ಕನ್ನಡದಲ್ಲಿ ಮತ್ತೊಂದು ಹಾರರ್ ಚಿತ್ರ ಹಾಜರ್

ಕನ್ನಡದಲ್ಲಿ ಈಗ ಭೂತ, ಪ್ರೇತ ಹಾಗೂ ದೆವ್ವಗಳದ್ದೇ ಕಾರುಬಾರು. ಸಾಲದಕ್ಕೆ ಹಾರರ್ ಬೇರೆ. ಅಂದರೆ ಹಿಂದಿಗಿಂತಲೂ ಈ ವರ್ಷ ಹಾರರ್ ಕಂ ಪ್ರೇತ ಸಿನಿಮಾಗಳ ಸಂಖ್ಯೆಯ ಪ್ರಮಾಣ ಸಿಕ್ಕಾಪಟ್ಟೆ ಹೆಚ್ಚಾಗಿದೆ...
ಕನ್ನಡದಲ್ಲಿ ಮತ್ತೊಂದು ಹಾರರ್ ಚಿತ್ರ
ಕನ್ನಡದಲ್ಲಿ ಮತ್ತೊಂದು ಹಾರರ್ ಚಿತ್ರ

ಕನ್ನಡದಲ್ಲಿ ಈಗ ಭೂತ, ಪ್ರೇತ ಹಾಗೂ ದೆವ್ವಗಳದ್ದೇ ಕಾರುಬಾರು. ಸಾಲದಕ್ಕೆ ಹಾರರ್ ಬೇರೆ. ಅಂದರೆ ಹಿಂದಿಗಿಂತಲೂ ಈ ವರ್ಷ ಹಾರರ್ ಕಂ ಪ್ರೇತ ಸಿನಿಮಾಗಳ ಸಂಖ್ಯೆಯ ಪ್ರಮಾಣ ಸಿಕ್ಕಾಪಟ್ಟೆ ಹೆಚ್ಚಾಗಿದೆ.

ಏನಿಲ್ಲವೆಂದರೂ ಈ ವರ್ಷದ ಅಂತ್ಯದೊಳಗೆ 40ಕ್ಕೂ ಹೆಚ್ಚು ಭೂತ ಸಿನಿಮಾಗಳು ತೆರೆಗೆ ಅಪ್ಪಳಿಸಬಹುದು. ದೆವ್ವಗಳ ಬೆನ್ನತ್ತಿಕೊಂಡು ಹೋಗಿ ಸಿನಿಮಾ ಮಾಡಿ ಪ್ರೇಕ್ಷಕನ ಕಣ್ಣಲ್ಲಿ ಹಾರರ್ ಸೃಷ್ಟಿಸುತ್ತಿರುವವರಲ್ಲಿ ಹೊಸ ನಿರ್ದೇಶಕರೇ ಹೆಚ್ಚು. ಇದ್ದಕ್ಕಿದಂತೆ ಹಾರರ್ ಸಿನಿಮಾಗಳು ಹೆಚ್ಚಾಗುವುದಕ್ಕೆ ಕಾರಣ ಕೆಲ ತಿಂಗಳುಗಳ ಹಿಂದೆ ಬಿಡುಗಡೆಯಾದ 6-5=2 ಎನ್ನುವ ಚಿತ್ರ ಎಂಬುದು ಅನುಮಾನವಿಲ್ಲದೆ ಹೇಳಬಹುದು.

ಹೌದು, ಬಿಡಿಗಾಸಿನಲ್ಲಿ ತಯಾರಾದ ಈ 6-5=2 ಚಿತ್ರ ದೊಡ್ಡ ಮಟ್ಟದಲ್ಲೇ ಗಂಟು ಮಾಡಿಕೊಂಡು ಬಾಲಿವುಡ್ ಅಂಗಳದ ಕದ ತಟ್ಟಿ ಬಂದಿದ್ದು ಕೂಡ ಈ ಚಿತ್ರದ ಸಾಧನೆ. ಈಗ ಇದೇ ಚಿತ್ರದ ಯಶಸ್ಸಿನ ಅಲೆಯಲ್ಲಿ ಸರದಿಯಂತೆ ದೆವ್ವದ ಸಿನಿಮಾಗಳು ಸೆಟ್ಟೇರಿವೆ. ಅಂಥ ಚಿತ್ರಗಳ ಒಟ್ಟು ಸಂಖ್ಯೆ 40. ಈ ಸಂಖ್ಯೆಯಲ್ಲಿ ಹೊಸದಾಗಿ ಸೇರ್ಪಡೆಗೊಂಡ ಸಿನಿಮಾ `ತಮಿಸ್ರ'. ಯುವ ಪ್ರತಿಭೆಗಳೇ ಸೇರಿ ಮಾಡಿರುವ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಪ್ರೇಕ್ಷಕರನ್ನು ಹೆದರಿಸುವುದಕ್ಕಾಗಿಯೇ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ.

