
ನವದೆಹಲಿ: ಸಿನಿಮಾಗಳಲ್ಲಿ ಚೆಲ್ಲು ಚೆಲ್ಲಾಗಿ, ಹುರುಪು, ಉತ್ಸಾಹದಿಂದ ನಟಿಸುವ ತಾರೆಯರ ಬದುಕು ಹೂವಿನ ಹಾದಿಯಲ್ಲ, ಅಲ್ಲೂ ಮುಳ್ಳುಗಳಿರುತ್ತವೆ ಎಂಬುದನ್ನು ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯ ಸಂದರ್ಶನವೊಂದು ಸಾಬೀತುಪಡಿಸಿದೆ. ತಮ್ಮ ಅಭಿನಯದಿಂದ ಜನರ ಮನಸ್ಸುಗಳನ್ನು ಗೆದ್ದಿದ್ದರೂ ನಟಿ ದೀಪಿಕಾಳ ಮನಸ್ಸು ಎಂತಹ ಖಿನ್ನತೆಯೊಳಗೆ ಮುಳುಗಿತ್ತು ಎಂಬುದನ್ನು ಆಕೆಯೇ ಬಹಿರಂಗಪಡಿಸಿದ್ದಾರೆ.
ಇತ್ತೀಚೆಗೆ ಆಂಗ್ಲ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ದೀಪಿಕಾ ತಾವು ಅನುಭವಿಸಿದ ಮಾನಸಿಕ ಖಿನ್ನತೆಯನ್ನು ಹೊರಹಾಕಿದ್ದಾರೆ. 2014ರ ಆರಂಭದಲ್ಲಿ `ಬಾಲಿವುಡ್ ಕ್ವೀನ್' ಎಂಬ ಹಣೆಪಟ್ಟಿ ಪಡೆಯುತ್ತಿರುವ ಸಂದರ್ಭದಲ್ಲೇ ಆಕೆ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದು, ಬೆಳಗ್ಗೆ ನಿದ್ದೆಯಿಂದ ಏಳಲೂ ಸಾಧ್ಯವಾಗುತ್ತಿರಲಿಲ್ಲವಂತೆ. ಇಂತಹ ಸಂಕಷ್ಟದ ಪರಿಸ್ಥಿತಿಯನ್ನು ಆಕೆ ಅನುಭವಿಸಿದ ರೀತಿ ಮತ್ತು ಅದರಿಂದ ಹೊರಬಂದ ಬಗೆಯ ಬಗ್ಗೆಯೂ ದೀಪಿಕಾ ವಿವರಿಸಿದ್ದಾರೆ.
ಕುಟುಂಬದ ಬೆಂಬಲ: ಸಂದರ್ಶನದಲ್ಲಿ ದೀಪಿಕಾ ಮಾತ್ರವಲ್ಲದೆ, ಅವರ ತಾಯಿ ಉಜ್ವಲಾ ಪಡುಕೋಣೆ, ಡಾ.ಶ್ಯಾಮ್ ಭಟ್ ಮತ್ತು ಡಾ. ಅನ್ನಾಚಾಂಡಿ ಸಹ ಇದ್ದರು. `ಎಲ್ಲ ಸಮಸ್ಯೆ ಆರಂಭವಾದದ್ದು ಕಳೆದ ವರ್ಷ ಫೆ.15ರಂದು. ನಾನು ಬೆಳಗ್ಗೆ ಏಳುವಾಗಲೇ ಎಲ್ಲವೂ ಶೂನ್ಯವೆಂಬಂತೆ ಕಂಡಿತು. ದಿಕ್ಕೇ ತೋಚದಂತಾಗಿತ್ತು. ಏಳುವುದೇ ಬೇಡ, ಮಲಗಿಕೊಂಡೇ ಇರೋಣ ಎಂದನಿ ಸುತ್ತಿತ್ತು. ಕೆಲವೊಮ್ಮೆ ಜೋರಾಗಿ ಅಳುತ್ತಿದ್ದೆ. ಹೊರ ಬಂದಾಗ ಅದನ್ನು ತೋರಿಸಿ ಕೊಳ್ಳುತ್ತಿರಲಿಲ್ಲ. ಒಮ್ಮೊಮ್ಮೆ ಎಲ್ಲರೊಂದಿಗೆ ಬೆರೆತು ನೋವು ಮರೆಯುತ್ತಿದ್ದೆ, ಮತ್ತೆ ಕೆಲವೊಮ್ಮೆ ಎಲ್ಲರೊಂದಿಗಿರುವಾಗಲೇ ಹೆಚ್ಚು ನೋವಾಗುತ್ತಿತ್ತು. ಕೊನೆಗೆ ನನ್ನ ಕುಟುಂಬ ಸದಸ್ಯರು ನನ್ನ ಬೆನ್ನಿಗೆ ನಿಂತರು. ಹೀಗಾಗಿ ನಾನು ದೊಡ್ಡ ಸಂಕಷ್ಟದಿಂದ ಪಾರಾದೆ' ಎಂದಿದ್ದಾರೆ ದೀಪಿಕಾ.
