ನಾನು ವಿನಯ್...

ಸಿಂಗನೆಲ್ಲೂರು ಪುಟ್ಟಸ್ವಾಮಿ ಕುಟುಂಬದ ನಾಲ್ಕನೆ ತಲೆಮಾರಿನ ಮೊದಲ ಸಿನಿಮಾ ಪ್ರೇಕ್ಷಕರೆದರು ಬರುತ್ತಿದೆ. ನಟ ವಿನಯ್ ರಾಜ್‌ಕುಮಾರ್ ಅವರ ಪ್ರಥಮ..
ವಿನಯ್ ರಾಜ್ಕುಮಾರ್ ಹಾಗೂ ಅಪೂರ್ವ ಅಭಿನಯದ ಸಿದ್ಧಾರ್ಥ ಚಿತ್ರದ ಸ್ಟಿಲ್ಸ್
ವಿನಯ್ ರಾಜ್ಕುಮಾರ್ ಹಾಗೂ ಅಪೂರ್ವ ಅಭಿನಯದ ಸಿದ್ಧಾರ್ಥ ಚಿತ್ರದ ಸ್ಟಿಲ್ಸ್

ಸಿಂಗನೆಲ್ಲೂರು ಪುಟ್ಟಸ್ವಾಮಿ ಕುಟುಂಬದ ನಾಲ್ಕನೆ ತಲೆಮಾರಿನ ಮೊದಲ ಸಿನಿಮಾ ಪ್ರೇಕ್ಷಕರೆದರು ಬರುತ್ತಿದೆ. ನಟ ವಿನಯ್ ರಾಜ್‌ಕುಮಾರ್ ಅವರ ಪ್ರಥಮ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ನಿರ್ದೇಶಕ ಪ್ರಕಾಶ್. 'ಮಿಲನ'ದಂತಹ ಅಪ್ಪಟ ಫ್ಯಾಮಿಲಿ ಚಿತ್ರ ಪ್ರಕಾಶ್, ಈಗ ನಟ ವಿನಯ್ ರಾಜ್‌ಕುಮಾರ್ ಅವರಿಗೆ ಯೂಥ್‌ಫುಲ್ ಎನಿಸುವ 'ಸಿದ್ಧಾರ್ಥ' ಚಿತ್ರವನ್ನು ನಿರ್ದೇಶಿಸಿದ್ದಾರೆ.

ಯುವ ಜನಾಂಗವನ್ನು ಮೈಂಡ್‌ನಲ್ಲಿಟ್ಟುಕೊಂಡು ಮಾಡಿರುವ ಚಿತ್ರ ಇದಾಗಿದ್ದು, ಪಕ್ಕಾ ಮನರಂಜನೆ ಗ್ಯಾರಂಟಿ ಎನ್ನುವ ಭರವಸೆ ಚಿತ್ರ ತಂಡದ್ದು. ಮುತ್ತಜ್ಜ ಸಿಂಗನೆಲ್ಲೂರು ಪುಟ್ಟಸ್ವಾಮಿ, ತಾತಾ ಡಾ.ರಾಜ್‌ಕುಮಾರ್, ಅಪ್ಪ ರಾಘೇವಂದ್ರ ರಾಜ್‌ಕುಮಾರ್... ಹೀಗೆ ಮೂರು ತಲೆಮಾರಿನ ಭಾರ ಹೊತ್ತ ನಟ ವಿನಯ್ ರಾಜ್‌ಕುಮಾರ್ ಅವರ ಮೊದಲ ಸಿನಿಮಾ ಸಿದ್ಧಾರ್ಥ ಚಿತ್ರದ ಬಗ್ಗೆ ಸಹಜವಾಗಿ ನಿರೀಕ್ಷೆ ಇದೆ.

ಅಪೂರ್ವ ಸಂಗಮದಂತಿರುವ ರಾಜ್ ಕುಟುಂಬದ 'ಸಿದ್ಧಾರ್ಥ' ಸಿನಿಮಾದ ಹಾಡುಗಳು ಗೆದ್ದಿವೆಯಂತೆ. ಇದೊಂದು ಮ್ಯೂಜಿಕಲ್ ಚಿತ್ರದಂತೆ ಕಂಡರೂ ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲ ಅಂಶಗಳು ಚಿತ್ರದಲ್ಲಿವೆ. ಕೆ.ಕೃಷ್ಣಕುಮಾರ್ ಕ್ಯಾಮೆರಾ ಹಿಡಿದಿದ್ದು, ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿರುವ ಈ ಚಿತ್ರಕ್ಕೆ ಜಯಂತ್ ಕಾಯ್ಕಿಣಿ ಅವರೇ ಎಲ್ಲ ಹಾಡುಗಳನ್ನು ಬರೆದಿದ್ದಾರೆ. ನಯನಾ, ಜೀವನ್, ಅಲೋಕ್, ವಿನೋದ್ ನಾಯಕನ ಗೆಳೆಯರ ಬಳಗದ ಪಾತ್ರಧಾರಿಗಳು. ಪ್ರೇಕ್ಷಕರೆದುರು ತಮ್ಮ ಸಿನಿಮಾ ಬಿಟ್ಟು, ನೋಡುಗರ ಪ್ರತಿಕ್ರಿಯೆಗಳಿಗಾಗಿ ಎದುರು ನೋಡುತ್ತಿರುವ ಪ್ರಕಾಶ್ ಮತ್ತು ವಿನಯ್ ತಮ್ಮ ಸಿನಿಮಾ ಬಗ್ಗೆ ಹೇಳಿಕೊಂಡಿದ್ದೇನು?

