ಶ್ರುತಿ ರಾಟೆ ಸೇರಿದಾಗ

ಎಣ್ಣೆಗೆಂಪು ಬಣ್ಣ, ಸೊಂಪು ಕೂದಲಿನ ಶ್ರುತಿ ಹರಿಹರನ್ ನ್ಯಾಚುರಲ್ ಬ್ಯೂಟಿ. `ಲೂಸಿಯಾ' ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯವಾಗುವ ಮುನ್ನ ಮಲೆಯಾಳಂನಲ್ಲಿ `ಸಿನಿಮಾ ಕಂಪನಿ' ಹೆಸರಿನ ಚಿತ್ರದಲ್ಲಿ ನಟಿಸಿದವಳು...
ಶ್ರುತಿ ಹರಿಹರನ್
ಶ್ರುತಿ ಹರಿಹರನ್

ಎಣ್ಣೆಗೆಂಪು ಬಣ್ಣ, ಸೊಂಪು ಕೂದಲಿನ ಶ್ರುತಿ ಹರಿಹರನ್ ನ್ಯಾಚುರಲ್ ಬ್ಯೂಟಿ. `ಲೂಸಿಯಾ' ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯವಾಗುವ ಮುನ್ನ ಮಲೆಯಾಳಂನಲ್ಲಿ `ಸಿನಿಮಾ ಕಂಪನಿ' ಹೆಸರಿನ ಚಿತ್ರದಲ್ಲಿ ನಟಿಸಿದವಳು. ಸದ್ಯ ನಿರ್ದೇಶಕ ಎ.ಪಿ. ಅರ್ಜುನ್ ಅಂಗಳದಲ್ಲಿ `ರಾಟೆ' ತಿರುಗಿಸುತ್ತಿರುವ ನಟಿ ಶ್ರುತಿ ಚಿಟ್-ಚಾಟ್.

`ಲೂಸಿಯಾ' ನಂತರ ನಾಪತ್ತೆಯಾದಂತಿದ್ದೀರಲ್ಲ?
ಹಾಗೇನೂ ಇಲ್ಲ. ಒಂದರ ಹಿಂದೆ ಒಂದು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದೇನೆ. ಆದರೆ, ಸರದಿಯಂತೆ ಸಿನಿಮಾಗಳು ಬಿಡುಗಡೆಯಾಗಿಲ್ಲ ಅಷ್ಟೆ. ಉಳಿದಂತೆ ನಾನು ಅವಕಾಶವಂಚಿತ ನಟಿಯಲ್ಲ. ಕೈಯಲ್ಲಿ ಸಿನಿಮಾಗಳಿವೆ. ಬಿಡುಗಡೆಗೆ ಕಾಯುತ್ತಿದ್ದೇನೆ.

ಸರಿ, ಲೂಸಿಯಾ ನಂತರ ಶ್ರುತಿ ಕೆರಿಯರ್‍ನಲ್ಲಿ ಏನೇನಾಯಿತು?

ಮೊದಲು `ಸಿನಿಮಾ ಕಂಪನಿ' ಚಿತ್ರದಲ್ಲಿ ನಟಿಸಿದೆ. ಆ ಚಿತ್ರ ಯಶಸ್ಸಾಯಿತು. ಇದರ ನಂತರ `ಲೂಸಿಯಾ' ಚಿತ್ರ. ಮುಂದೆ `ದ್ಯಾವ್ರೆ' ಚಿತ್ರ ಮುಗಿಸಿದೆ. ಇದು ಒಳ್ಳೆಯ ಹೆಸರು ತಂದು ಕೊಟ್ಟಿತು. ಇದರ ನಡುವೆ `ಸವಾರಿ-2' ಚಿತ್ರಕ್ಕೆ ಆಯ್ಕೆಯಾದೆ. ಈ ನಡುವೆ ಮತ್ತೊಂದು ತಮಿಳಿನಲ್ಲಿ ಒಂದು ಚಿತ್ರದಲ್ಲಿ ನಟಿಸಿದ್ದು, ಮತ್ತೊಂದು `ನೀಲಾ' ಎನ್ನುವ ಚಿತ್ರಕ್ಕೆ ಕಮಿಟ್ ಆಗಿದ್ದೇನೆ.

ಒಳ್ಳೆಯ ನಟಿ ಎಂದು ಮೆಚ್ಚಿಕೊಂಡರೂ ಸ್ಟಾರ್ ನಟಿ ಎನಿಸಿಕೊಂಡಿಲ್ಲವೆಂಬ ಕೊರಗು ಇದೆಯೇ?
ನನಗೆ ಯಾವ ಕೊರಗು ಮತ್ತು ಕೊರತೆ ಇಲ್ಲ. ನನ್ನ ಪ್ರತಿಭೆಗೆ ತಕ್ಕಂತೆ ಕನ್ನಡ ಚಿತ್ರರಂಗದಲ್ಲಿ ಜಾಗ ಸಿಕ್ಕಿದೆ. ಪ್ರೇಕ್ಷಕರು ಕೂಡ ನನ್ನ ನಟನೆಯನ್ನು ಒಪ್ಪಿಕೊಂಡಿದ್ದಾರೆ. ಕೈಯಲ್ಲಿ ನಾಲ್ಕೈದು ಸಿನಿಮಾಗಳಿವೆ. ಇದರ ಹೊರತಾಗಿ ನಾನು ಯಾವ ಸ್ಟಾರ್ ಪಟ್ಟಕ್ಕಾಗಿ ಕೊರಗುತ್ತಿಲ್ಲ.

