
ಬೆಂಗಳೂರು: ೨೧ ವರ್ಷದ ಊರ್ವಶಿ ರೌಟೇಲಾ ಸುದ್ದಿಯಲ್ಲಿದ್ದಾರೆ. ಟಿ ಸೀರೀಸ್ ಜೊತೆ ಈಗಾಗಲೇ ೩ ಚಿತ್ರಗಳಿಗೆ ಅವಕಾಶ ಪಡೆದಿರುವ ರೌಟೇಲಾ, ಸದ್ಯಕ್ಕೆ 'ಸನಮ್ ರೇ' ನಲ್ಲಿ ಕೆಲಸ ಮಾಡುತ್ತಿದ್ದಾರೆ ಅಲ್ಲದೆ 'ಗ್ರೇಟ್ ಗ್ರ್ಯಾಂಡ್ ಮಸ್ತಿ'ಯಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ. ಅವರ ಮೊದಲ ದಕ್ಷಿಣ ಭಾರತದ ಸಿನೆಮ 'ಮಿ. ಐರಾವತ'. ದರ್ಶನ್ ಜೊತೆ ನಟಿಸಿರುವ ಈ ಚಿತ್ರ ಶುಕ್ರವಾರ ಬಿಡುಗಡೆಯಾಗಲಿದೆ.
ನಟಿಯೇ ಹೇಳುವಂತೆ ಸಿನೆಮಾದ ಸೆಟ್ ಗೆ ಹೋದ ಮೊದಲ ದಿನದಿಂದಲೂ ದರ್ಶನ್ ಅವರ ಜನಪ್ರಿಯತೆ ನೋಡುತ್ತಿದ್ದಂತೆ ಸ್ಕ್ರಿಪ್ಟ್ ನಲ್ಲಿದ್ದ ನಂಬಿಕೆ ಹೆಚ್ಚಿತಂತೆ. "ಜನರ ಗುಂಪು ನಮ್ಮನ್ನು ಹಿಂಬಾಲಿಸುತ್ತಿದ್ದ ರೀತಿ ನೋಡಲು ಅದ್ಭುತ ಎನಿಸುತ್ತಿತ್ತು ಮತ್ತು ದರ್ಶನ್ ಅವರ ವ್ಯಕ್ತಿತ್ವದಿಂದಾಗಿ ನನ್ನ ಅನುಭವ ಹೆಚ್ಚಾಯಿತು. ಅಲ್ಲದೆ ನಿರ್ಮಾಪಕ, ನಿರ್ದೇಶಕ ಹಾಗು ಇತರ ತಾಂತ್ರಿಕ ವರ್ಗ ಕೂಡ ನನ್ನನ್ನು ಚೆನ್ನಾಗಿ ನೋಡಿಕೊಂಡರು" ಎನ್ನುತ್ತಾರೆ ಊರ್ವಶಿ.
ಬಾಲಿವುಡ್ ನಲ್ಲೂ ಜನಪ್ರಿಯವಾಗಿರುವ ನಟಿಗೆ ಕನ್ನಡದಲ್ಲೂ ಹಲವಾರು ಅವಕಾಶಗಳು ಬಂದಿವೆಯಂತೆ. "ನನಗೆ ಕನ್ನಡದಲ್ಲಿ ಹಲವಾರು ಅವಕಾಶಗಳು ಒದಗಿ ಬಂದಿವೆ, ಆದರೆ ನನ್ನ ಒಪ್ಪಂದದ ಪ್ರಕಾರ ಐರಾವತ ಬಿಡುಗಡೆಯಾಗುವವರೆಗೂ ಬೇರೆ ಯಾವ ಚಿತ್ರಕ್ಕೂ ಸಹಿ ಹಾಕುವ ಹಾಗಿಲ್ಲ" ಎನ್ನುತ್ತಾರೆ.
Advertisement