ಕಾಸರವಳ್ಳಿ ಚಿತ್ರಗಳಲ್ಲಿ ಮನುಷ್ಯಧರ್ಮ ಹೆಚ್ಚು: ಪ್ರೊ. ಜಿ.ಕೆ. ಗೋವಿಂದರಾವ್

ಖಳನಾಯಕರ ಪಾತ್ರಗಳೇನಿದ್ದರೂ ನಗರದ ಚಿತ್ರಗಳಿಗೆ ಮಾತ್ರ ಸೀಮಿತ. ನಾಯಕ-ನಾಯಕಿಯರಿಲ್ಲದ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಚಿತ್ರದಲ್ಲಿ ಮನುಷ್ಯಧರ್ಮ ಮಾತ್ರ ಕಾಣುತ್ತದೆ ಎಂದು ಸಾಹಿತಿ ಪ್ರೊ.ಜಿ.ಕೆ.ಗೋವಿಂದರಾವ್ ಅಭಿಪ್ರಾಯಪಟ್ಟರು...
ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಂಡಿದ್ದ ಗಿರೀಶ್ ಕಾಸರವಳ್ಳಿ ಚಲನಚಿತ್ರೋತ್ಸವ ಸಮಾರೋಪದಲ್ಲಿ ವಿಮರ್ಶಕ ಡಾ. ಸಿ.ಎನ್.ರಾಮಚಂದ್ರನ್ ಹಾಗೂ ನಿರ್ದೇಶಕ ಗಿರೀಶ್ ಕಾಸರವಳ್ಳಿ ಗಾಢ ಚರ್ಚೆಯ
ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಂಡಿದ್ದ ಗಿರೀಶ್ ಕಾಸರವಳ್ಳಿ ಚಲನಚಿತ್ರೋತ್ಸವ ಸಮಾರೋಪದಲ್ಲಿ ವಿಮರ್ಶಕ ಡಾ. ಸಿ.ಎನ್.ರಾಮಚಂದ್ರನ್ ಹಾಗೂ ನಿರ್ದೇಶಕ ಗಿರೀಶ್ ಕಾಸರವಳ್ಳಿ ಗಾಢ ಚರ್ಚೆಯ
Updated on

ಬೆಂಗಳೂರು: ಖಳನಾಯಕರ ಪಾತ್ರಗಳೇನಿದ್ದರೂ ನಗರದ ಚಿತ್ರಗಳಿಗೆ ಮಾತ್ರ ಸೀಮಿತ. ನಾಯಕ-ನಾಯಕಿಯರಿಲ್ಲದ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಚಿತ್ರದಲ್ಲಿ ಮನುಷ್ಯಧರ್ಮ ಮಾತ್ರ ಕಾಣುತ್ತದೆ ಎಂದು ಸಾಹಿತಿ ಪ್ರೊ.ಜಿ.ಕೆ.ಗೋವಿಂದರಾವ್ ಅಭಿಪ್ರಾಯಪಟ್ಟರು.

ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಂಡಿದ್ದ ಗಿರೀಶ್ ಕಾಸರವಳ್ಳಿ ಅವರ ಚಲನಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಸರವಳ್ಳಿ ಚಿತ್ರಗಳಲ್ಲಿ ನಾಯಕಿ, ನಾಯಕ, ಖಳನಾಯಕ ಯಾರೂ ಇರುವುದಿಲ್ಲ. ಚಿತ್ರ ವೀಕ್ಷಿಸದ ನಂತರ ಪ್ರೇಕ್ಷಕರೇ ನಾಯಕ-ನಾಯಕಿಯರಾಗುತ್ತಾರೆ. ಗಾಂಧಿನಗರದ ಚಿತ್ರಗಳಂತಿರುವುದಿಲ್ಲ. ಮನುಷ್ಯ ಹಾಗೂ ಪ್ರಕೃತಿ ಧರ್ಮವನ್ನು ಇಲ್ಲಿ ಪ್ರೇಕ್ಷಕರಿಗೆ ಉಣಬಡಿಸುತ್ತಾರೆ. ಅವರ ಚಿತ್ರಗಳಲ್ಲಿ ಪುರುಷವಾದ, ಸ್ತ್ರೀವಾದ ಯಾವುದೂ ಇರುವುದಿಲ್ಲ. ಅವುಗಳಲ್ಲಿ ನಾವು ಮನುಷ್ಯವಾದವನ್ನು ಕಾಣುತ್ತೇವೆ. ಮಾನವ ಧರ್ಮ ಪ್ರತಿಯೊಬ್ಬ ಪ್ರೇಕ್ಷಕನ ಮನಮುಟ್ಟುವಂತೆ ಹೇಳುತ್ತಾರೆ ಎಂದರು.

