'ಮೊಗ್ಗಿನ ಮನಸು' ಹುಡುಗ ಈಗ 'ಗಜಪಡೆ'ಯ ನಾಯಕ

ಮೊಗ್ಗಿನ ಮನಸು ಸಿನಿಮಾದಲ್ಲಿ ರಾಧಿಕಾ ಪಂಡಿತ್‌ನ ಪೊಸೆಸ್ಸಿವ್ ಲವರ್ ಪಾತ್ರ ಮಾಡಿದ ಹುಡುಗನನ್ನು ಅದ್ಹೇಗೆ ಮರೆಯಲು ಸಾಧ್ಯ?
ಹರ್ಷ
ಹರ್ಷ

ಮೊಗ್ಗಿನ ಮನಸು' ಸಿನಿಮಾದಲ್ಲಿ ರಾಧಿಕಾ ಪಂಡಿತ್‌ನ ಪೊಸೆಸ್ಸಿವ್ ಲವರ್ ಪಾತ್ರ ಮಾಡಿದ ಹುಡುಗನನ್ನು ಅದ್ಹೇಗೆ ಮರೆಯಲು ಸಾಧ್ಯ? ಯಸ್ ನೀವು ಗೆಸ್ ಮಾಡಿದ್ದು ಸರಿ ಇದೆ. 'ರಾಜಾಹುಲಿ' ಚಿತ್ರದಲ್ಲಿ ಯಶ್ ನ ಗೆಳೆಯನಾಗಿ ಮೋನಿ ಪಾತ್ರ ನಿರ್ವಹಿಸಿದ, ಪವರ್ ಚಿತ್ರದಲ್ಲಿ ಪುನೀತ್ ಜತೆ ನಟಿಸಿದ ಹರ್ಷ ಇದೀಗ 'ಗಜಪಡೆ' ಚಿತ್ರದಲ್ಲಿ ನಾಯಕನಾಗಿ ನಮ್ಮ ಮುಂದೆ ಬರಲಿದ್ದಾರೆ. ನಮ್ಮ ನಿಮ್ಮಂತೆಯೇ ಇರುವ ಮಧ್ಯಮ ವರ್ಗದಿಂದ ಬಂದ ಹುಡುಗನೊಬ್ಬ ಧಾರವಾಹಿಗಳಲ್ಲಿ ಬಣ್ಣ ಹಚ್ಚಿ, ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿ ಸಿನಿಮಾದ ಹೀರೋ ಆಗಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಸಿನಿಮಾದಲ್ಲಿ ಅಭಿನಯಿಸಬೇಕೆಂದು ಹಟ ಹಿಡಿದು, ಸಿನಿಮಾರಂಗಕ್ಕೆ ಬಂದು ಸಾಧನೆಯ ಹಾದಿಯಲ್ಲಿರುವ ಹರ್ಷ ಅವರನ್ನು ಕನ್ನಡಪ್ರಭ ಡಾಟ್ ಕಾಂಗಾಗಿ ಸಂದರ್ಶನ ಮಾಡಿದಾಗ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಅಷ್ಟೇ ಆಪ್ತವಾಗಿ ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.



ಸಿನಿಮಾರಂಗಕ್ಕೆ ಪ್ರವೇಶ ಹೇಗಾಯ್ತು?