ಇಂದು ನಾನು ಈ ಸಂದರ್ಶನದಲ್ಲಿ ನನ್ನ ಖಿನ್ನತೆ ಬಗ್ಗೆ ಮಾತನಾಡುವುದರಿಂದ ಕನಿಷ್ಠಪಕ್ಷ ಒಬ್ಬರ ಬದುಕಿನ ಮೇಲಾದರೂ ಪ್ರಭಾವ ಬೀರಿದರೆ ಸಾಕು. ಏಕೆಂದರೆ ಇದೇ ಖಿನ್ನತೆ ಕೆಲ ತಿಂಗಳ ಹಿಂದೆ ನನ್ನ ಗೆಳತಿಯೊಬ್ಬಳನ್ನು ಬಲಿ ಪಡೆದಿತ್ತು. ಹಾಗಾಗಿ ಮಾನಸಿಕ ಸಮಸ್ಯೆಯಿರುವವರಿಗೆ ಕುಟುಂಬ ಸದಸ್ಯರು, ಸ್ನೇಹಿತರಿಂದ ಎಂತಹ ಬೆಂಬಲ ಬೇಕು, ಅವರ ಬೆಂಬಲದಿಂದ ಖಿನ್ನತೆಯನ್ನು ಹೇಗೆ ಹೋಗಲಾಡಿಸಬಹುದು ಎಂಬುದನ್ನು ಹೊರಜಗತ್ತಿಗೆ ತಿಳಿಸಬಯಸಿದ್ದೇನೆ ಎಂದಿದ್ದಾರೆ ದೀಪಿಕಾ.
ಮಗಳು ಒಬ್ಬ ನಟಿ. ಆಕೆಯ ಸ್ಥಿತಿ ಹೀಗಿದೆ ಎಂಬುವುದು ಹೊರಜಗತ್ತಿಗೆ ಗೊತ್ತಾದರೆ ಏನೇನೋ ಕಥೆಗಳು ಹುಟ್ಟುತ್ತವೆ ಎಂಬ ಭಯ ನಮ್ಮನ್ನು ಆವರಿಸಿತ್ತು. ಇದು ನಮ್ಮನ್ನು ಹೆಚ್ಚು ಒತ್ತಡಕ್ಕೀಡುಮÁಡಿತ್ತು. ಆದರೆ ನನ್ನ ಮಗಳು ಸ್ಟ್ರಾಂಗ್, ಆಕೆ ಎಲ್ಲವನ್ನೂ ಪ್ರಾಕ್ಟಿಕಲ್ ಆಗಿ ತೆಗೆದುಕೊಳ್ಳುತ್ತಿದ್ದವಳು. ಅಂಥವಳು ಈ ರೀತಿ ಆಡುತ್ತಿದ್ದಾಳೆಂದಾಗಲೇ ನಮಗೆ ಇದೊಂದು ಕಾಯಿಲೆ ಎಂಬುದು ಅರ್ಥವಾಯಿತು.
- ಉಜ್ವಲಾ ಪಡುಕೋಣೆ, ದೀಪಿಕಾ ತಾಯಿ
Advertisement