ಡ್ಯಾನ್ಸಿಂಗ್ ಸ್ಟಾರ್, ಮಜಾ ಟಾಕೀಸ್ ಗೆ ಫುಲ್ ಟಿಆರ್'ಪಿ
ಅಕುಲ್ ಬಾಲಾಜಿ ಮತ್ತು ಸೃಜನ್ ಲೋಕೇಶ್ ತಾವು ಕಿರುತೆರೆಯ ಸ್ಟಾರ್ ನಿರೂಪಕರು ಎಂಬುದನ್ನು ಮತ್ತೆ ನಿರೂಪಿಸಿದ್ದಾರೆ. ಈಟಿವಿಯಲ್ಲಿ ಫೆಬ್ರವರಿ ಮೊದಲವಾರ ಆರಂಭವಾದ ಇವರಿಬ್ಬರ ನಿರೂಪಣೆಯ ಡ್ಯಾನ್ಸಿಂಗ್ ಸ್ಟಾರ್ ಸೀಸನ್ ಟು ಮತ್ತು ಮಜಾ ಟಾಕೀಸ್ ಕಾರ್ಯಕ್ರಮಗಳು ಭರ್ಜರಿ ಓಪನಿಂಗ್ ತೆಗೆದುಕೊಂಡಿದೆ. ಟಿವಿ ಭಾಷೆಯಲ್ಲೇ ಹೇಳೋದಾದ್ರೆ ಇವುಗಳ ಮೊದಲ ವಾರದ ಟಿಆರ್ಪಿ ದಾಖಲೆ ಮಾಡಿದೆ. ಅಕುಲ್ ಬಾಲಾಜಿಯ ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮಕ್ಕೆ 7.6 ಅಂಕಗಳು ಬಂದಿದ್ದರೆ, ಸೃಜನ್ ಲೋಕೇಶ್‍ರ ಮಜಾ ಟಾಕೀಸ್‍ಗೆ 6 ಅಂಕಗಳು ಲಭಿಸಿವೆ.
ವಾರಾಂತ್ಯದ ಈ ಕಾರ್ಯಕ್ರಮಗಳ ಬಗ್ಗೆ ವೀಕ್ಷಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ಬಂದಿದೆಯಾದರೂ ಹೀಗೆ ಮಿಶ್ರಪ್ರತಿಕ್ರಿಯೆ ಸಿಗಲು ಕೂಡ ಅಪಾರ ಸಂಖ್ಯೆಯ ವೀಕ್ಷಣೆಯೇ ಕಾರಣ ಎಂಬುದೂ ಸತ್ಯ. ಶ್ವೇತಾ ಚೆಂಗಪ್ಪ ಮತ್ತು ಸೃಜನ್ ಲೋಕೇಶ ನಿರೂಪಣೆಯ ಮಜಾ ಟಾಕೀಸ್, ಕನ್ನಡದ ಮಟ್ಟಿಗೆ ಹೊಸ ರೀತಿಯ ಟಾಕ್ ಷೋ. ಹಿಂದಿಯ ಸೂಪರ್ ಹಿಟ್ ಷೋ ಕಾಮಿಡಿ ವಿಥ್ ಕಪಿಲ್ ನ ಛಾಯೆ ಇದೆ ಎನ್ನಲಾಗುತ್ತಿರುವ ಈ ಷೋನಲ್ಲಿ ಮಿಮಿಕ್ರೀ ದಯಾನಂದ್, ಸಂಗೀತ ನಿರ್ದೇಶಕ ವಿ. ಮನೋಹರ್, ಕಿರುತೆರೆ ನಟಿ ಉಷಾ ಭಂಡಾರಿ ಹಾಗೂ ನಿರೂಪಕಿ ಅಪರ್ಣ ಕೂಡ ಮಾತಿನಮನೆ ಕಟ್ಟುತ್ತಿದ್ದರೆ. ತೀರ್ಪುಗಾರರಾಗಿ ಕ್ರಿಕೆಟರ್ ನವಜೋತ್ ಸಿಂಗ್ ಸಿಧು ಅವರನ್ನೂ ಮೀರಿಸುವ ಮಟ್ಟಿಗೆ ನಗಬಲ್ಲ ಇಂದ್ರಜಿತ್ ಲಂಕೇಶ್ ಬಂದಿದ್ದಾರೆ.