ನಾನು ಸಿನಿಮಾರಂಗಕ್ಕೆ ಪ್ರವೇಶ ಮಾಡಲು ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದೇನೆ. ನಾನು ಮಾಡದ ಕೆಲಸ ಇಲ್ಲ. ಬ್ಯಾಂಕ್, ಗುತ್ತಿಗೆ, ಬ್ಯುಸಿನೆಸ್ ನಿಂದ ಹಿಡಿದು ಎಲ್ಲ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿದ್ದೀನಿ. ಸಿನಿಮಾ ರಂಗಕ್ಕೆ ಪ್ರವೇಶಿಸುವುದು ನನ್ನ ಕನಸಾಗಿತ್ತು. ಅದನ್ನು ನನಸಾಗಿಸುವುದಕ್ಕಾಗಿ ಶ್ರಮ ವಹಿಸಿದ್ದೇನೆ. ಈಗ ಇಲ್ಲಿಗೆ ಬಂದು 8 ವರ್ಷ ಆಯ್ತು. ಮೊದಲನೇ ಸಿನಿಮಾ ಮೊಗ್ಗಿನ ಮನಸು. ಈ ಸಿನಿಮಾದಲ್ಲಿ ಅಭಿನಯಿಸುವ ಮುನ್ನ ನಾನು 'ನಿನ್ನೊಲುಮೆಯಿಂದಲೇ' ಎಂಬ ಧಾರವಾಹಿಯಲ್ಲಿ ನಟಿಸಿದ್ದೆ. ವಿನು ಬಳಂಜ ನಿರ್ದೇಶನದ ಧಾರವಾಹಿ ಅದು. ಆ ಧಾರವಾಹಿಯಲ್ಲಿ ಅಭಿನಯಿಸುವ ಮೂಲಕ ನಾನು ಸಾಕಷ್ಟು ಕಲಿತೆ. ಅದೇ ನನ್ನ ಮೊದಲ ಪಾಠ ಶಾಲೆ ಅನ್ನಬಹುದು. ವಿನು ಬಳಂಜ ಅವರು ನನ್ನ ಪ್ರತಿಯೊಂದು ಹೆಜ್ಜೆಯನ್ನು ತಿದ್ದಿ ತೀಡಿ ನನ್ನನ್ನು ಪ್ರೋತ್ಸಾಹಿಸಿದರು. ಅವರ ಗರಡಿಯಲ್ಲಿ ಪಳಗಿದ್ದು, ನನ್ನ ಸಿನಿಮಾ ಬದುಕಿಗೆ ಹೆಚ್ಚಿನ ನೆರವಾಯಿತು.

ಮೊದಲ ಸಿನಿಮಾದ ಅನುಭವ ಹೇಗಿತ್ತು?
ಮೊಗ್ಗಿನ ಮನಸು ಸಿನಿಮಾದಲ್ಲಿ ಎಲ್ಲರೂ ಹೊಸ ಪ್ರತಿಭೆಗಳೇ. ನಾನು, ಯಶ್, ರಾಧಿಕಾ ಪಂಡಿತ್, ಶುಭ ಪೂಂಜಾ ಎಲ್ಲರಿಗೂ ಸಮಾನವಾಗಿ ಪ್ರಾಧಾನ್ಯತೆ ನೀಡಿ ಉತ್ತಮ ಕಥೆ, ನಿರೂಪಣೆಯಿಂದ ಯಶಸ್ವಿಯಾದ ಸಿನಿಮಾ ಅದು. ಒಂದೊಳ್ಳೆಯ ಟೀಂ ಅಲ್ಲಿತ್ತು. ಅದೇ ಟೀಂ ಜತೆ ಕೆಲಸ ಮಾಡಬೇಕೆಂಬ ಆಸೆ ನನಗಿದೆ. ನಾನಾವಾಗ ಡಿಗ್ರಿ ಓದುತ್ತಿದ್ದೆ. ಅದರಲ್ಲಿನ ನಟನೆಯ ಬಗ್ಗೆ ಹೇಳುವುದಾದರೆ ನಾನು ಹೊಸಬ. ಅದರಲ್ಲಿ ನಟಿಸುವಾಗ ಅಷ್ಟೇನೂ ಅನುಭವ ಇರಲಿಲ್ಲ. ಆದರೆ ಆ ಟೈಮ್‌ಗೆ ಸಿನಿಮಾದಲ್ಲಿನ ಅಭಿನಯ ನನಗೆ ಖುಷಿಕೊಟ್ಟಿತು.  ಅನುಭವದ ಬಗ್ಗೆ ಹೇಳುವುದಾದರೆ ಧಾರವಾಹಿಯಲ್ಲಿ ನಟನೆ ಮಾಡಿ ಅನುಭವ ಸಿಕ್ಕಿದ ಮೇಲೆಯೇ ಸಿನಿಮಾಗೆ ಬರಬೇಕು. ಧಾರವಾಹಿಗಳಲ್ಲಾದರೆ ಪ್ರಯೋಗಗಳನ್ನು ಮಾಡಬಹುದು. ಹೊಸಬರು ಸಿನಿಮಾ ಬರುವುದಕ್ಕಿಂತ ಮುನ್ನ ಧಾರವಾಹಿಗಳಲ್ಲಿ ಬಣ್ಣ ಹಚ್ಚಿದರೆ ಒಳ್ಳೆಯ ಅನುಭವ ಸಿಗುತ್ತೆ. ಸಿನಿಮಾದಲ್ಲಿ ಅವಕಾಶ ಸಿಕ್ಕಿದರೂ, ನಾನು ಧಾರವಾಹಿಯಲ್ಲೇ ಚೆನ್ನಾಗಿ ಅನುಭವ ಸಿದ್ಧಿಸಿದ ಮೇಲೆಯೇ ಸಿನಿಮಾ ಪ್ರವೇಶ ಮಾಡಬೇಕಿತ್ತು ಎಂದು ಅನಿಸಿತ್ತು.



