
ನವದೆಹಲಿ: ಫಿಲ್ಮ್ ಅಂಡ್ ಟೆಲಿವಿಶನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಗಜೇಂದ್ರ ಚೌಹಾನ್ ಅವರನ್ನು ನೇಮಿಸಿರುವ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿರುವ ಸಂಸ್ಥೆಯ ವಿದ್ಯಾರ್ಥಿ ಸಮೂಹ ಈಗ ಉಪಾವಾಸ ಸತ್ಯಾಗ್ರಹ ಕೂಡ ನಡೆಸುತ್ತಿದ್ದು ಈ ಜಟಾಪಟಿ ಶೀಘ್ರ ಬಗೆಹರಿಯುವಂತೆ ಕಾಣುತ್ತಿಲ್ಲ. ಬಿಜೆಪಿ ಸದಸ್ಯ ಮತ್ತು ನಟ ಗಜೇಂದ್ರ ಚೌಹಾನ್ ಅವರು ವಿದ್ಯಾರ್ಥಿಗಳು ಪರಿಹಾರಕ್ಕೆ ಉಪವಾಸ ಸತ್ಯಾಗ್ರಹ ಕೈಬಿಟ್ಟು ಮಾತುಕತೆಗೆ ಮುಂದಾಗಬೇಕೆಂದು ಕರೆ ನೀಡಿದ್ದಾರೆ.
ಎಫ್ ಟಿ ಐ ಐ ವಿದ್ಯಾರ್ಥಿಗಳ ಪ್ರತಿಭಟನೆ ೯೫ನೆ ದಿನಕ್ಕೆ ಕಾಲಿಟ್ಟಿದೆ. ಸೆಪ್ಟಂಬರ್ ೧೦ ರಿಂದ ಈ ಪುಣೆ ಮೂಲದ ಸಂಸ್ಥೆಯ ವಿದ್ಯಾರ್ಥಿಗಳು ಉಪಾವಾಸ ಸತ್ಯಾಗ್ರಹ ನಡೆಸಿದ್ದಾರೆ.
"ಉಪವಾಸ ಸತ್ಯಾಗ್ರಹ ಪರಿಹಾರವಲ್ಲ. ಸಚಿವಾಲಯದ ಜೊತೆ ಕೂತು ಚರ್ಚಿಸುವಂತೆ ನಾನು ಮನವಿ ಮಾಡುತ್ತೇನೆ. ಆಗಷ್ಟೇ ಇದಕ್ಕೆ ಪರಿಹಾರ ಸಾಧ್ಯ" ಎಂದು ಚೌಹಾನ್ ತಿಳಿಸಿದ್ದಾರೆ.
ಬಿ ಆರ್ ಛೋಪ್ರಾ ನಿರ್ದೇಶನದ ಮಹಾಭಾರತದಲ್ಲಿ 'ಯುಧಿಷ್ಠಿರ'ನ ಪಾತ್ರ ವಹಿಸಿದ್ದ ಚೌಹಾನ್ ಭಾಗಬನ್ ನಂತಹ ಚಲನಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. "ಇದಕ್ಕೆ ಪರಿಹಾರ ಕಂಡುಹಿಡಿಯಲು ವಿದ್ಯಾರ್ಥಿಗಳ ಜೊತೆಗೆ ಚರ್ಚಿಸಲು ನಾನು ಸಿದ್ಧನಿದ್ದೇನೆ" ಎಂದು ಅವರು ತಿಳಿಸಿದ್ದಾರೆ.
ಚೌಹಾನ್ ಅವರ ನೇಮಕ ರಾಜಕೀಯ ನಡೆ, ಸಂಸ್ಥೆಯನ್ನು ಮುನ್ನಡೆಸುವ ಛಾತಿ
ಅವರಲ್ಲಿಲ್ಲ ಎಂದು ದೂರಿರುವ ವಿದ್ಯಾರ್ಥಿ ಸಮೂಹ, ಇತರ ೧೯೦ಕ್ಕು ಹೆಚ್ಚು ಸಿನೆಮಾ ಗಣ್ಯರ ಒಡಗೂಡಿ ಮಧ್ಯಸ್ಥಿಕೆ ವಹಿಸುವಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಮನವಿ ಮಾಡಿದೆ.
Advertisement