ಈ ಚಿತ್ರಗಳು ಒಂದು ರೀತಿ ಧರ್ಮ ಹಾಗೂ ಮಠಧರ್ಮ ಇದ್ದಂತೆ. ಅಂದರೆ, ಗಿರೀಶ್ ಕಾಸರವಳ್ಳಿ ಹಾಗೂ ಗಾಂಧಿ ನಗರ ಇದ್ದಂತೆ. ಮಠ ಧರ್ಮವನ್ನು ಎಲ್ಲರೂ ಪಾಲಿಸುತ್ತಾರೆ. ಆದರೆ, ಧರ್ಮ ಪಾಲಿಸುವುದು ಕಷ್ಟ. ಈ ನಿಟ್ಟಿನಲ್ಲಿ ಅವರು ತಮ್ಮ ಚಿತ್ರಗಳನ್ನು ಕಟ್ಟಿಕೊಟ್ಟಿದ್ದಾರೆ. ಕಾಸರವಳ್ಳಿ ಗಾಂಧಿನಗರಕ್ಕೆ ಹೋಗಿದ್ದಿದ್ದರೆ ಎಂದೋ ತಮ್ಮ ಜೇಬು ತುಂಬಿಸಿಕೊಳ್ಳಬಹುದಿತ್ತು. ಅದನ್ನು ಬಿಟ್ಟು ಅವರು ಕೈಸುಟ್ಟುಕೊಳ್ಳುವ ಕೆಲಸ ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರೋದ್ಯಮ ಒಂದು ಸಮೂಹ ಮಾಧ್ಯಮ ಇದ್ದಂತೆ. ಅವೆಲ್ಲವನ್ನೂ ಒಗ್ಗೂಡಿಸಿ ಚಿತ್ರ ನಿರ್ಮಾಣ ಮಾಡುವುದು ಹಾಗೂ ಅದಕ್ಕೆ ಸೂಕ್ತ ಕಥೆ ಹೆಣೆಯುವುದು ಅತಿಕಷ್ಟದ ಕೆಲಸ. ಅಂತಹ ಕೆಲಸವನ್ನು ಆಯ್ಕೆ ಮಾಡಿಕೊಂಡು ಪ್ರೇಕ್ಷಕರಿಗೆ ,ಸದಭಿರುಚಿಯ ಚಿತ್ರಗಳನ್ನು ಉಣಬಡಿಸುತ್ತಿದ್ದಾರೆ. ಅಂತಹ ನಿರ್ದೇಶಕರನ್ನು ಜನ ಮರೆಯಬಾರದು ಎಂದರು.

ದ್ವೀಪ ಚಿತ್ರದ ಬಗ್ಗೆ ಮಾತನಾಡುತ್ತಾ ಅದರಲ್ಲಿನ ಸೌಂದರ್ಯ ವರ್ಣಿಸಿದ ಅವರು, ಆ ಚಿತ್ರವನ್ನು ತಮಿಳುನಾಡು ಸಿಎಂ ಜಯಲಲಿತಾ ನೋಡಿದ್ದಿದ್ದರೆ ಅದೆಷ್ಟು ಹೊಟ್ಟೆ ಉರಿದುಕೊಳ್ಳುತ್ತಿದ್ದರೋ ಏನೋ. ನಮಗೆ ಒಂದು ಹನಿ ನೀರು ಸಹ ಬಿಡುತ್ತಿರಲಿಲ್ಲ ಎಂದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್, ನಿರ್ದೇಶಕ ಬಸಂತ್ ಕುಮಾರ್ ಪಾಟೀಲ್, ಆನಂದ್‍ರಾವ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ನಿರ್ದೇಶಕ ಅಡೂರು ಗೋಪಾಲಕೃಷ್ಣ ಅವರ ಕುರಿತು ಕಾಸರವಳ್ಳಿ ಸಿದ್ಧಪಡಿಸಿರುವ 88 ನಿಮಿಷದ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com