
ನವದೆಹಲಿ: ದೇಶದಲ್ಲಿ ಹಲವಾರು ಸೃಜನಶೀಲ ವ್ಯಕ್ತಿಗಳು ಪ್ರಶಸ್ತಿ ಹಿಂದಿರುಗಿಸುತ್ತಿರುವ ಹಿನ್ನಲೆಯಲ್ಲಿ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಕಲಾವಿದರ ಧ್ವನಿಯನ್ನು ಹತ್ತಿಕ್ಕುವ ಯಾವುದೇ ನಾಗರಿಕತೆ ದೊಡ್ಡ ಅಪಾಯದಲ್ಲಿರುತ್ತದೆ ಎಂದಿದ್ದಾರೆ.
ಕಳೆದ ಕೆಲವು ವಾರಗಳಿಂದ ದೇಶದಲ್ಲಿ ಹೆಚ್ಚುತ್ತಿರುವ ಅಸಹನೆಯನ್ನು ವಿರೋಧಿಸಿ ಹಲವಾರು ಲೇಖಕರು, ಸಿನೆಮಾ ನಿರ್ದೇಶಕರು, ಇತಿಹಾಸಕಾರರು ಹಾಗೂ ವಿಜ್ಞಾನಿಗಳು ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದಾರೆ.
"ವಿರೋಧಿ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ನನ್ನ ಪ್ರಕಾರ ಕಲಾವಿದರ, ಲೇಖಕರ ಧ್ವನಿ ಹತ್ತಿಕುವ ನಾಗರಿಕತೆ ಅಪಾಯದಲ್ಲಿರುತ್ತದೆ" ಎಂದು ಗ್ಯಾಂಗ್ಸ್ ಆಫ್ ವಸೀಪುರ್ ನಿರ್ದೇಶಕ ಹೇಳಿದ್ದಾರೆ.
"ಯಾವುದೇ ನಾಗರಿಕತೆಯ ಕರ್ತವ್ಯವೆಂದರೆ ಕಲಾವಿದರ ಧ್ವನಿಯನ್ನು ಉಳಿಸಬೇಕು... ಇಲ್ಲದೆ ಹೋದರೆ ಅದು ಜೀವಿಸಲು ಭಯಾನಕ ಪ್ರದೇಶವಾಗುತ್ತದೆ" ಎಂದು ಕೂಡ ತಿಳಿಸಿದ್ದಾರೆ.
ಪ್ರಶಸ್ತಿಗಳನ್ನು ಹಿಂದಿರುಗಿಸುವುದು ಪ್ರತಿಭಟನೆಯಲ್ಲಿ ಅತ್ಯುನ್ನತ ಮಾರ್ಗ ಎಂದಿರುವ ಕಶ್ಯಪ್ "ನಾವು ಒಪ್ಪುವುದಿಲ್ಲ ಮತ್ತು ನಾವು ಬೆಂಬಲಿಸುವುದಿಲ್ಲ ಎಂದು ಹೇಳುವುದಕ್ಕೆ ಬಹಳ ಧೈರ್ಯ ಬೇಕು. ಈ ರೀತಿಯ ಪ್ರತಿಭಟನೆ ನನಗೆ ಇಷ್ಟ" ಎಂದಿರುವ ಅವರು ಇದಕ್ಕೆ ಸರ್ಕಾರದ ಪ್ರತಿಕ್ರಿಯೆ "ಆತಂಕಕಾರಿ" ಎಂದಿದ್ದಾರೆ.
ದಾಧ್ರಿ ಘಟನೆಯಾಗಲಿ, ಎಫ್ ಟಿ ಐ ಐ ವಿವಾದವಾಗಲೀ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಯಾಗಲೀ "ನಮ್ಮ ಸುತ್ತ ನಡೆಯುತ್ತಿರುವ ಘಟನೆಗಳು ಆತಂಕಕಾರಿ" ಎಂದು ಕಶ್ಯಪ್ ಹೇಳಿದ್ದಾರೆ.
Advertisement