ಸಿನಿಮಾ ರಂಗಕ್ಕೆ ಪ್ರವೇಶಿಸಲು ಕಷ್ಟ ಪಟ್ಟಿದ್ದೀರಿ. ಇಲ್ಲಿ ಬಂದು ಪಡೆದುಕೊಂಡಿದ್ದೇನು? ಕಳೆದುಕೊಂಡಿದ್ದೇನು?

ಪಡೆದುಕೊಂಡಿದ್ದು ತಾಳ್ಮೆ. ಮೊದಲು ತುಂಬಾ ಕೋಪ ಮಾಡಿಕೊಂಡಿದ್ದವನು ತಾಳ್ಮೆಯಿಂದ ಇರಲು ಕಲಿತೆ. ಜನರೊಂದಿಗೆ ಬೆರೆಯುವುದನ್ನು ಕಲಿತೆ. ಬದುಕು ಎಲ್ಲವನ್ನೂ ಕಲಿಸುತ್ತದೆ ಅಂತಾರಲ್ಲಾ ಚಿತ್ರರಂಗ ನನಗೆ ಎಲ್ಲವನ್ನೂ ಕಲಿಸಿತು. ಒಬ್ಬ ಸಾಮಾನ್ಯ ಮನುಷ್ಯನಿಂದ ಸ್ಟಾರ್ ಆಗುವ ಹೊತ್ತು ಇದೆಯಲ್ಲಾ...ಅಲ್ಲಿ ಪಡೆಯುವ, ಕಳೆದುಕೊಳ್ಳುವ ಲೆಕ್ಕದ ಪಟ್ಟಿ ಅವಿತಿರುತ್ತದೆ. ನಾನು ಸಿನಿಮಾಗೆ ಬರುವುದು ನನ್ನ ಅಪ್ಪನಿಗೆ ಇಷ್ಟ ಇರಲಿಲ್ಲ. ನನ್ನ ನಿರ್ಧಾರದಿಂದ ಅಪ್ಪನ ಪ್ರೀತಿಯನ್ನು ಕಳೆದುಕೊಂಡೆ. ನನ್ನ ಅಪ್ಪ ವಿಜ್ಞಾನಿ, ತಮ್ಮ ಐಎಎಸ್ ಮಾಡುತ್ತಿದ್ದಾನೆ. ನಮ್ಮದು ವಿದ್ಯಾವಂತ ಕುಟುಂಬವಾದ ಕಾರಣ, ನಾನೂ ಅವರದ್ದೇ ಹಾದಿಯಲ್ಲಿ ಸಾಗಬೇಕೆಂದು ಅಪ್ಪ ಬಯಸಿದ್ದರು. ನಾನು ಸಿನಿಮಾದತ್ತ ಒಲವು ತೋರಿಸಿದಾಗ ಅವರಿಗೆ ಬೇಜಾರಾಗಿತ್ತು. ಜನರ ಪ್ರಶ್ನೆಗಳಿಗೆ ಅವರಲ್ಲಿ ಉತ್ತರವಿಲ್ಲದೇ ಇದ್ದಾಗ ನೊಂದುಕೊಂಡಿದ್ದರು. ನನ್ನ ಮಾವ ಜಗದೀಶ್ ನನ್ನಲ್ಲಿನ ಆಸೆಯನ್ನು