
ನವದೆಹಲಿ: ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಬಾಹುಬಲಿ ಚಿತ್ರ ಅಮಿರ್ ಖಾನ್ ಅವರ 'ಧೂಮ್ 3' ಹಾಗೂ ಶಾರುಖ್ ಖಾನ್ ಅವರ 'ಹ್ಯಾಪಿ ನ್ಯೂಇಯರ್' ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕುವ ಮೂಲಕ ಅತಿ ವೇಗದಲ್ಲಿ 100 ಕೋಟಿ ಕ್ಲಬ್ ಸೇರಿದೆ.
ತೆಲುಗು ಹಾಗೂ ತಮಿಳಿನಲ್ಲಿ ನಿರ್ಮಾಣವಾಗಿರುವ ಬಾಹುಬಲಿ, ಹಿಂದಿ ಮತ್ತು ಮಲೆಯಾಳಂಗೆ ಡಬ್ ಆಗಿದ್ದು, ಚಿತ್ರ ತೆರೆಕಂಡ ಎರಡು ದಿನದಲ್ಲಿ 100 ಕೋಟಿ ಗಳಿಸುವ ಮೂಲಕ ಅತಿ ವೇಗದಲ್ಲಿ 100 ಕೋಟಿ ಕ್ಲಬ್ ಸೇರಿದೆ, ಮೂರನೇ ದಿನ 140 ಕೋಟಿ ಗಳಿಸಿದೆ ಎನ್ನಲಾಗುತ್ತಿದೆ.
ಕರಣ್ ಜೋಹರ್ ಬ್ಯಾನರ್ ನ ಧರ್ಮ ಪ್ರೋಡಕ್ಷನ್ಸ್ ಬಾಹುಬಲಿ ಚಿತ್ರದ ಮಾರಾಟ ಮತ್ತು ಪ್ರಚಾರ ಕೆಲಸ ಮಾಡುತ್ತಿದ್ದು, ಬಾಹುಬಲಿ ಡಬ್ಬಡ್ ಚಿತ್ರವಾದರೂ ಒಂದೇ ದಿನದಲ್ಲಿ ಬಾಕ್ಸ್ ಆಫೀಸ್ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿದೆ ಎಂದು ಕರಣ್ ಜೋಹರ್ ಟ್ವೀಟ್ ಮಾಡಿದ್ದಾರೆ.
ಮೊದಲ ದಿನ 44.37ಕೋಟಿ ರುಪಾಯಿ ಗಳಿಸಿದ್ದ ಬಾಲಿವುಡ್ ನ ಹ್ಯಾಪಿ ನ್ಯೂಇಯರ್ ಚಿತ್ರ ಇದೀಗ ಬಾಹುಬಲಿಯ ದಾಖಲೆಯಿಂದಾಗಿ 2 ನೇ ಸ್ಥಾನಕ್ಕೆ ಇಳಿದಿದೆ. ಬಾಹುಬಲಿಯ ಮೊದಲ ದಿನದ ಕಲೆಕ್ಷನ್ ರು.50 ಕೋಟಿಯಾಗಿದ್ದು, ವಿಶ್ವದಾದ್ಯಂತ ಗಳಿಕೆ ರು.66 ಕೋಟಿ. ಎರಡನೇ ದಿನದಂತ್ಯಕ್ಕೆ ವಿಶ್ವದಾದ್ಯಂತ 100 ಕೋಟಿ ಗಳಿಸುವ ಮೂಲಕ ಅತಿ ವೇಗದಲ್ಲಿಯೇ 100 ಕೋಟಿ ಕ್ಲಬ್ ಸೇರಿದ ಭಾರತೀಯ ಚಿತ್ರ ಎಂಬ ದಾಖಲೆ ನಿರ್ಮಿಸಿದೆ.
Advertisement