ಈಗ ಶ್ರುತಿ ಪ್ರೇಕ್ಷಕರಿಗೆ ದರ್ಶನ ಕೊಡುವುದು ಯಾವಾಗ?
ಎ.ಪಿ.ಅರ್ಜುನ್ ನಿರ್ದೇಶನದ `ರಾಟೆ' ಚಿತ್ರ ಇದೇ ತಿಂಗಳು 20ಕ್ಕೆ ಬಿಡುಗಡೆಯಾಗುತ್ತಿದೆ. ಧನಂಜಯ್ ನಾಯಕನಾಗಿ ಅಭಿನಯಿಸಿರುವ ಈ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಗೆಲವು ಸಿಗುತ್ತದೆಂಬ ನಂಬಿಕೆ ಇದೆ. ಇದು ನನ್ನ ಕೆರಿಯರ್‍ನ ಮತ್ತೊಂದು ವಿಶೇಷ ಚಿತ್ರವಾಗಲಿದೆ.

ಯಾಕೆ `ರಾಟೆ' ಚಿತ್ರ ನಿಮಗೆ ಸ್ಪೆಷಲ್ಲು?
ಇದು ಪ್ರೇಮಕಥೆ ಚಿತ್ರವಾದರೂ ರೆಗ್ಯುಲರ್ ಲವ್ ಸ್ಟೋರಿ ಅಲ್ಲ. ಮಾಮೂಲಲ್ಲದ ಕಥೆ ಇಲ್ಲಿದೆ. ಒಬ್ಬ ಕಾಮನ್ ಹುಡುಗ ಮತ್ತು ಹುಡುಗಿಯ ಪ್ರೇಮಕಥೆ. ಆದರೂ ಪ್ರೀತಿಯಲ್ಲಿ ಅವನಿಗೆ ಅವಳು ರಾಣಿ, ಅವಳಿಗೆ ಅವನು ರಾಜ. ಹೀಗಾಗಿ `ರಾಜ ರಾಣಿ ಕಥೆ' ಎಂಬುದು ಚಿತ್ರದ ಟ್ಯಾಗ್‍ಲೈನ್. ಆದರೆ, ಪೋಸ್ಟರ್ ನೋಡಿದರೆ ನೀವು ರಾಣಿ ಹಾಗೆ ಕಾಣಿಸುತ್ತಿಲ್ಲವಲ್ಲ? ಅದೇ ಚಿತ್ರದ ಟ್ವಿಸ್ಟ್. ಇಲ್ಲಿ ಪ್ರೇಮಿಗಳು ಸಾಮಾನ್ಯರು. ಆದರೂ ಅವರ ಪ್ರೀತಿ ಹೇಗಿರುತ್ತದೆ ಎಂಬುದು ಟ್ಯಾಗ್‍ಲೈನ್ ಹೇಳುತ್ತದೆ. ಸಿನಿಮಾ ನೋಡಿದರೆ ನಿಮಗೂ ಗೊತ್ತಾಗುತ್ತದೆ.

ನೀವು ಮೇಕಪ್ ಹಾಕಿಕೊಳ್ಳದೆ `ರಾಟೆ' ಚಿತ್ರದಲ್ಲಿ ಅಭಿನಯಿಸಿದ್ದೀರಂತೆ ಹೌದೆ?
ಹೌದು. ಎಲ್ಲೂ ಮುಖಕ್ಕೆ ಮೇಕಪ್ ಬಳಿದುಕೊಂಡಿಲ್ಲ. ನ್ಯಾಚುರಲ್ ಆಗಿ ಕಾಣಿಸಿಕೊಂಡಿದ್ದೇನೆ. ನಾನು ಮಾತ್ರವಲ್ಲ, ಚಿತ್ರದ ನಾಯಕ ಧನಂಜಯ್ ಕೂಡ ಮೇಕಪ್ ಹಾಕಿಕೊಂಡಿಲ್ಲ.

ನಿಮ್ಮ ಪ್ರಕಾರ `ರಾಟೆ' ನಿಜವಾದ ಸೂತ್ರಧಾರರು ಯಾರು?
ಅನ್ ಸ್ಕ್ರೀನ್‍ನಲ್ಲಿ ನಿರ್ದೇಶಕರು ಸೃಷ್ಟಿಸಿರುವ ನಾಯಕ ಮತ್ತು ನಾಯಕಿ ಸೇರಿದಂತೆ ಎಲ್ಲ ಪಾತ್ರಧಾರಿಗಳು. ತೆರೆ ಹಿಂದೆ ನಿರ್ದೇಶಕ ಎ.ಪಿ. ಅರ್ಜುನ್, ನಿರ್ಮಾಪಕ ಕಂ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಛಾಯಾಗ್ರಾಹಕ ಸತ್ಯ ಹೆಗಡೆ. ಈ ಎಲ್ಲರಿಂದ `ರಾಟೆ' ಮೂಡಿಬಂದಿದೆ.

ಮುಂದೆ ನಿಮ್ಮ ಕೈಯಲ್ಲಿರುವ ಚಿತ್ರಗಳ ಕುರಿತು ಹೇಳಿ?

ಸಿಪಾಯಿ ಚಿತ್ರಕ್ಕೆ ಶೂಟಿಂಗ್ ನಡೆಯುತ್ತಿದೆ. ಇನ್ನೂ ಹಿರಿಯ ನಟ ಅನಂತ್‍ನಾಗ್, ರಕ್ಷಿತ್ ಶೆಟ್ಟಿ ಅಭಿನಯದ `ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಚಿತ್ರ ಸದ್ಯದಲ್ಲೇ ಶುರುವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com