ಅರ್ಥ ಮಾಡಿಕೊಂಡರು. ಪೋರ್ಟ್‌ಫೋಲಿಯೋ ಮಾಡೋಕೆ ಸಹಾಯ ಮಾಡಿದ್ದು ಕೂಡಾ ಅವರೇ. ಅಪ್ಪನಿಗೆ ಇಷ್ಟವಿಲ್ಲದೇ ಇದ್ದರೂ ಅಮ್ಮನ ಬೆಂಬಲ ನನಗಿತ್ತು. ಮಾವಂದಿರು ನನಗೆ ಸಪೋರ್ಟ್ ಮಾಡಿದರು. ನನಗಾಗ ಹದಿ ಹರೆಯ. ಸಿನಿಮಾಲೋಕಕ್ಕೆ ಪ್ರವೇಶಿಸಬೇಕೆಂಬ ಹಠ ನನ್ನ ವಯೋಸಹಜ ಆಸೆಗಳಿಗೆ ಕಡಿವಾಣ ಹಾಕಿತು. ನಟನೆಯನ್ನು ಕಲಿಯುವುದಕ್ಕೋಸ್ಕರ ಹೆಸರಘಟ್ಟದಲ್ಲಿರುವ ಆ್ಯಕ್ಟಿಂಗ್ ಕ್ಲಾಸಿಗೆ ಹೋಗುತ್ತಿದೆ. ಆವಾಗ ಓರಗೆಯ ಗೆಳೆಯರೊಂದಿಗೆ ಹೆಚ್ಚಿಗೆ ಸಮಯ ಕಳೆಯಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಹಿಂತಿರುಗಿ ನೋಡಿದಾಗ ಆದದ್ದೆಲ್ಲಾ ಒಳ್ಳೆಯದಕ್ಕೇ ಎಂದು ಅನಿಸುತ್ತಿದೆ. ಈಗ ಜನ ನನ್ನನ್ನು ಸ್ಟಾರ್ ಎಂದು ಗುರುತಿಸುತ್ತಾರೆ. ಈಗ ನಾನು ಎಲ್ಲರಂತೆ ಪಬ್ಲಿಕ್ ನಲ್ಲಿ ಇರಲು ಸಾಧ್ಯವಾಗುವುದಿಲ್ಲ. ಎಲ್ಲರೊಂದಿಗೆ ಬೆರೆಯುವ ಸ್ವಾತಂತ್ರ್ಯವನ್ನು ನಾನು ಕಳೆದುಕೊಂಡಿದ್ದೀನಿ. ಅದೇ ವೇಳೆ ಸಿನಿಮಾದಲ್ಲಿ ನನಗೆ ಒಳ್ಳೆಯ ಗೆಳೆಯರು, ಹಿತೈಷಿಗಳು ಸಿಕ್ಕಿದ್ದಾರೆ. ಪುನೀತ್, ಯಶ್, ಸುದೀಪ್ ಮೊದಲಾದವರ ಸ್ನೇಹ ಪಡೆದುಕೊಂಡದ್ದಕ್ಕೆ ಖುಷಿ ಪಡುತ್ತೇನೆ.



