
'ಮಿಸ್ಟರ್ ಅಂಡ್ ಮಿಸೆಸ್ ರಾಮಚಾರಿ' ಯಶಸ್ಸಿನ ನಂತರ ಈ ವರ್ಷಾಂತ್ಯಕ್ಕೆ ತೆರೆಗೆ ಬರುತ್ತಿರುವ ಯಶ್ ಅವರ 'ಮಾಸ್ಟರ್‌ಪೀಸ್' ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.
ಮಂಜು ಮಾಂಡವ್ಯ ನಿರ್ದೇಶಿಸುತ್ತಿರುವ ಮಾಸ್ಟರ್‌ಪೀಸ್ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಭರದಿಂದ ಸಾಗುತ್ತಿದೆ. ಭಗತ್ ಸಿಂಗ್‌ಗೆ ಸಂಬಂಧಿಸಿದ ಹಲವು ದೃಶ್ಯಗಳನ್ನು ಮತ್ತು ಸ್ವಾತಂತ್ರ್ಯ ಹೋರಾಟಗಾರನ ಜನ್ಮ ದಿನವಾದ ಸೆಪ್ಟೆಂಬರ್ 28ರಂದೇ ಚಿತ್ರೀಕರಣ ಮಾಡಿರುವುದು ತೀವ್ರ ಕುತೂಹಲ ಮೂಡಿಸಿದೆ.
'ಅದು ಪೂರ್ವ ನಿಯೋಜಿತವಲ್ಲ. ನಾವು ಚಿತ್ರೀಕರಣದಲ್ಲಿ ತೊಡಗಿದ್ದೇವೆ. ಈ ವೇಳೆ ಕಲವು ವಿದ್ಯಾರ್ಥಿಗಳು ಸೆಟ್‌ಗೆ ಆಗಮಿಸಿದಾಗ ದೇಶಭಕ್ತಿಯ ದೃಶ್ಯಗಳು ಇರಲಿ ಅಂತ ಅವರ ಜನ್ಮದಿನದಂದು ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಯಿತು' ಎಂದು ನಿರ್ದೇಶಕ ಮಂಜು ತಿಳಿಸಿದ್ದಾರೆ.
ಒಂದು ತಂಡವಾಗಿ ಯಶ್, ನಿರ್ಮಾಪಕರು ಹಾಗೂ ತಂತ್ರಜ್ಞರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ ಒಳ್ಳೆಯ ಚಿತ್ರ ಮಾಡಲು ನಾವು ಇನ್ನೂ ಸಾಕಷ್ಟು ಕೆಲಸ ಮಾಡಬೇಕಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಮಾಸ್ಟರ್‌ಪೀಸ್ ಚಿತ್ರದ ಟೀಸರ್ ನೋಡಿದ್ರೆ, ಇದೊಂದು ದೇಶಭಕ್ತಿ ಸಿನಿಮಾ ಅನ್ನುವುದು ಮೊದಲ ನೋಟದಲ್ಲಿ ಖಾತ್ರಿಯಾಗುತ್ತೆ. ಆದರೆ ಇದು ಭಗತ್ ಸಿಂಗ್‌ರ 'ಮಾಸ್ಟರ್‌ಪೀಸ್' ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ.
ಪುನೀತ್ ರಾಜ್ ಕುಮಾರ್ ಗಾಗಿ 'ನಿನ್ನಿಂದಲೇ' ಚಿತ್ರಕ್ಕೆ 'ಹೊಂಬಾಳೆ ಫಿಲ್ಮ್ಸ್'ನಡಿ ಬಂಡವಾಳ ಹಾಕಿದ್ದ ವಿಜಯ್ ಕರಗಂದೂರ್ 'ಮಾಸ್ಟರ್ ಪೀಸ್'ನ ರಿಚ್ಚಾಗಿ ನಿರ್ಮಾಣ ಮಾಡುತ್ತಿದ್ದಾರೆ.
Advertisement