋರ್ಡ್ ಸದಸ್ಯ ಅಶೋಕ್ ಪಂಡಿತ್, ನಿರ್ಧಾರ ಕೈಗೊಳ್ಳುವುದಕ್ಕೂ ಮೊದಲು ನಮ್ಮ ಸಲಹೆಯನ್ನೇ ಕೇಳಿರಲಿಲ್ಲ. ಆದರೆ ಮಾಧ್ಯಮಗಳಲ್ಲಿ ಸುದ್ದಿ ಬಹಿರಂಗವಾಗಿದೆ. ಸೆನ್ಸಾರ್ ಮಂಡಳಿಯ ನಿರ್ಧಾರದ ಪಟ್ಟಿಯಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವ ಪದಗಳನ್ನೂ ನಿಷೇಧಿಸಲಾಗಿದೆ ಎಂದು ಆರೋಪಿಸಿದ್ದರು.

ಅಶೋಕ್ ಪಂಡಿತ್ ಅವರ ಈ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಪ್ರತಿಕ್ರಿಯೆ ನೀಡಿರುವ ಪಹಲಾಜ್ ನಿಹಲಾನಿ ಅವರು, ಪಟ್ಟಿ ತಯಾರು ಮಾಡಿರುವುದು ನಾನಲ್ಲ. ಪ್ರಸ್ತುತ ನಿಷೇಧಿಸಿರುವ ಪದಗಳ ಪಟ್ಟಿಯನ್ನು ಮಂಡಳಿ ಸದಸ್ಯರೇ ತಯಾರು ಮಾಡಿರುವಂತಹದ್ದು. ಪಟ್ಟಿ ತಯಾರಾದ ನಂತರ ಮಾಧ್ಯಮವನ್ನು ಹೊರತು ಪಡಿಸಿ ಮಂಡಳಿ ಸದಸ್ಯರು ಹಾಗೂ ಸ್ಥಳೀಯ ಕಚೇರಿಗಳಿಗಷ್ಟೇ ಪಟ್ಟಿಯ ಮಾಹಿತಿಯನ್ನು ನೀಡಲಾಗಿತ್ತು ಎಂದು ಹೇಳಿದ್ದಾರೆ.

ನನಗೆ ನೀಡಿರುವ ಮಾರ್ಗಸೂಚಿಯಂತೆ ನಾನು ನಡೆದುಕೊಳ್ಳುತ್ತಿದ್ದೇನೆ. ಮಂಡಳಿಯ ಸದಸ್ಯರೇ ಪಟ್ಟಿಯನ್ನು ತಯಾರಿಸಿದ್ದು, ನಾನು ವೈಯಕ್ತಿಕವಾಗಿ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ನಿರ್ಧಾರದಿಂದ ಚಿತ್ರೋದ್ಯಮ ಉದ್ಯೋಗಿಗಳಿಗೇನಾದರೂ ತೊಂದರೆಯಾಗಿದ್ದರೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಹೋಗಿ ಅವರ ಅಂಗೀಕಾರವನ್ನು ಪಡೆದುಕೊಂಡು ಬರಲಿ. ಸಚಿವಾಲಯದ ನಿರ್ಧಾರವನ್ನು ನಾನು ಪಾಲಿಸುತ್ತೇನೆ ಎಂದು ನಿಹಲಾನಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com