
ಬೆಂಗಳೂರು: ಮುಂಗಾರು ಮಳೆ ಈಗಾಗಲೇ ಅಪ್ಪಳಿಸಿರುವುದರಿಂದ ಮುಂಗಾರು ಮಳೆ -೨ ಪ್ರಾರಂಭಿಸುವುದಕ್ಕೆ ಇದಕ್ಕಿಂತಲೂ ಉತ್ತಮ ಸಮಯವುಂಟೆ! ಚಲನಚಿತ್ರಕ್ಕೆ ಹಾಡುಗಳ ರೆಕಾರ್ಡ್ ಕಾರ್ಯಕ್ರಮದ ಮೂಲಕ ಶಶಾಂಕ್ ಚಲನಚಿತ್ರಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ. ಚಲನಚಿತ್ರದ ಸಂಗೀತಕ್ಕೆ ಅರ್ಜುನ್ ಜನ್ಯ ಅವರನ್ನು ತಮ್ಮ ತಂಡಕ್ಕೆ ನಿರ್ದೇಶಕರು ಸೇರಿಸಿಕೊಂಡಿದ್ದಾರೆ. ನಿರ್ಮಾಪಕ ಜಿ ಗಂಗಾಧರ್, ನಟ ಗಣೇಶ್, ನಿರ್ದೇಶಕ ಮತ್ತಿತರು ಅರ್ಜುನ್ ಜನ್ಯ ಅವರ ಸ್ಟುಡಿಯೋದಲ್ಲಿ ಶುಕ್ರವಾರ ಬೆಳಗ್ಗೆ ಸಣ್ಣ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದ್ದಾರೆ. ನಿರ್ದೇಶಕರ ಪ್ರಕಾರ ಚಿತ್ರದಲ್ಲಿ ಆರು ಹಾಡುಗಳು ಇರುತ್ತವಂತೆ. ಹಿಂದಿನ ಮುಂಗಾರು ಮಳೆಯ ಯಶಸ್ಸಿಗೂ ಪ್ರಮುಖ ಕಾರಣ ಮನೋಮೂರ್ತಿ ನೀಡಿದ್ದ ಸಂಗೀತ. ಇದು ಮರುಕಳಿಸಲಿ ಎಂಬುದು ಹಾರೈಕೆ.
ಈ ಚಲನಚಿತ್ರದಲ್ಲಿ ಖ್ಯಾತ ನಟ ರವಿಚಂದ್ರನ್ ಕೂಡ ನಟಿಸುವ ಸಾಧ್ಯತೆ ಇದೆ ಎನ್ನುತ್ತಾರೆ ಶಶಾಂಕ್. ಮೂಲಗಳ ಪ್ರಕಾರ ಈ ಸಿನೆಮಾದಲ್ಲಿ ಅವರು ಗಣೇಶ್ ಅವರ ತಂದೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ. "ನಾವು ಅವರ ಜೊತೆ ಮಾತುಕತೆ ನಡೆಸಿದ್ದೇವೆ. ಅವರು ನಮ್ಮ ಜೊತೆಗೆ ಬಂದರೆ ಬಹಳ ಸಂತೋಷವಾಗುತ್ತದೆ" ಎಂದಿದ್ದಾರೆ ಶಶಾಂಕ್. ಈ ಹಿಂದೆ ಮಾಣಿಕ್ಯ ಚಿತ್ರದಲ್ಲಿ ಸುದೀಪ್ ಅವರ ತಂದೆಯ ಪಾತ್ರವನ್ನು ರವಿಚಂದ್ರನ್ ನಿರ್ವಹಿಸಿದ್ದರು.
Advertisement