ಬಾಹುಬಲಿಗಿಂತ 'ಪುಲಿ' ಚಿತ್ರದಲ್ಲಿ ಹೆಚ್ಚು ಗ್ರಾಫಿಕ್ಸ್ ಬಳಕೆ!
ಚೆನ್ನೈ: ಕಂಪ್ಯೂಟರ್ ನಿರ್ಮಿತ ದೃಶ್ಯಾವಳಿ ಅಳವಡಿಕೆ ವಿಷಯದಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾಗಿ ದಾಖಲೆಯ ಪ್ರದರ್ಶನ ಕಾಣುತ್ತಿರುವ ಬಾಹುಬಲಿ ಸಿನಿಮಾ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಬಾಹುಬಲಿ ಚಿತ್ರದ ಗ್ರಾಫಿಕ್ಸ್ ದೃಶ್ಯಾವಳಿಗೆ ಪ್ರಶಂಸೆ ವ್ಯಕ್ತವಾಗುತ್ತಿರಬೇಕಾದರೆ, ಇನ್ನೂ ತೆರೆ ಕಾಣಬೇಕಿರುವ ವಿಜಯ್ ನಟನೆಯ ಪುಲಿ ಚಿತ್ರ ಸಹ ಕಂಪ್ಯೂಟರ್ ನಿರ್ಮಿತ ದೃಶ್ಯಾವಳಿಗಳಿಂದ ಸುದ್ದಿಯಲ್ಲಿದೆ.
ಪುಲಿ ಚಿತ್ರ ಬಾಹುಬಾಲಿ ಚಿತ್ರಕ್ಕಿಂತಲೂ ಹೆಚ್ಚು ಸಿಜಿಐ(ಗ್ರಾಫಿಕ್ಸ್ ದೃಶ್ಯಾವಳಿ) ಗಳನ್ನು ಹೊಂದಿದೆ ಎಂದು ಚಿತ್ರದ ಗ್ರಾಫಿಕ್ಸ್ ದೃಶ್ಯಾವಳಿಗಳ ಮೇಲ್ವಿಚಾರಕರಾದ ಆರ್.ಸಿ ಕಮಲಾಕಣ್ಣನ್ ಹೇಳಿದ್ದಾರೆ. ಚಿತ್ರೀಕರಣ ಪ್ರಾರಂಭದಲ್ಲಿ ಒಟ್ಟು 2,600 ಗ್ರಾಫಿಕ್ಸ್ ದೃಶ್ಯಾವಳಿಗಳನ್ನು ಅಳವಡಿಸಲು ನಿರ್ಧರಿಸಲಾಗಿತ್ತು ಆದರೆ ಬಜೆಟ್ ನ ಕಾರಣದಿಂದ ಅದನ್ನು 2,200 ದೃಶ್ಯಾವಳಿಗಳಿಗೆ ಇಳಿಸಲಾಯಿತು ಎಂದು ಕಮಲಾಕಣ್ಣನ್ ತಿಳಿಸಿದ್ದಾರೆ. 400 ದೃಶ್ಯಾವಳಿಗಳಿಗೆ ಕತ್ತರಿ ಹಾಕಲಾಗಿದೆಯಾದರೂ ಪುಲಿ ಚಿತ್ರ ಬಾಹುಬಲಿಗಿಂಟ ಹೆಚ್ಚು ಗ್ರಾಫಿಕ್ಸ್ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ನಾನೀ ಚಿತ್ರಕ್ಕೆ ಕೆಲಸ ಮಾಡಿದಾಗ ಅದರಲ್ಲಿ 1,200 ದೃಶ್ಯಾವಳಿಗಳಿದ್ದವು. ಮಗಧೀರಾದಲ್ಲಿ 1,600 ಗ್ರಾಫಿಕ್ಸ್ ದೃಶ್ಯಗಳನ್ನು ಬಳಸಲಾಗಿತ್ತು. ಬಾಹುಬಲಿಯಲ್ಲಿ 2 ,000 ದೃಶ್ಯಗಳನ್ನು ಬಳಸಲಾಗಿದೆ ಎಂದು ಕಮಲಾಕಣ್ಣನ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