ನಿರ್ದೇಶಕ ಪ್ರಕಾಶ್
ನಿಮಗೆ ಸಿದ್ಧಾರ್ಥ ಸಿನಿಮಾ ಕೈಗೆತ್ತಿಕೊಂಡಾಗ ಕಾಡಿದ ಭಯವೇನು?
ಚಿತ್ರ ಶುರು ಮಾಡಿದಾಗ ಯಾವ ಭಯ, ಒತ್ತಡಗಳು ಇರಲಿಲ್ಲ. ಆದರೆ, ಬಿಡುಗಡೆಗೆ ಹತ್ತಿರವಾಗುತ್ತಿದ್ದಾಗ ಭಯ ಶುರುವಾಗಿದೆ. ಪ್ರೇಕ್ಷಕರು ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆಂಬ ಸಹಜವಾದ ಕಾತುರ, ಭಯ ಇದೆ.

ಹಾಗಾದರೆ ರಾಜ್ ಕುಟುಂಬದ ಕುಡಿಯ ಸಿನಿಮಾ ಎನ್ನುವ ಭಾವನೆಯಲ್ಲಿ ಈ ಚಿತ್ರ ಮಾಡಲಿಲ್ಲವೇ?
ಇಲ್ಲ. ಯಾಕೆಂದರೆ ನಾನು ಮೊದಲಿನಿಂದಲೂ ಈ ಕುಟುಂಬದ ಜತೆಗೆ ಇದ್ದೇನೆ. ಈ ಕುಟುಂಬ ಕಥೆಗೆ ಮಹತ್ವ ಕೊಟ್ಟಿದೆ. ಕಥೆಗೆ ಅನುಗುಣವಾಗಿ ಅವರು ತಯಾರಿ ನಡೆಸಿಕೊಳ್ಳುತ್ತಾರೆ ಹೊರತು, ತಮ್ಮ ಇಮೇಜ್‌ಗಾಗಿ ಕಥೆ ಮಾಡಿಕೊಂಡವರಲ್ಲ. ನಾನು ಕೂಡ ಒಬ್ಬ ಹೊಸ ನಟನ ಸಿನಿಮಾ ಅಂತ ಮಾಡಿದ್ದೇನೆ. ನಾನೂ ಕೂಡ ಯಾವತ್ತು ಹೀರೋಗಾಗಿ ಕಥೆ ಮಾಡಿದವನಲ್ಲ.

ಏನೇ ಹೇಳಿದರೂ ರಾಜ್ ಮೊಮ್ಮಗನ ಚಿತ್ರವೆಂದೇ ನೋಡುತ್ತಾರೆ. ಹೀಗಾಗಿ ನೋಡುಗರ ನಿರೀಕ್ಷೆಗಳಿಗೆ ಈ ಚಿತ್ರ ಉತ್ತರವಾಗಲಿದೆಯೇ?
ಖಂಡಿತ ಎಲ್ಲರಿಗೂ ಈ ಸಿನಿಮಾ ಇಷ್ಟವಾಗುತ್ತದೆ. ಒಂದು ಫೀಲ್ ಗುಡ್ ಚಿತ್ರ. ಹೊಸ ನಟ, ಹೊಸ ಕಥೆ, ಹೊಸ ರೀತಿಯ ಮೇಕಿಂಗ್. ಈ ಎಲ್ಲ ಕಾರಣಗಳಿಗಾಗಿ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಇನ್ನೂ ವಿನಯ್ ಈ ಸಿನಿಮಾದಲ್ಲಿ ಹೇಗೆ ಅಭಿನಯಿಸಿದ್ದಾರೆಂಬ ಕುತೂಹಲಕ್ಕೆ ಚಿತ್ರ ನೋಡಿ.