ಯಶ್ ಜತೆಗೆ ಮೊಗ್ಗಿನ ಮನಸು, ರಾಜಾಹುಲಿ...ಪುನೀತ್ ಜತೆಗೆ ಪವರ್...ಸ್ಟಾರ್ ಗಳ ಜತೆಗಿನ ಅನುಭವದ ಬಗ್ಗೆ...


ಯಶ್ ಅವರ ಕಾರ್ಯತತ್ಪರತೆಯನ್ನು ನಾನು ಮೆಚ್ಚುತ್ತೇನೆ. ಅವರ ಕಾರ್ಯ ವೈಖರಿಯನ್ನೂ ನಾನು ಫಾಲೋ ಮಾಡಿದ್ದೇನೆ. ಅಪ್ಪು (ಪುನೀತ್) ಬಗ್ಗೆ ಹೇಳುವುದಾದರೆ ಅವರು ತುಂಬಾ ಸಿಂಪಲ್ ಮತ್ತು ಸ್ನೇಹಜೀವಿ. ಅವರ ಜತೆ ಕೆಲಸ ಮಾಡುವಾಗ ನಾವು ಸೂಪರ್ ಸ್ಟಾರ್ ಜತೆ ಇದ್ದೀವಿ ಅಂತ ಅನಿಸಲ್ಲ. ತುಂಬಾ ಸರಳ ಹಾಗೂ ವಿನಯವಂತಿಕೆಯಿಂದ ಕೂಡಿದ ವ್ಯಕ್ತಿತ್ವ ಅವರದ್ದು. ಇನ್ನು ಸುದೀಪ್...ಅವರೇ ನನಗೆ ಪ್ರೇರಣೆ. ಅವರ ಹೇರ್ ಸ್ಟೈಲ್, ನಡೆ ನುಡಿ, ನಟನೆ, ಪರ್ಸನಾಲಿಟಿ ಎಲ್ಲವೂ ನನಗೆ ತುಂಬಾ ಇಷ್ಟ. ಸುದೀಪ್ ಬಗ್ಗೆ ಹೇಳುವಾಗ ಒಂದು ವಿಷ್ಯ ನಾನಿಲ್ಲಿ ಹೇಳಲೇ ಬೇಕು. 'ಈಗ' ಮೂವಿ ರಿಲೀಸ್ ಆದ ಸಮಯ ಅದು. ನಾನು ಸುದೀಪ್ ಅವರಿಗೆ ಫೋನ್ ಮಾಡಿ ನಿಮ್ಮೊಡನೆ ನನಗೆ ಅರ್ಜೆಂಟಾಗಿ ಮಾತನಾಡಬೇಕು ಅಂದೆ. ಅವರು ಔಟ್ ಆಫ್ ಸ್ಟೇಷನ್ ಇದ್ರು. ಆಗ ಅವರಿಗೆ ಮಾತನಾಡೋಕೆ ಸಾಧ್ಯವಾಗಲಿಲ್ಲ, ಆಮೇಲೆ ಮಾತಾಡ್ತೀನಿ ಅಂದ್ರು. ಅಂದು ರಾತ್ರಿ ಸುದೀಪ್ ಕಾಲ್ ಮಾಡಿದ್ರು. ನಾನು ಮಲಗಿದ್ದೆ. ಸುದೀಪ್ ತಮ್ಮ ಕೆಲಸ ಮುಗಿಸಿ ಮಲಗುವ ಮುನ್ನ ನನಗೆ ಕಾಲ್ ಮಾಡಿದ್ದರು. ನನಗೆ ಅಚ್ಚರಿ!. ಅವರ ಮೇಲೆ ಎಷ್ಟು ಅಭಿಮಾನ ಅಂದ್ರೆ ಅವರ ಅವರ ಕಾಲ್ ಬರುತ್ತಿರುವುದನ್ನು ಸ್ಕ್ರೀನ್ ಶಾಟ್ ತೆಗೆದು ಇಟ್ಟುಕೊಂಡಿದ್ದೀನಿ. ಅವರಂಥಾ ದೊಡ್ಡ ನಟ ನನಗೆ ಕಾಲ್ ಮಾಡಿದ್ದಾರೆ ಅಂದ್ರೆ ಖುಷಿಯಾಗದೇ ಇರುತ್ತಾ? ಆಮೇಲೆ ನಾವು ಸುಮಾರು ಅರ್ಧಗಂಟೆಯಷ್ಟು ಕಾಲ ಮಾತಾಡಿದೆವು. ನಾನು ನಾಳೆ ಬೆಂಗಳೂರು ಬರ್ತಿದ್ದೀನಿ ಅಂದ್ರು. ಆವಾಗ ನಾನು ನಿಮ್ಮನ್ನು ನಾನೇ ಏರ್ ಪೋರ್ಟ್‌ಗೆ ಬಂದು ಪಿಕ್ ಮಾಡಲಾ? ಎಂದೆ. ಹೂಂ ಅಂದ್ರು. ಮರುದಿನ ಅವರನ್ನು ಏರ್‌ಪೋರ್ಟ್ ನಿಂದ ಪಿಕ್ ಮಾಡಿ ಮನೆಗೆ ತಲುಪಿಸಿದೆ. ಅಂದು ಅವರ ಜತೆಗೆ ಅವರ ಮನೆಯಲ್ಲಿ ಊಟ ಮಾಡಿದೆ. ಹೀಗೆ ಮಾತಾಡುತ್ತಿರುವಾಗ...ನಾನು ಸಿನಿಮಾದಲ್ಲಿ ನಟನೆ ಮಾಡಿದ ನಂತರ ಅವಕಾಶ ಸಿಗದೆ ಮತ್ತೆ ಧಾರವಾಹಿಯತ್ತ ಹೋದೆ. ಹೀಗಾದರೆ ಹೇಗೆ? ಎಂಬ ಪ್ರಶ್ನೆಯನ್ನು ಸಂಕೋಚದಿಂದಲೇ ಅವರ ಮುಂದಿಟ್ಟೆ. ಅದಕ್ಕೆ ಸುದೀಪ್ ಹೇಳಿದ್ದೇನು ಗೊತ್ತಾ? ಸಿನಿಮಾ ಮತ್ತು ಧಾರವಾಹಿ ಇರುವುದು ಜನರನ್ನು ರಂಜಿಸುವುದಕ್ಕೋಸ್ಕರ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ನಾನು ಹೀಗೆ ಸಿನಿಮಾದಲ್ಲಿ ನಟಿಸಿ ಆಮೇಲೆ ಧಾರವಾಹಿ ಮಾಡಿದ್ದೆ. ಯಾವುದೇ ಆದರೂ ಅದನ್ನು ಶ್ರದ್ಧೆ ಭಕ್ತಿಯಿಂದ ಮಾಡು. ನೀನು ಗೆದ್ದೇ ಗೆಲ್ತಿ ಅಂದ್ರು. ಸಿನಿಮಾದಿಂದ ಧಾರವಾಹಿಗೆ ಹೋಗಿ ಮತ್ತೆ ಸಿನಿಮಾಕ್ಕೆ ವಾಪಾಸಾದೆ. ಜನ ಸ್ವೀಕರಿಸಿದರು...ಅದೇ ದೊಡ್ಡ ಖುಷಿ. ಅಪ್ಪು ಮತ್ತು ಸುದೀಪ್ ಅವರೊಂದಿಗೆ ಆಪ್ತನಾಗಿ ಇರಬೇಕು ಎಂದು ಕನಸು ಕಂಡ ಹುಡುಗ ನಾನು. ಈಗ ಅವರೆಲ್ಲರೂ ನನ್ನ ಗೆಳೆಯರು. 2011ರಲ್ಲಿ ಶಬ್ದಮಣಿ ಎಂಬ ಚಿತ್ರದಲ್ಲಿ ನಾನು ಗಿರೀಶ್ ಕಾರ್ನಾಡ್ ಮತ್ತು ಶ್ರುತಿ ದಂಪತಿಗಳ ಮಗನಾಗಿ ನಟಿಸಿದ್ದೆ. ಹೀಗೆ ಎಲ್ಲ ನಟರೊಂದಿಗಿನ ಸ್ನೇಹ ಸಂಬಂಧ ನನಗೆ ಖುಷಿ ಕೊಟ್ಟಿದೆ.



