
ಬೆಂಗಳೂರು: 'ಲೂಸಿಯಾ' ನಿರ್ದೇಶಕ ಪವನ್ ಕುಮಾರ್ ಈ ಹಿಂದೆ 'ಸಿ೧೦ಎಚ್೧೪ಎನ್೨' (ನಿಕೋಟಿನ್) ಹೆಸರಿನ ಸಿನೆಮಾ ಮಾಡುವುದಾಗಿ ಘೋಷಿಸಿದ್ದರು. ಆದರೆ ಈಗ ಆ ಸಿನೆಮಾಗೆ ಅಗತ್ಯವಾದ ಬಜೆಟ್ ಹೊಂದಾಣಿಕೆಯಾಗದೆ ಹೋದದ್ದರಿಂದ 'ಯು-ಟರ್ನ್' ಎಂದ ಥ್ರಿಲ್ಲರ್ ಸಿನೆಮಾದ ಚಿತ್ರೀಕರಣವನ್ನು ಮಾಡಿ ಮುಗಿಸಿದ್ದಾರೆ.
'ಲೂಸಿಯಾ' ಸಿನೆಮಾಗೆ ಮಾಡಿದ್ದಂತೆಯೇ ಈ ಸಿನೆಮಾಗೂ ಜನರ ಹೂಡಿಕೆಗೆ (ಕ್ರೌಡ್ ಫಂಡಿಂಗ್) ಮೊರೆ ಹೋಗಿದ್ದಾರೆ. ಶ್ರದ್ಧಾ ಶ್ರೀನಾಥ್ ಎಂಬ ಹೊಸ ಪರಿಚಯ ಸಿನೆಮಾದಲ್ಲಿ ಮುಖ ಪಾತ್ರ ವಹಿಸಿದ್ದು ಪತ್ರಕರ್ತೆಯ ವೇಷ ತೊಟ್ಟಿದ್ದಾರೆ. ಅಲ್ಲದೆ ದಿಲೀಪ್ ರಾಜ್, ರೋಜರ್ ನಾರಾಯಣ್ ಮತ್ತು ರಾಧಿಕಾ ಚೇತನ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಬಹುತೇಕ ಚಿತ್ರೀಕರಣ 'ಇಂಡಿಯನ್ ಎಕ್ಸ್ಪ್ರೆಸ್ಸ್' ಸಂಸ್ಥೆಯಲ್ಲಿ ಜರುಗಿದ್ದು ಚಿತ್ರೀಕರಣ ನಂತರದ ಕೆಲಸಗಳಲ್ಲಿ ಪವನ್ ನಿರತರಾಗಿದ್ದಾರೆ. "ಯು-ಟರ್ನ್ ಕಥೆ ಹೊಳೆದದ್ದು ಜುಲೈನಲ್ಲಿ. ನನ್ನ ಮಗಳು ಲೂಸಿಯನ್ನು ತೀವ್ರ ವಾಹನದಟ್ಟನೆ ಇರುವಾಗ ಶಾಲೆಗೆ ಬಿಡಲು ಹೋಗಿದ್ದೆ. ಆಗ ಈ ಕಥೆ ಹೊಳೆಯಿತು. ೨-೩ ದಿನಗಳಲ್ಲಿ ಚಿತ್ರಕಥೆ ಸಿದ್ಧಪಡಿಸಿದೆ ಮತ್ತು ನಿಕೋಟಿನ್ ನನ್ನು ಪಕ್ಕಕ್ಕೆ ಸರಿಸಿದೆ" ಎನ್ನುತ್ತಾರೆ ಪವನ್.
"ನಿಕೋಟಿನ್ ನಿಂದ ಯು ಟರ್ನ್ ಹೊಡೆದಿದ್ದೇಕೆ ಎಂದರೆ "ನಿಕೋಟಿನ್ ಗೆ ಸ್ಕ್ರಿಪ್ಟ್ ಬರೆದಿದ್ದೆ ಮತ್ತು ಹಲವಾರು ಬಾರಿ ತಿದ್ದಿದ್ದು ಆಯಿತು. ಆದರೆ ಕಳೆದ ವರ್ಷ ಇದಕ್ಕೆ ಕ್ರೌಡ್ ಫಂಡಿಂಗ್ ಮಾಡಲು ಪ್ರಯತ್ನಿಸಿದ್ದೆ. ಯಶಸ್ವಿಯಾಗಲಿಲ್ಲ. ಇದ್ದ ಹಣದಿಂದ ಶೂಟಿಂಗ್ ಸಾಧ್ಯವಿರಲಿಲ್ಲ. ಸಹ ನಿರ್ಮಾಪಕನಿಗೂ ಹುಡುಕಾಡುತ್ತಿದ್ದೆ. ಈ ವಿಷಯ ತೆಲುಗು ತಮಿಳು ಚಿತ್ರರಂಗಕ್ಕೂ ಹೋಯಿತು ಕೆಲವರು ಆಸಕ್ತಿ ತೋರಿದ್ದರಾದರೂ ಯಾವುದೂ ಮುಂದುವರೆಯಲಿಲ್ಲ. ಇದು ತಂಬಾಕು ಉದ್ದಿಮೆಯ ಬಗ್ಗೆ ಕಥೆಯಾದ್ದರಿಂದ ಹಲವರು ಹೆದರಿದರು" ಎನ್ನುತ್ತಾರೆ ನಿರ್ದೇಶಕ.
ನಿಕೋಟಿನ್ ಮುಂದಿನ ವರ್ಷಕ್ಕೆ ನನಸಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಪವನ್.
Advertisement