ಈ ನಡುವೆ ಹಾರರ್ ಚಿತ್ರಕ್ಕಾಗಿಯೇ ಒಂದು ವಿಶೇಷವಾದ ಗೀತೆಯನ್ನು ಚಿತ್ರೀಕರಣ ಮಾಡಿದ್ದಾರೆ. ಅದು ಕೂಡ ಚಿತ್ರದ ಪ್ರಮೋಷನ್ ಗಾಗಿಯೇ ಈ ಹಾಡನ್ನು ಮೇಕಿಂಗ್ ಮಾಡಲಾಗಿದೆ. ಆ ಮೂಲಕ ದೆವ್ವದ ಸಿನಿಮಾ ಆದರೂ ಹೊಸತನ ಮೆರೆದಿದ್ದೇವೆ ಎಂಬುದು ಚಿತ್ರತಂಡದ ಅಭಿಪ್ರಾಯ. ಈಗಾಗಲೇ ಈ ಚಿತ್ರದ ಪ್ರೊಮೋ ಬಿಡುಗಡೆಯಾಗಿದ್ದು, ಅದು ಯೂಟ್ಯೂಬ್ ನಲ್ಲಿ ಸೌಂಡು ಮಾಡುತ್ತಿದೆ. ಕೇವಲ ಪ್ರೊಮೋ ಮಾತ್ರವಲ್ಲ, ಚಿತ್ರದ ಹಾಡನ್ನೂ ಕೂಡ ಇಂಟರ್‍ನೆಟ್‍ನಲ್ಲೇ ಬಿಡುಗಡೆ ಮಾಡುವ ಮೂಲಕ `ತಮಿಸ್ರ' ಚಿತ್ರ, ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿದೆ.

ಈ ಚಿತ್ರದ ನಿರ್ದೇಶಕ ಪ್ರಕಾಶ್ ಹಾಸನ್. ಇವರಿಗಿದು ಮೊದಲ ಸಿನಿಮಾ. ಅಂದಹಾಗೆ `ತಮಿಸ್ರ' ಎಂದರೆ ಗರುಡಪುರಾಣದಲ್ಲಿ ಬರುವ ಒಂದು ಶಿಕ್ಷೆಯ ಹೆಸರು. ತಪ್ಪು ಮಾಡಿ ನರಕ ಸೇರುವವರಿಗೆ ಈ ಗರುಡಪುರಾಣದಲ್ಲಿರುವ ಶಿಕ್ಷೆಗಳನ್ನೇ ವಿಧಿಸಿಲಾಗುತ್ತದೆ. ತಮಿಳು ನಟ ವಿಕ್ರಮ್ ಅವರ `ಅನ್ನಿಯನ್' ಸಿನಿಮಾ ನೋಡಿದವರಿಗೆ ಈ ಗರುಡಪುರಾಣದ ಶಿಕ್ಷೆಗಳ ಬಗ್ಗೆ ಪರಿಚಯವಿರುತ್ತದೆ. ಇದರಲ್ಲಿನ ಶಿಕ್ಷೆಗಳ ಹೆಸರುಗಳ ಪೈಕಿ `ತಮಿಸ್ರ' ಕೂಡ ಒಂದು. ಕೊಂಚ ಭಿನ್ನವಾಗಿರಲಿ ಎನ್ನುವ ಕಾರಣಕ್ಕೆ ಸಂಸ್ಕೃತದಿಂದ ಕೂಡಿರುವ ಈ ಹೆಸರನ್ನೇ ಚಿತ್ರಕ್ಕೆ ನಾಮಕರಣ ಮಾಡಲಾಗಿದೆಯಂತೆ. ಆದರೆ, ಸಿನಿಮಾ ನೋಡಿದ ಪ್ರೇಕ್ಷಕ ತಾನೇ `ತಮಿಸ್ರ' ಶಿಕ್ಷೆಗೆ ಒಳಗಾಗದಿರಲಿ ಎಂಬುದು ದೆವ್ವದ ಮುಂದಿನ ಪ್ರಾರ್ಥನೆ!

ಸೆನ್ಸಾರ್ ಪ್ರಮಾಣ ಪತ್ರಕ್ಕಾಗಿ ಕ್ಯೂ ನಿಂತಿರುವ, ಆರ್‍ಎಂಎನ್ ಪ್ರೊಡಕ್ಷನ್ ಬ್ಯಾನರ್‍ನಡಿ ನಿರ್ಮಾಣವಾಗಿರುವ ಈ ಚಿತ್ರದ ನಿರ್ಮಾಪಕ ನಾಗರಾಜ್, . ಚಿತ್ರದ ನಾಯಕ ಶಿವು, ನಾಯಕಿ ಕಾವ್ಯ. ಮತ್ತೊಂದು ವಿಶೇಷ ಅಂದರೆ ಈ ಚಿತ್ರಕ್ಕೆ ದೆವ್ವದ ಹಾಡು ಬರೆದಿರುವುದು ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್. `ತಮಿಸ್ರ' ಚಿತ್ರವನ್ನು ನೋಡಿದ ಪ್ರೇಕ್ಷಕ ಯಾವ ಪಾಟಿ ಹೆದರಿಕೊಳ್ಳುತ್ತಾನೆ ಎನ್ನುವುದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com