ಮೇಘನಾ ಹುಟ್ಟುಹಬ್ಬಕ್ಕೆ ಎರಡು ಉಡುಗೊರೆ
ಬೆಂಗಳೂರು: ನೆನ್ನೆ ನಟಿ ಮೇಘನಾ ರಾಜ್ ತನ್ನ ಹುಟ್ಟುಹಬ್ಬಕ್ಕೆ ಎರಡು ಉಡುಗೊರೆ ಸ್ವೀಕರಿಸಿದ್ದಾರೆ. ಒಂದು ಉಡುಗೊರೆ ವೃತ್ತಿಯದ್ದಾದರೆ ಮತ್ತೊಂದು ವೈಯಕ್ತಿವಾದದ್ದು. ತಂದೆ (ಸುಂದರ್ ರಾಜ್) ವಜ್ರದೋಲೆಗಳ ಉಡುಗೊರೆಯನ್ನು ಕೊಟ್ಟಿದ್ದಾರೆ. "ತಂದೆಯ ಉಡುಗೊರೆ ಯಾವಾಗಲೂ ವಿಶೇಷ. ಆ ನೆನಪು ಕೊನೆಯವರೆಗೂ ಉಳಿದಿರುತ್ತದೆ" ಎಂದು ಭಾವನಾತ್ಮಕವಾಗಿ ನುಡಿಯುತ್ತಾರೆ ಮೇಘನಾ.
ಇನ್ನೊಂದು ಉಡುಗೊರೆ ಕನ್ನಡ ಚಲನಚಿತ್ರ 'ಭುಜಂಗ'. ಇತ್ತೀಚೆಗೆ ಸಹಿ ಮಾಡಿರುವ ಈ ಚಿತ್ರದ ಮುಹೂರ್ತ ಇಂದು ನಡೆಯಲಿದ್ದು, ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ ಜೊತೆ ನಟಿಸುತ್ತಿದ್ದಾರೆ. "ನನಗೆ ಒಳ್ಳೆಯ ಪಾತ್ರವಿದ್ದರೆ ಮಾತ್ರ ನಾನು ಸಿನೆಮಾಗಳನ್ನು ಆಯ್ಕೆ ಮಾಡುತ್ತೇನೆ, ನನ್ನ ಮುಂಬರುವ ಚಿತ್ರ ಭುಜಂಗದಲ್ಲೂ ಹಾಗೆಯೇ" ಎನ್ನುತ್ತಾರೆ ಮೇಘನಾ.
ಜೀವ ನಿರ್ದೇಶಿಸುತ್ತಿರುವ ಈ ಚಲನಚಿತ್ರ ಕಾಲೇಜು ಹುಡುಗಿ ಮತ್ತು ಕಳ್ಳನ ನಡುವಿನ ಸುಂದರ ಪ್ರೀತಿಯ ಕಥೆ ಹೊಂದಿದೆ. ಅವರು ಭೇಟಿ ಮಾಡುವ ಬಗೆ ನಂತರ ಅವರು ಸಿಕ್ಕಿಹಾಕಿಕೊಳ್ಳುವ ತೊಂದರೆಗಳು ಸಿನೆಮಾದ ಹೂರಣ. ವಂಶೋದ್ಧಾರಕ ಮತ್ತು ಆಟಗಾರ ಸಿನೆಮಾಗಳಲ್ಲಿ ನಟಿಸಿರುವ ಮೇಘನಾ ಈ ಕಥೆ ಬಹಳ ಕ್ಯೂಟ್ ಎನ್ನುತ್ತಾರೆ. ಆಟಗಾರ ಜೂನ್ ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದ್ದು, ನಟಿ ಈಗ ಹಲ್ಲೆಯುಜಾ ಮತ್ತು ನರೇನ್ ನಿರ್ದೇಶನದ ಒಂದು ಮಲಯಾಳಮ್ ಸಿನೆಮಾಗೂ ಸಹಿ ಹಾಕಿದ್ದಾರೆ. ಮಲೆಯಾಳಮ್ ಸಿನೆಮಾದ ಚಿತ್ರೀಕರಣ ಮೇ ೬ ರಂದು ಪ್ರಾರಂಭವಾಗಲಿದ್ದು ನಂತರ ಭುಜಂಗ ಚಿತ್ರೀಕರಣ ಮೇ ೨೦ ರಿಂದ ಪ್ರಾರಂಭವಾಗಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