ಗಜಪಡೆ ಸಿನಿಮಾ ಬಗ್ಗೆ ಹೇಳುವುದಾದರೆ...


ಗಜಪಡೆ ಸಿನಿಮಾ ನನ್ನ ಕನಸಿನ ಕೂಸು. ನಾನು ಚಿತ್ರರಂಗಕ್ಕೆ ಯಾಕೆ ಬಂದಿದ್ದೀನಿ ಎಂಬುದಕ್ಕೆ ಉತ್ತರವೇ ಗಜಪಡೆ. ನಾನು ಡ್ಯಾನ್ಸರ್. ಆದರೆ ನನಗೆ ಅದಕ್ಕೆ ತಕ್ಕುದಾದ ವೇದಿಕೆ ಸಿಗಲಿಲ್ಲ. ಇಲ್ಲಿ ನನಗೆ ಆ ಅವಕಾಶ ಸಿಕ್ಕಿದೆ. ಒಟ್ಟಿನಲ್ಲಿ ಎಲ್ಲ ಅಂಶಗಳಿಂದ ಕೂಡಿದ ವಿಶೇಷವಾದ ಸಿನಿಮಾ ಇದು.

ಗಾಡ್ ಫಾದರ್ ಇಲ್ಲದೇ ಬಂದವರು ನೀವು. ಆ ಕಷ್ಟದ ದಿನಗಳು ಮುಗಿಯಿತು ಎಂದು ಎದ್ದು ನಿಲ್ಲುವ ಹೊತ್ತಿಗೆ ನಿಮಗೇನು ಅನಿಸುತ್ತಿದೆ?


ಸಾಮಾನ್ಯ ಹುಡುಗನಾಗಿದ್ದ ನಾನು ಈ ಮಟ್ಟಕ್ಕೆ ಬೆಳೆದಿದ್ದೇನಲ್ವಾ ಎಂಬ ಖುಷಿ ನನ್ನದು. ಈ ಕಷ್ಟದ ದಿನಗಳಲ್ಲಿ ನನ್ನ ಬೆಂಬಲಕ್ಕೆ ಯಾರೂ ಇರಲಿಲ್ಲವಲ್ಲಾ ಎಂಬ ಬೇಸರವಿತ್ತು. ಆದರೀಗ ಎಲ್ಲರ ಬೆಂಬಲ ನನಗೆ ಸಿಗುತ್ತಿದೆ. ಹಳೆಯ ನೋವುಗಳು ನನ್ನನ್ನು ಪ್ರಬುದ್ಧನನ್ನಾಗಿ ಮಾಡಿಸಿದೆ.

ಮುಂದಿನ ಸಿನಿಮಾ?
ಏಳೆಂಟು ಕಥೆ ಕೇಳಿದ್ದೀನಿ. ಸದ್ಯ ಯಾವುದರ ಬಗ್ಗೆಯೂ ತೀರ್ಮಾನ ಕೈಗೊಂಡಿಲ್ಲ.

ಸಹನಟನಿಂದ ಬಡ್ತಿ ಪಡೆದು ನಾಯಕ ನಟನಾದ ಹರ್ಷ ಬದಲಾಗಿದ್ದಾರಾ?

ಸಿನಿಮಾದಿಂದ ಸಿನಿಮಾಗೆ ನನ್ನ ಲುಕ್ ಬದಲಾಗಿದೆ (ನಗು). ಮೊಗ್ಗಿನ ಮನಸು ಚಿತ್ರದಲ್ಲಿನ ಟೀನೇಜ್ ಲವರ್. ಅಲ್ಲಿಂದ ರಾಜಾಹುಲಿಯಲ್ಲಿನ Antihero. ಪ್ರಸ್ತುತ ಸಿನಿಮಾದಲ್ಲಿ ಯಶ್ ನಿಂದ ದೊಡ್ಡವನಾಗಿ ಕಾಣಿಸಿಕೊಳ್ಳಲು ನಿರ್ದೇಶಕ ಗುರುದೇಶ್ ಪಾಂಡೆ ನನಗೆ ಮೀಸೆ ಬಿಡಬೇಕೆಂದರು. ಆ ಮೀಸೆಯಿರುವ ಲುಕ್ ಇಷ್ಟ ಆಯ್ತು. ಪವರ್ ನಲ್ಲಿ  ಆ ಗೆಟಪ್ ಬರಲು ವರ್ಕೌಟ್ ಮಾಡಿದ್ದೆ. ಇದೀಗ ಗಜಪಡೆಯಲ್ಲಿ ನಾನು ಪಕ್ಕಾ ಗಲ್ಲಿ ಹುಡುಗ.



ಯಶಸ್ಸಿನ ಮೆಟ್ಟಲೇರುತ್ತಿದ್ದೀರಿ. ಹಿಂದೆ ತಿರುಗಿ ನೋಡಿದಾಗ...

