
'ಪ್ರೇಮಗಾಮಿ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ಅವರಿಗೆ ಆ ಚಿತ್ರ ಕೈ ಹಿಡಿಯಲಿಲ್ಲ. ಆರ್ಥಿಕ ತೊಂದರೆಯಿಂದ 'ಪ್ರೇಮಗಾಮಿ' ತೆರೆಗೆ ಬರಲೇ ಇಲ್ಲ. ಆದರೆ ತಮ್ಮ ಪ್ರಯತ್ನವನ್ನು ಮುಂದುವರೆಸಿರುವ ಶ್ರೀನಿವಾಸ್ ಅವರು, ಇದೀಗ ಮತ್ತೊಂದು ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡುವ ಮೂಲ ಗಾಂಧಿನಗರದಲ್ಲಿ ನೆಲೆ ಕಂಡುಕೊಳ್ಳುವ ಯತ್ನ ನಡೆಸಿದ್ದಾರೆ.
ಶ್ರೀನಿವಾಸ್ ಅವರ ನೂತನ ಚಿತ್ರದ ಹೆಸರು 'ಬತಾಸ್'. ಈ ಚಿತ್ರದಲ್ಲಿ ಚೇತನ್ ಗಂದರ್ವ ಹಾಗೂ ಪವಿತ್ರಾ ಗೌಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ರವಿ ಕಾಳೆ ಕಳನಾಯಕನಾಗಿದ್ದಾರೆ. ಇನ್ನು ಪ್ರಮುಖ ಪಾತ್ರವೊಂದಕ್ಕಾಗಿ ಚಿತ್ರ ತಂಡ ಮಹೇಶ್ ಮಂಜ್ರೆಕರ್ ಅವರನ್ನು ಸಂಪರ್ಕಿಸಿದೆ.
‘ಇದು ಸಾವಿನ ಮನೆಗಳಲ್ಲಿ ಬ್ಯಾಂಡ್ ನುಡಿಸುವ ಒಬ್ಬ ಸಿಂಗರ್‌ನ ಕಥೆ. ನನ್ನ ಸಿನಿಮಾದ ನಾಯಕ ಹಾಡುಗಾರ. ಸ್ಲಂನಲ್ಲಿ ಒಬ್ಬ ಡಾನ್. ಆತ ಪ್ರೀತಿಸಿ ಮದುವೆಯಾಗಿರುತ್ತಾನೆ. ಡಾನ್‌ನ ಹೆಂಡತಿ ಸಾಯುತ್ತಾಳೆ. ಅಲ್ಲಿಗೆ ಹಾಡಲು ಬರುವ ನಾಯಕ, ಆತನ ಮಗಳನ್ನು ಪ್ರೀತಿಸುತ್ತಾನೆ. ಸಾವಿನ ಮನೆಯಲ್ಲಿ ಹುಟ್ಟಿದ ಪ್ರೀತಿ ಈ ಪ್ರೇಮಿಗಳನ್ನು ಸಾವಿನ ಮನೆಗೆ ಕರೆದುಕೊಂಡು ಹೋಗುತ್ತದೆಯೋ ಇಲ್ಲವೇ ಎನ್ನುವುದು ಕಥೆಯ ತಿರುಳು’ ಎಂದು ಶ್ರೀನಿವಾಸ್ ಹೇಳಿದ್ದಾರೆ.
ಚಿಕ್ಕಮಗಳೂರು ಸೇರಿದಂತೆ ಇತರೆ ಗ್ರಾಮೀಣ ಪ್ರದೇಶದಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದ್ದು, ಅಕ್ಟೋಬರ್ ಅಂತ್ಯಕ್ಕೆ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
Advertisement