ಒಮ್ಮ ನಿರ್ದೇಶಕನಾಗಿ ವಿನಯ್ ಅವರಲ್ಲಿ ನೀವು ಕಂಡ ಒಳ್ಳೆಯ ಗುಣಗಳೇನು? ವಿನಯ್ ಯಾವ ವಿಭಾಗದಲ್ಲಿ ಸುಲಭವಾಗಿ ನಟಿಸಿದ್ದಾರೆ?
ತುಂಬಾ ಸರಳ. ತಾನು ರಾಜ್‌ಕುಮಾರ್ ಮೊಮ್ಮಗ ಎಂದು ವರ್ತಿಸದೆ ಹೊಸ ನಟ ಎಂದುಕೊಂಡು ನಿರ್ದೇಶಕರು ಹೇಳಿದಂತೆ ಕೇಳುವ ಗುಣ. ಜತೆಗೆ ಸೀನ್ ವಿವರಿಸಿದಾಕ್ಷಣ ಅರ್ಥ ಮಾಡಿಕೊಂಡು ಅದನ್ನು ಮಾಡಿ ತೋರಿಸಿ ಆ ಮೇಲೆ ಕ್ಯಾಮೆರಾ ಮುಂದೆ ಬರುವ ತಾಳ್ಮೆ ಇದೆ. ವಿನಯ್, ಒಬ್ಬ ನಟನಾಗಿ ಬೆಳೆಯುವುದಕ್ಕೆ ಬೇಕಾದ ಲಕ್ಷಣಗಳನ್ನು ನಾನು ಮೊದಲ ಚಿತ್ರದಲ್ಲೇ ನೋಡಿದ್ದೇನೆ. ಇನ್ನೂ ಯಾವ ವಿಭಾಗದಲ್ಲಿ ಸುಲಭವಾಗಿ ನಟಿಸುತ್ತಾರೆ ಎಂಬುದನ್ನು ಒಂದೇ ಚಿತ್ರಕ್ಕೆ ಹೇಳಲಾಗದು. ಅದನ್ನು ಪ್ರೇಕ್ಷಕರು ಗುರುತಿಸಬೇಕು.

ಸಿದ್ಧಾರ್ಥ ಚಿತ್ರದ ಒಂದು ಸಾಲಿನ ಕಥೆ ಏನು? ಹಾಗೆ ಈ ಚಿತ್ರದ ಹೈಲೈಟ್ಸ್‌ಗಳೇನು?
ಈ ತಲೆಮಾರಿನ ಕಥೆ. ಕಾಲೇಜ್ ಲವ್ ಸ್ಟೋರಿ. ಯಾರೇ ಈ ಸಿನಿಮಾ ನೋಡಿದಾಗ ತಮ್ಮನ್ನು ಚಿತ್ರದ ಪಾತ್ರಧಾರಿಗಳ ಜತೆ ಹೋಲಿಕೆ ಮಾಡಿಕೊಳ್ಳಬಹುದು. ಕಥೆ, ಸಂಗೀತ ಮತ್ತು ವಿನಯ್ ರಾಜ್‌ಕುಮಾರ್ ಈ ಚಿತ್ರದ ಹೈಲೈಟ್ಸ್.

ವಿನಯ್ ರಾಜ್‌ಕುಮಾರ್
ನಟನೆಯ ಮೊದಲ ಅನುಭವ ಹೇಗಿದೆ? ಮೊದಲ ಚಿತ್ರಕ್ಕೆ ಅಪ್ಪ ಮತ್ತು ದೊಡ್ಡಪ್ಪಂದಿರು ಕೊಟ್ಟ ಟಿಪ್ಸ್‌ಗಳೇನು?
ತುಂಬಾ ಚೆನ್ನಾಗಿತ್ತು. ನಿರ್ದೇಶಕ ಪ್ರಕಾಶ್ ಅವರು ನಮ್ಮ ಕುಟುಂಬದವರು. ಮೊದಲಿನಿಂದಲೂ ಅವರನ್ನು ನೋಡುತ್ತಿದ್ದೆ. ಹೀಗಾಗಿ ಯಾವುದೇ ಭಯ ಇಲ್ಲದೆ ಅವರ ಸಿನಿಮಾದಲ್ಲಿ ನಟಿಸಿದ್ದೇನೆ. ಜತೆಗೆ ನಿರ್ದೇಖ ಜಟ್ಟ ಗಿರಿರಾಜ್ ಅವರ ಸಾರಥ್ಯದಲ್ಲಿ ನಮ್ಮ ಮನೆಯಲ್ಲೇ ತರಬೇತಿ ಶಿಬಿರ ಮಾಡಿದ್ವಿ. ಪೂರ್ವ ತಯಾರಿ ಮಾಡಿಕೊಂಡು ಹೋಗಿದ್ದರಿಂದ ನಟನೆ ಕಷ್ಟ ಆಗಲಿಲ್ಲ. ರಾಜ್ ಕುಟುಂಬದವನೆಂಬ ಭಾವನೆ ಬೇಡ. ನೀನೊಬ್ಬ ಹೊಸ ನಟ. ನಿನ್ನ ಶ್ರಮ ಮತ್ತು ಕೆಲಸದ ಮೇಲೆ ಶ್ರದ್ಧೆ ಇರಲಿ ಎಂದು ಅಪ್ಪ ಮೊದಲ ದಿನವೇ ಹೇಳಿದ್ದರು.