ಖುಷಿಯಾಗುತ್ತದೆ. ಜನ ಆಟೋಗ್ರಾಫ್ ಕೇಳಲು ಬಂದಾಗ ಯಾರನ್ನೂ ನಾನು ದೂರ ತಳ್ಳುವುದಿಲ್ಲ, ತಳ್ಳಲಾರೆ. ನಾನು ಹಲವಾರು ಕಲಾವಿದರನ್ನು ನೋಡಿದ್ದೇನೆ. ಅವರು ಜನರ ಭಾವನೆಗಳಿಗೆ ಸ್ಪಂದಿಸಲ್ಲ. ಅಂಥವರ ಪಟ್ಟಿಯಲ್ಲಿ ನಾನು ಸೇರಬಾರದು. ಇಂಥಾ ಬದುಕಿಗೋಸ್ಕರವೇ ಅಲ್ವಾ ನಾನಿಷ್ಟು ಕಷ್ಟಪಟ್ಟಿದ್ದು. ಆ ಬದುಕು ಸಿಕ್ಕಾಗ ಅಲ್ಲಿ ಅಹಂಕಾರವಿರಬಾರದು. ನಾನು ಕರಾಟೆ ಬ್ಲಾಕ್ ಬೆಲ್ಟ್. ನನಗೆ ಕುಣಿಯುವುದು ಅಂದ್ರೆ ತುಂಬಾ ಇಷ್ಟ. ಚಿಕ್ಕವನಿರುವಾಗ ಮನೆ ಪಕ್ಕ ಗಲ್ಲಿಗಳಲ್ಲಿ ಗಣೇಶ ಕೂರಿಸಿದ್ರೆ ಅಲ್ಲಿ ಹೋಗಿ ಕುಣಿದು ಬರುತ್ತಿದ್ದೆ. ಹಲವಾರು ಡ್ಯಾನ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. ಎಲ್ಲವನ್ನೂ ಮೀರಿ ನಿಂತು ಇವತ್ತು ನಾನು ಖುಷಿಯಾಗಿದ್ದೇನೆ. ಇನ್ನು ಮುಂದೆ ಎಷ್ಟೇ ಕಷ್ಟ ಬಂದರೂ ನಾನು ಎದುರಿಸುತ್ತೇನೆ ಎಂಬ ಆತ್ಮವಿಶ್ವಾಸ ನನ್ನಲ್ಲಿದೆ. ಒಂದು ಕಾಲದಲ್ಲಿ ಮಾಡಲು ಕೆಲಸವಿಲ್ಲದೆ ಸುಮ್ಮನೆ ಪಾರ್ಕ್‌ನಲ್ಲಿ ಮಲಗಿದ್ದೀನಿ. ಸಿನಿಮಾ ಬಿಟ್ಟರೆ ಬೇರೆ ಕೆಲಸ ಮಾಡುವ ಆಸಕ್ತಿ ನನ್ನಲ್ಲಿರಲಿಲ್ಲ. ನಾನು ಕಷ್ಟ ಪಟ್ಟಿದ್ದಕ್ಕೆ ಫಲ ಸಿಕ್ಕೇ ಸಿಗುತ್ತೆ ಎಂಬ ಭರವಸೆ ಇತ್ತು, ಅದು ಸಿಕ್ಕಿದೆ. ನಾನು ಸಿನಿಮಾ ನಟನಾಗುವ ಕನಸು ಹೊತ್ತು ಚಿತ್ರರಂಗ ಪ್ರವೇಶಿಸಿದಾಗ ಇವನೇನು ಮಾಡುತ್ತಾನೆ? ಎಂದು ಹಗುರವಾಗಿ ಮಾತನಾಡಿದ ಜನರಿದ್ದಾರೆ. ಅವರಿಗೆಲ್ಲರಿಗೂ ನಾನು ಈ ಮೂಲಕ ಉತ್ತರ ಕೊಟ್ಟಿದ್ದೀನಿ. ನಾನು ಹೀರೋ ಆಗಿರುವ ಸಿನಿಮಾ 100 ದಿನ ಪ್ರದರ್ಶನ ಕಾಣಬೇಕು ಎಂಬುದು ನನ್ನ ಜೀವನದ ದೊಡ್ಡ ಕನಸು.

ಹರ್ಷ ಅವರ ಬಹುನಿರೀಕ್ಷಿತ ಚಿತ್ರ ಗಜಪಡೆಗೆ ಕನ್ನಡಪ್ರಭ ಡಾಟ್ ಕಾಂ ಶುಭ ಹಾರೈಸುತ್ತಿದೆ. ನೀವೂ ಹರ್ಷ ಅವರಿಗೆ ಆಲ್ ದ ಬೆಸ್ಟ್ ಹೇಳಿ ಬಿಡಿ.

ಸಂದರ್ಶನ: ರಶ್ಮಿ ಕಾಸರಗೋಡು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com