ಮತ್ತೆ ಖಾಕಿ ತೊಟ್ಟ ಕ್ರೇಜಿ ಸ್ಟಾರ್
ಬೆಂಗಳೂರು: ಮತ್ತೆ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ ಪೊಲೀಸ್ ಧಿರಿಸು ಕೂಡ ತೊಡಲಿದ್ದಾರೆ. ಮುಂದಿನ ಸಿನೆಮಾ 'ಲಕ್ಷ್ಮಣ'ದಲ್ಲಿ ನಟ ಅಪ್ಪನಾಗಿ ಕಾಣಿಸಿಕೊಳ್ಳಲ್ಲಿದ್ದಾರೆ.
ಕ್ರೇಜಿಸ್ಟಾರ ಮೊದಲ ಬಾರಿಗೆ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು 'ಮಾಣಿಕ್ಯ' ಸಿನೆಮಾದಲ್ಲಿ, ಸುದೀಪ್ ಅವರ ಅಪ್ಪನಾಗಿ. ನಂತರ ಮಲಯಾಳಮ್ ರಿಮೇಕ್ ಸಿನೆಮಾ 'ದೃಷ್ಯ'ದಲ್ಲಿ ಜವಾಬ್ದಾರಿಯುತ ಅಪ್ಪನಾಗಿಯು ನಾಯಕನಟನಾಗಿಯೂ ಕಾಣಿಸಿಕೊಂಡಿದ್ದರು. 'ಲಕ್ಷ್ಮಣ'ನಿಗೆ ಸಹಿ ಮಾಡುವುದಕ್ಕೆ ಮುಂಚಿತವಾಗಿ ಗಣೇಶ್ ಅಭಿನಯದ 'ಮುಂಗಾರು ಮಳೆ-೨' ರಲ್ಲಿ ಕೂಡ ಅಪ್ಪನಾಗಿ ಕಾಣಿಸಿಕೊಳ್ಳಲು ಒಪ್ಪಿಕೊಂಡಿದ್ದರು.
ಕನ್ನಡದಲ್ಲಿ ದಂಡಿ ದಂಡಿಯಾಗಿ ರೋಮ್ಯಾನ್ಸ್ ಸಿನೆಮಾಗಳನ್ನು ನೀಡಿ, ರೊಮ್ಯಾಂಟಿಕ್ ಹೀರೋ ಎಂದೇ ಹೆಸರಾಗಿದ್ದ ನಟ ಈಗ ಸ್ಯಾಂಡಲ್ ವುಡ್ ನ ಅಪ್ಪನಾಗಿ ಭಡ್ತಿ ಹೊಂದಿದ್ದಾರೆ. ಈ ಹಿಂದೆ 'ಅಭಿಮನ್ಯು' ಮತ್ತು 'ಚಿನ್ನ' ಸಿನೆಮಾಗಳಲ್ಲೂ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು.
ಒಂದು ಕಾಲದಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲು ಹಿಂಜರಿಯುತ್ತಿದ್ದ ರವಿಚಂದ್ರನ್ ಈಗ ಕಿರುತೆರೆಯ ಕಾರ್ಯಕ್ರಮಗಳಲ್ಲೂ ಹೀರೋ. ಇತ್ತೀಚೆಗಷ್ಟೆ ಟಿ ವಿ ವಾಹಿನಿಯ ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದರು, ಈಗ ಡ್ಯಾನ್ಸಿಂಗ್ ಸ್ಟಾರ್ ಜೂನಿಯರ್ ಕಾರ್ಯಕ್ರಮದಲ್ಲಿ ಅದೇ ಕಾಯಕವನ್ನು ಮುಂದುವರೆಸಿದ್ದಾರೆ. ಜೊತೆಜೊತೆಗೆ 'ಲಕ್ಷ್ಮಣ'ನ ಚಿತ್ರೀಕರಣದಲ್ಲೂ ನಿರತರಾಗಿದ್ದಾರೆ. ಆರ್ ಚಂದ್ರು ನಿರ್ದೇಶನದ ಸಿನೆಮಾದಲ್ಲಿ ರಾಜಕಾರಿಣಿ ಎಚ್ ಎಂ ರೇವಣ್ಣ ಅವರ ಪುತ್ರ ಅನೂಪ್ ಸಿನೆಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಮೇಘನಾ ರಾಜ್ ನಾಯಕ ನಟಿ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