
ಬೆಂಗಳೂರು: ವಸ್ತ್ರ ವಿನ್ಯಾಸಕ, ಪ್ರೀತಮ್ ಗುಬ್ಬಿ ಮತ್ತು ಹರ್ಷ ಇವರುಗಳಿಗೆ ಸಹ ನಿರ್ದೇಶಕರಾಗಿ ದುಡಿದಿರುವ ಹಾಗೂ ತಮ್ಮ ಚೊಚ್ಚಲ ಚಲನಚಿತ್ರ, ಗಣೇಶ್ ಮತ್ತು ಅಮೂಲ್ಯ ನಟನೆಯ 'ಖುಷಿ ಖುಷಿಯಾಗಿ' ಸಿನೆಮಾದ ಗೆಲುವಿನ ನಂತರ ಯೋಗಿ ಜಿ ರಾಜ್ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ. ತಮ್ಮ ಮೊದಲ ಸಿನೆಮಾದ ಯಶಸ್ಸಿನ ನಂತರ ಯೋಗಿ ಈಗ ಶಿವರಾಜ್ ಕುಮಾರ್ ಅವರ ಸಿನೆಮಾ ಒಂದನ್ನು ನಿರ್ದೇಶಿಸಲಿದ್ದಾರೆ.
ಎಲ್ಲವೂ ಸರಿಹೋದರೆ ಶೀಘ್ರದಲ್ಲೆ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದಿರುವ ಯೋಗಿ "ಶಿವಣ್ಣನವರ ಜೊತೆ ಮಾತುಕತೆ ನಡೆದಿದೆ. ಚಿತ್ರಕಥೆ ಬಗ್ಗೆ ಚರ್ಚಿಸಲು ಅವರು ಕರೆದಿದ್ದರು. ಈ ಸಿನೆಮಾವನ್ನು ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸಲಿದ್ದಾರೆ. ಶೀರ್ಷಿಕೆ 'ಬಂಗಾರ-ಬಂಗಾರದ ಮನುಷ್ಯನ ಮಗ' ಎಂದು ನಿಶ್ಚಿತವಾಗಿದೆ" ಎಂದು ಹೆಚ್ಚೇನು ತಿಳಿಸಲಿಚ್ಚಿಸದ ಯೋಗಿ ಹೇಳಿದ್ದಾರೆ. "ಶಿವಣ್ಣ ಒಪ್ಪಿಕೊಂಡ ನಂತರ ಅಧಿಕೃತವಾಗಿ ಘೋಷಿಸಲಿದ್ದೇನೆ" ಎಂದಿದ್ದಾರೆ.
ವಜ್ರಕಾಯ ಸಿನೆಮಾದ ಬಿಡುಗಡೆಗೆ ಕಾಯುತ್ತಿರುವ ಶಿವರಾಜಕುಮಾರ್ 'ಶಿವಲಿಂಗ' ಸಿನೆಮಾದ ಚಿತ್ರೀಕರಣ ಬಹುತೇಕ ಮುಗಿಸಿದ್ದಾರೆ. ಸದ್ಯಕ್ಕೆ 'ಸಂತೆಯಲ್ಲಿ ನಿಂತ ಕಬೀರ' ಚಲನಚಿತ್ರದಲ್ಲಿ ಕಾರ್ಯನಿರತರಾಗಿದ್ದು, ರಾಮ್ ಗೋಪಾಲ್ ವರ್ಮಾ ಅವರ ಬಹುಭಾಷ ಚಲನಚಿತ್ರ 'ಕಿಲ್ಲಿಂಗ್ ವಿರಪ್ಪನ್' ಗೆ ಸಹ ತಯ್ಯಾರಿ ನಡೆಸುತ್ತಿದ್ದಾರೆ.
Advertisement