
ತಮ್ಮ ಬಹುನಿರೀಕ್ಷಿತ ಚಿತ್ರವಾಗಿದ್ದ ಉಪ್ಪಿ2 ಚಿತ್ರದಲ್ಲಿ ಧ್ಯಾನ ಮಾಡುತ್ತಿದ್ದ ರಿಯಲ್ ಸ್ಟಾರ್ ಉಪೇಂದ್ರ, ಇತ್ತೀಚೆಗಷ್ಟೇ ಉಪ್ಪಿ 2 ಚಿತ್ರದ ಪ್ರಚಾರಕ್ಕಾಗಿ ಅಮೆರಿಕಾಗೆ ತೆರಳಿದ್ದರು. ಇದೀಗ ಉಪ್ಪಿ2 ಧ್ಯಾನದಿಂದ ಹೊರಬಂದಿರುವ ಉಪೇಂದ್ರ ಅವರು ಕಲ್ಪನಾ2 ಚಿತ್ರದತ್ತ ತಮ್ಮ ಚಿತ್ತ ಹರಿಸಲು ತಯಾರಾಗಿದ್ದಾರೆ.
ಕಲ್ಪನಾ 2 ಚಿತ್ರವನ್ನು ಅನಂತರಾಜು ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ಮೊದಲ ಬಾರಿಗೆ ಉಪೇಂದ್ರ ಹಾಗೂ ಪ್ರಿಯಾಮಣಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮೂಲಗಳ ಪ್ರಕಾರ ಕಲ್ಪನಾ-2 ಚಿತ್ರದ ನಾಯಕಿ ಪಾತ್ರಕ್ಕೆ ನಟಿ ಪ್ರಿಯಾ ಮಣಿರನ್ನ ಚಿತ್ರದ ತಂಡ ಸಂಪರ್ಕಿಸಿದ್ದು, ಚಿತ್ರದ ಕುರಿತಂತೆ ಮಾತುಕತೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ಬಗ್ಗೆ ಪ್ರಿಯಾಮಣಿ ಸಹ ಆಸಕ್ತಿ ತೋರಿಸಿದ್ದು, ಅಧಿಕೃತವಾಗಿ ಒಪ್ಪಿಗೆ ನೀಡಿಲ್ಲ ಎಂದು ತಿಳಿದುಬಂದಿದೆ.
`ಕಲ್ಪನಾ-2' ಚಿತ್ರವು ತಮಿಳಿನ `ಕಾಂಚನ-2' ಚಿತ್ರದ ರೀಮೇಕ್ ಆಗಿರಲಿದೆ. ಇದಕ್ಕೂ ಮುನ್ನ ರಾಘವ ಲಾರೆನ್ಸ್ ಅಭಿನಯದ ತಮಿಳಿನ`ಕಾಂಚನ' ಚಿತ್ರ ಕನ್ನಡದಲ್ಲಿ ರೀಮೇಕ್ ಆಗಿತ್ತು. ಚಿತ್ರದಲ್ಲಿ ಉಪೇಂದ್ರ ಅಭಿನಯಿಸಿದ್ದರು. ಈಗ ಅದರ ಮುಂದುವರೆದ ಭಾಗದಲ್ಲೂ ಉಪೇಂದ್ರ ಅವರು ನಟಿಸುತ್ತಿರುವುದು ವಿಶೇಷವಾಗಿದೆ.
ಈ ಹಿಂದೆ ಕಲ್ಪನಾ-2 ಚಿತ್ರದ ನಾಯಕಿ ಪಾತ್ರಕ್ಕೆ ರಾಧಿಕಾ ಪಂಡಿತ್ ಬರಲಿದ್ದಾರೆಂಬ ಮಾತುಗಳು ಕೇಳಿಬಂದಿದ್ದವು. ಕಲ್ಪನಾ-2 ಚಿತ್ರದ ನಾಯಕಿಯಾಗಿ ಅಭಿನಯಿಸುವ ಆಫರ್ ನ್ನು ಚಿತ್ರದ ತಂಡ ರಾಧಿಕಾ ಪಂಡಿತ್ ಅವರಿಗೆ ನೀಡಿದ್ದು, ಈ ಆಫರ್ ನ್ನು ರಾಧಿಕಾ ಪಂಡಿತ್ ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದೀಗ ಕಲ್ಪನಾ-2 ಚಿತ್ರದ ನಾಯಕಿ ಪಾತ್ರಕ್ಕೆ ಹುಡುಕಾಟ ನಡೆಸಿರುವ ಚಿತ್ರದ ತಂಡ ನವೆಂಬರ್ ಕೊನೆಯಲ್ಲಿ ಪಾತ್ರಗಳ ಕುರಿತಂತೆ ಅಧಿಕೃತ ಮಾಹಿತಿ ನೀಡಲಿದೆ ಎಂದು ತಿಳಿದುಬಂದಿದೆ.
Advertisement