ಶನಿವಾರ ಮತ್ತು ಭಾನುವಾರ ಸಂಜೆ 7ರಿಂದ 8ರ ತನಕ ಭರಪೂರ ಮನರಂಜನೆಯನ್ನು ನೀಡುವಲ್ಲಿ ಕಾರ್ಯಕ್ರಮ ಸಫಲವಾಗಿದೆ ಎನ್ನುತ್ತಿದ್ದಾರೆ ಹಾಸ್ಯಪ್ರಿಯರು. ಕೇವಲ ಕಾಮಿಡಿ ಮಾತ್ರವಲ್ಲದೆ ಬಿಡುಗಡೆಯ ಆಸುಪಾಸಿನಲ್ಲಿರುವ ಚಿತ್ರಗಳ ಸೆಲೆಬ್ರಿಟಿಗಳನ್ನೂ ಷೋಗೆ ಕರೆಸಿ ಅವರೊಂದಿಗೆ ಚಿನುಕುರಳಿ ಮಾತುಗಾರಿಕೆ ನಡೆಸುವುದು ಈ ಟಾಕೀಸಿನ ಸ್ಪೆಷಾಲಿಟಿ. ಇದರಲ್ಲಿ ಈಗಾಗಲೇ ಶರಣ್, ಪೂಜಾಗಾಂಧಿ ಬಂದು ಮೋಡಿ ಮಾಡಿದ್ದು, ಬರುವ ದಿನಗಳಲ್ಲಿ ಪಾರೂಲ್, ರಕ್ಷಿತ್ ಶೆಟ್ಟಿ, ಯೋಗರಾಜಭಟ್ ಮುಂತಾದವರು ಬರಲಿದ್ದಾರೆ ಎಂಬುದು ನೋಟ್ ಮಾಡಿಟ್ಟುಕೊಳ್ಳಬೇಕಾದ ಸುದ್ದಿ. ವಾರಾಂತ್ಯ 8 ಗಂಟೆಗೆ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಸ್ಟಾರ್2 ಈಗಾಗಲೇ ಮಜಾ ಟಾಕೀಸನ್ನೂ ಮೀರಿಸುವ ಮಟ್ಟಿಗಿನ ಜನಪ್ರಿಯತೆ ಪಡೆದಿರುವುದಕ್ಕೆ ಈ ಬಾರಿ ಅಕುಲ್ ಬಾಲಾಜಿಯ ಚಮತ್ಕಾರ ಮಾತ್ರ ಕಾರಣವಾಗಿಲ್ಲ. ಕ್ರೇಜಿ ಸ್ಟಾರ್ ರವಿಚಂದ್ರನ್ ಮೊಟ್ಟಮೊದಲ ಬಾರಿಗೆ ಕಿರುತೆರೆಯಲ್ಲಿ ತೀರ್ಪುಗಾರರ ಸೀಟಿನಲ್ಲಿ ಕೂತಿರುವುದೂ ಕಾರಣವಾಗಿದೆ.
ರವಿಚಂದ್ರನ್ ರೊಂದಿಗೆ ಬಹುಭಾಷಾ ನಟಿ ಕನ್ನಡತಿ ಪ್ರಿಯಾಮಣಿ ಇದ್ದಾರೆ. ಅಲ್ಲದೆ ನೃತ್ಯಪಟು ಮಯೂರಿ ಕೂಡ ತೀರ್ಪುಗಾರರಾಗಿ ಬಂದಿದ್ದಾರೆ. ಮಯೂರಿ ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಪತ್ನಿ ಎಂಬುದು ವೀಕ್ಷಕರಿಗೆ ಸ್ಪೆಷಲ್ ಮಾಹಿತಿ. ಈ ಬಾರಿಯ ಸ್ಪರ್ಧಿಗಳಲ್ಲೂ ಹಲವು ಖ್ಯಾತ ಮುಖಗಳಿದ್ದು, ನಟ ಅನಿರುದ್ಧ, ಆರ್ಜೆ ರ್ಯಾಪಿಡ್ ರಶ್ಮಿ, ವಿವಾದಿತ ನಟಿ ಮೈತ್ರೇಯಿ ಗೌಡ, ಹರ್ಷಿಕಾ ಪೂಣಚ್ಚ, ಮಾಸ್ಟರ್ ಆನಂದ್, ಗಾಯಕಿ ಸಿಂಚನ್ ದೀಕ್ಷಿತ್, ಅಗ್ನಿಸಾಕ್ಷಿಯ ವಿಜಯ್ ಸೂರ್ಯ ಹೀಗೆ ದೊಡ್ಡ ಪಡೆಯೇ ಇದೆ. ಈಗಾಗಲೇ ವೀಕ್ಷಕರನ್ನು ಸೆಳೆದುಕೊಂಡಿರುವ ಈ ಟ್ವಿನ್ ಷೋಗಳು ತನ್ನ ಟಿಆರ್‍ಪಿ ಕಾಯ್ದುಕೊಳ್ಳುತ್ತದೋ ಎಂಬುದು ಬರುವ ದಿನಗಳಲ್ಲಿ ಗೊತ್ತಾಗಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