ಸಿದ್ಧಾರ್ಥ ಚಿತ್ರವನ್ನು ರಾಜ್ ಮನೆತನದ ಸಿನಿಮಾ ಅಂತ ನೋಡಬೇಕೆ?
ನಮ್ಮ ಮನೆತನದ ಚಿತ್ರವಿದು ಎನ್ನುವ ನಿರೀಕ್ಷೆ ಸಹಜವಾಗಿ ಇರುತ್ತದೆ. ಆದರೆ, ಸಿದ್ಧಾರ್ಥ ಸಿನಿಮಾ ಒಬ್ಬ ಹೊಸ ನಟನ ಚಿತ್ರ. ನಾನು ವಿನಯ್ ಅಷ್ಟೇ. ಹೊಸ ಹುಡುಗ ಒಳ್ಳೆಯ ಸಿನಿಮಾ ಮಾಡಿರುತ್ತೇನೆಂಬ ನಂಬಿಕೆಯಲ್ಲಿ ಈ ಚಿತ್ರ ನೋಡಿ.

ಹೊಸ ನಟನ ಸಿನಿಮಾ ಎಂದುಕೊಂಡರೂ ಮನೆತನದ ಇಮೇಜ್ ಇರುತ್ತಲ್ಲ. ಅದನ್ನು ಹೇಗೆ ನಿಭಾಯಿಸಿದ್ದೀರಿ?
ನೀನು ಮನೆಯ ಇಮೇಜ್ ತಲೆಯಲ್ಲಿಟ್ಟುಕೊಳ್ಳಬೇಡ. ನಿನ್ನ ಪ್ರತಿಭೆಗೆ ಮಾತ್ರ ಇಲ್ಲಿ ಬೆಲೆ ಇರುತ್ತದೆ. ಎಂದು ಅಪ್ಪ ಆಗಾಗ ಹೇಳುತ್ತಿದ್ದರಿಂದ ನನಗೆ ಇಮೇಜ್‌ನ ಭಾರ ಅಷ್ಟಾಗಿ ಕಾಡಲಿಲ್ಲ.

ಸಿದ್ಧಾರ್ಥ ಚಿತ್ರದಿಂದ ಕಲಿತದ್ದು ಏನು?
ಒಮ್ಮೆಗೆ ಏನನ್ನೂ ಕಲಿಯಕ್ಕಾಗಲ್ಲ. ಕಲಿಕೆ ನಿರಂತರ ಎನ್ನುವ ಸತ್ಯ ಈ ಚಿತ್ರದಿಂದ ಗೊತ್ತಾಯಿತು. ಪ್ರತಿ ಚಿತ್ರವೂ ಒಂದೊಂದು ಅನುಭವ. ಇನ್ನು ನನಗೆ ಆ್ಯಕ್ಷನ್ ಅಂದರೆ ತುಂಬಾ ಇಷ್ಟ. ಸಿದ್ಧಾರ್ಥ ಸಿನಿಮಾ ಲವ್ ಸ್ಟೋರಿ ಆಗಿದ್ದರಿಂದ ಅದಕ್ಕೆ ತಯಾರಿ ನಡೆಸಿಕೊಂಡೆ ಅಷ್ಟೆ. ಮುಂದೆ ಬೇರೆ ರೀತಿಯ ಸಿನಿಮಾ ಬಂದರೆ ಅದಕ್ಕೆ ಬೇರೆಯದೇ ತಯಾರಿ ಬೇಕು.

ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳಿ? ಯಾಕೆ ನಿಮಗೆ ಈ ಕಥೆ ಇಷ್ಟವಾಯಿತು?
ಈಗಿನ ಯಾವ ಜನಾಂಗವನ್ನು ಪ್ರತಿನಿಧಿಸುವ ಪಾತ್ರ. ನಾನು ಇಲ್ಲಿ ಕಾಲೇಜು ಹುಡುಗ. ಯೂಥ್‌ಫುಲ್ ಕಥೆ. ನಾನೂ ಕೂಡ ಕಾಲೇಜು ಮುಗಿಸಿದ್ದರಿಂದ ವೈಯಕ್ತಿಕವಾಗಿ ನನಗೆ ಕಥೆ ರಿಲೇಟ್ ಆಗುತ್ತಿತ್ತು. ಈ ಕಾರಣಕ್ಕೆ ಇಷ್ಟವಾಯಿತು.

-ಆರ್. ಕೇಶವಮೂರ್ತಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com